ಕಾಂಗ್ರೆಸ್ ಪಕ್ಷ ರಿಮೋಟ್ ಕಂಟ್ರೋಲ್‌ನಲ್ಲಿದೆ...ಗುಲಾಂ ನಬಿ ರಾಜೀನಾಮೆ ಪತ್ರದ 'ಆಜಾದ್' ಮಾತು!
ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಆಜಾದ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ಪತ್ರವನ್ನು ಕಳುಹಿಸಿದ್ದಾರೆ. ಇದರಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಿಂದ ಹೊರಹೋಗುವವರೆಗಿನ ಪಯಣದ ಬಗ್ಗೆ ಹೇಳಿದ್ದಾರೆ. ಇದರೊಂದಿಗೆ ಈಗಿನ ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ನವದೆಹಲಿ (ಆ.26): ರಾಷ್ಟ್ರ ರಾಜಕಾರಣದಲ್ಲಿ ಮೇಲೇಳುವ ಗುರಿಯಲ್ಲಿ ದೊಡ್ಡ ಮಟ್ಟದ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬೆನ್ನು ಬೆನ್ನಿಗೆ ಪೆಟ್ಟುಗಳು ಬೀಳುತ್ತಿವೆ. ಪಕ್ಷದ ಪ್ರಮುಖ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಹಿಮಾಂತ ಬಿಸ್ವಾ ಶರ್ಮ, ಹಾರ್ದಿಕ್ ಪಟೇಲ್, ಕಪಿಲ್ ಸಿಬಲ್ ಬಳಿಕ ಮತ್ತೊಬ್ಬ ಪ್ರಮುಖ ಮುಖಂಡ, 45 ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದ ಗುಲಾಂ ನಬಿ ಆಜಾದ್ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಐದು ಪುಟಗಳ ರಾಜೀನಾಮೆ ಪತ್ರವನ್ನು ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ್ದು, ಇದರಲ್ಲಿ ಇಂದು ಕಾಂಗ್ರೆಸ್ ಪಕ್ಷ ಈ ಸ್ಥಿತಿಯಲ್ಲಿರುವ ಕಾರಣ ರಾಹುಲ್ ಗಾಂದಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ದಿನದಿಂದ ಹೊರಬೀಳುವವರೆಗಿನ ಪಯಣದ ಬಗ್ಗೆ ಇದರಲ್ಲಿ ವಿಸ್ತ್ರತವಾಗಿ ಬರೆದಿದ್ದಾರೆ. ರಾಹುಲ್ ಗಾಂಧಿ ರಾಜಕೀಯಕ್ಕೆ ಪ್ರವೇಶ ಪಡೆದ ದಿನದಿಂದ ಅಥವಾ 2013ರ ಜನವರಿಯಲ್ಲಿ ಅವರನ್ನು ನೀವು ಉಪಾಧ್ಯಕ್ಷರಾಗಿ ನೇಮಕ ಮಾಡಿದ ದಿನದಿಂದ, ಈ ಹಿಂದೆ ಪಕ್ಷದಲ್ಲಿದ್ದ ಸಂಪೂರ್ಣ ಸಲಹಾ ವಿಧಾನವನ್ನು ಕೆಡವಿ ಹಾಕಲಾಯಿತು ಎಂದು ಗುಲಾಂ ನಬಿ ಅಜಾದ್ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದು, ಇಂದಿನ ಎಲ್ಲಾ ಸ್ಥಿತಿಗೆ ರಾಹುಲ್ ಗಾಂಧಿ ಹಾಗೂ ಅವರ ಚಿಕ್ಕಮಕ್ಕಳಂಥ ವರ್ತನೆಯೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಗುಲಾಂ ನಬಿ ಅಜಾದ್ ಅವರ ರಾಜೀನಾಮೆ ಪತ್ರದಲ್ಲಿನ ಸ್ಪೋಟಕ ಅಂಶಗಳು..
ರಾಹುಲ್ ಅನನುಭವಿಗಳ ಮಾತು ಕೇಳ್ತಾರೆ: ಗುಲಾಂ ನಬಿ ಆಜಾದ್ ತಮ್ಮ ಪತ್ರದಲ್ಲಿ ರಾಹುಲ್ ಗಾಂಧಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಹುಲ್ ತಮ್ಮ ಸುತ್ತ ಅನನುಭವಿ ಜನರನ್ನು ಇಟ್ಟುಕೊಂಡು ಹಿರಿಯ ನಾಯಕರನ್ನು ಬದಿಗೊತ್ತುತ್ತಾರೆ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆಯೂ ರಾಹುಲ್ ಗಾಂಧಿ ಅರೆಕಾಲಿಕ ರಾಜಕಾರಣಿ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆಯೂ ಹಾರ್ದಿಕ್ ಪಟೇಲ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರು ಸಮಯ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.
ಇಚ್ಛಾಶಕ್ತಿ ಹಾಗೂ ಸಾಮರ್ಥ್ಯ ಕಳೆದುಕೊಂಡಿರುವ ಕಾರ್ಯಕಾರಿ ಸಮಿತಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ನಡೆಸುತ್ತಿರುವ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಇಚ್ಛಾಶಕ್ತಿ ಮತ್ತು ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದು ಗುಲಾಂ ನಬಿ ಆಜಾದ್ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಜೋಡೋ ಯಾತ್ರಾ ಬೇಕು: ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆ ಆರಂಭಿಸಿದ ಬಗ್ಗೆ ಬರೆದಿರುವ ಆಜಾದ್, 'ಭಾರತ್ ಜೋಡೋ ಯಾತ್ರೆ' ಪ್ರಾರಂಭಿಸುವ ಮೊದಲು ಪಕ್ಷದ ನಾಯಕತ್ವವು 'ಕಾಂಗ್ರೆಸ್ ಜೋಡೋ ಯಾತ್ರೆ' ಮಾಡಬೇಕಿತ್ತು ಎಂದು ಬರೆದಿದ್ದಾರೆ.
ಪ್ರಧಾನಿಯ ಸುಗ್ರೀವಾಜ್ಞೆ ಹರಿದಿದ್ದು ಅವರ ಬಾಲಿಶ ವರ್ತನೆ: ದುರದೃಷ್ಟವಶಾತ್, ರಾಹುಲ್ ಗಾಂಧಿಯವರ ರಾಜಕೀಯ ಪ್ರವೇಶದ ನಂತರ, ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿದಾಗ, ಅವರು ಕಾಂಗ್ರೆಸ್ ಕೆಲಸ ಮಾಡುವ ಮಾರ್ಗವನ್ನು ಮುಕ್ತಾಯ ಮಾಡಿದರು. ಅವರು ಇಡೀ ಸಲಹಾ ವ್ಯವಸ್ಥೆಯನ್ನು ನಾಶಪಡಿಸಿದರು. ಇದರೊಂದಿಗೆ ಪ್ರಧಾನಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ರಾಹುಲ್ ಹರಿದು ಹಾಕಿರುವುದು ಅವರ ಬಾಲಿಶ ವರ್ತನೆಯನ್ನು ತೋರಿಸುತ್ತದೆ. ಇದು 2014ರಲ್ಲಿ ಪಕ್ಷದ ಸೋಲಿಗೆ ಕಾರಣವಾಯಿತು.
ಕಾಂಗ್ರೆಸ್‌ನಲ್ಲೀಗ ಚುನಾವಣೆಯೇ ಇಲ್ಲ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ಗುಲಾಂ ನಬಿ ಆಜಾದ್ ಗಾಂಧಿ ಕುಟುಂಬವನ್ನು ಗುರಿಯಾಗಿಸಿದ್ದಾರೆ. ಯಾವುದೇ ಮಟ್ಟದಲ್ಲಿ ಸಂಘಟನೆಯಲ್ಲಿ ಎಲ್ಲಿಯೂ ಚುನಾವಣೆ ನಡೆದಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ಹಿರಿಯ ನಾಯಕರಿಗೆ ಅವಮಾನ: ಇದರೊಂದಿಗೆ ಆಜಾದ್ ತಮ್ಮ ಪತ್ರದಲ್ಲಿ ಜಿ-23 ವಿಷಯದ ಬಗ್ಗೆಯೂ ಬರೆದಿದ್ದಾರೆ. ಜಿ-23ರ ನಾಯಕರು ಕಾಂಗ್ರೆಸ್‌ನ ದೌರ್ಬಲ್ಯಗಳನ್ನು ಹೇಳಿದಾಗ, ಆ ನಾಯಕರಿಗೆ ಅವಮಾನ ಮಾಡಲಾಯಿತು ಎಂದು ಅವರು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತೊರೆದ ಹಿರಿಯ ನಾಯಕ ಗುಲಾಂ ನಬಿ ಅಜಾದ್!
ಚರ್ಚೆಯ ಸಂಪ್ರದಾಯವೇ ಈಗ ಪಕ್ಷದಲ್ಲಿಲ್ಲ: ಆಜಾದ್ ತಮ್ಮ ಪತ್ರದಲ್ಲಿ ರಾಹುಲ್ ಆಗಮನದೊಂದಿಗೆ ಚರ್ಚೆಯ ಸಂಪ್ರದಾಯವನ್ನು ಕೊನೆಗೊಳಿಸಿದ್ದಾರೆ. ಇದರೊಂದಿಗೆ 2019ರ ಸೋಲಿನ ನಂತರ ಪಕ್ಷದ ಸ್ಥಿತಿ ಹದಗೆಟ್ಟಿದೆ ಎಂದ ಅವರು, ರಾಹುಲ್ ಗಾಂಧಿ ಸಿಟ್ಟಿಗೆದ್ದು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ನಂತರ ಸಿಡಬ್ಲ್ಯುಸಿಯಿಂದ ನಿಮ್ಮನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿದರೂ ಈವರೆಗೂ ನೀವು ಕೆಲಸ ಮಾಡುತ್ತಿದ್ದೀರಿ. ಇಂದಿನವರೆಗೆ ನೀವು ಹಂಗಾಮಿ ಅಧ್ಯಕ್ಷರಾಗಿ ಉಳಿದುಕೊಂಡಿದ್ದೀರಿ.
ಜಮ್ಮು ಕಾಶ್ಮೀರ ರಾಜ್ಯದ ಪ್ರಚಾರ ಸಮಿತಿಗೆ ರಾಜೀನಾಮೆ, ಕಾಂಗ್ರೆಸ್‌ನಿಂದ ಆಜಾದ್ ಆಗ್ತಾರಾ ಗುಲಾಂ ನಬಿ?
ಕಾಂಗ್ರೆಸ್ ರಿಮೋಟ್ ಕಂಟ್ರೋಲ್‌ನಲ್ಲಿದೆ: ಇಂದು ಕಾಂಗ್ರೆಸ್ ರಿಮೋಟ್ ಕಂಟ್ರೋಲ್ ಮಾದರಿಯಲ್ಲಿ ನಡೆಯುತ್ತಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದರು. ರಾಹುಲ್ ಗಾಂಧಿ ಅವರ ಪಿಎ ಮತ್ತು ಭದ್ರತಾ ಸಿಬ್ಬಂದಿ ಪಕ್ಷದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಹುಲ್ ನಾಯಕತ್ವದಲ್ಲಿ 49 ವಿಧಾನಸಭಾ ಚುನಾವಣೆಗಳಲ್ಲಿ 39 ರಲ್ಲಿ ಸೋಲು ಕಂಡಿದ್ದೇವೆ.
ಕಾಂಗ್ರೆಸ್ ಆದರ್ಶವನ್ನು ಉಳಿಸಿಕೊಳ್ಳುತ್ತೇವೆ: ಅದೇ ಸಮಯದಲ್ಲಿ, ಆಜಾದ್ ಅವರು ಕಾಂಗ್ರೆಸ್ ಹೊರಗೆ ಸಂಭವನೀಯ ಭವಿಷ್ಯದ ಬಗ್ಗೆ ಸುಳಿವು ನೀಡಿದರು. ನನ್ನ ಕೆಲವು ಸಹೋದ್ಯೋಗಿಗಳು ಮತ್ತು ನಾನು ನಮ್ಮ ಇಡೀ ವಯಸ್ಕ ಜೀವನವನ್ನು ಕಾಂಗ್ರೆಸ್‌ಗಾಗಿ ಮುಡಿಪಾಗಿಟ್ಟ ಆದರ್ಶಗಳನ್ನು ಎತ್ತಿಹಿಡಿಯಲು ನಿರ್ಧರಿಸುತ್ತೇವೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.