ಕೇಂದ್ರ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡಲು ಮುಂದಾಗಿದೆ.
ಬೆಂಗಳೂರು (ಜು.18): ಕೇಂದ್ರ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡಲು ಮುಂದಾಗಿದ್ದು, ಇದನ್ನು ಖಂಡಿಸಿ ಜು.21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ಹಾಗೂ ‘ರಾಜಭವನ ಮುತ್ತಿಗೆ’ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಶನಿವಾರ ಸಂಜೆ ಪಕ್ಷದ ಶಾಸಕರು, ಮಾಜಿ ಶಾಸಕರು, ಸಂಸದರು, ಪದಾಧಿಕಾರಿಗಳು ಹಾಗೂ ಇತರ ಮುಖಂಡರು ಸೇರಿದಂತೆ 600ಕ್ಕೂ ಹೆಚ್ಚು ನಾಯಕರ ಜತೆ ‘ಜೂಮ್’ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಧೈರ್ಯ ತುಂಬಲು ಜು.21 ರಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಜು.21 ರಂದು ಎಲ್ಲಾ ನಾಯಕರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಿ ಅಲ್ಲಿಂದ ‘ರಾಜಭವನ ಚಲೋ’ ನಡೆಸಲಾಗುವುದು.
ಸಿದ್ದು ಜನ್ಮದಿನ ಕಾಂಗ್ರೆಸ್‌ನ ಜಯದ ಮೆಟ್ಟಿಲಾಗಲಿ: ಡಿಕೆಶಿ
ಈ ವೇಳೆ ಎಲ್ಲಾ ಶಾಸಕರು, ನಾಯಕರು ಕಡ್ಡಾಯವಾಗಿ ಭಾಗವಹಿಸಬೇಕು. ನಾನು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಭಾಗವಹಿಸುತ್ತೇವೆ. ನಮ್ಮನ್ನು ಬಂಧಿಸಿದರೂ ಹೆದರದೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಕಳೆದ ತಿಂಗಳು ಐದು ದಿನಗಳ ಕಾಲ ಸುಮಾರು 50 ಗಂಟೆ ರಾಹುಲ್‌ಗಾಂಧಿ ಅವರನ್ನು ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡಲಾಯಿತು. ಇ.ಡಿ. ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷ ಹಾಗೂ ನಾಯಕರ ಘನತೆಗೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಬಲ ಸಂದೇಶ ರವಾನಿಸಬೇಕು ಎಂದು ಹೇಳಿದರು.
ಜು.22ಕ್ಕೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ: ಜು.22 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇದೇ ರೀತಿ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರದ ಪಕ್ಷದ ನಾಯಕರು, ಪದಾಧಿಕಾರಿಗಳು ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. 30 ಜಿಲ್ಲೆಗಳಿಗೆ ಪಕ್ಷದ ವತಿಯಿಂದ ವೀಕ್ಷಕರನ್ನು ಕಳುಹಿಸಿಕೊಡಲಾಗುವುದು ಎಂದರು. ಜತೆಗೆ ನಾನು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟಿಲ್ ಸೇರಿದಂತೆ ಹಿರಿಯ ನಾಯಕರು, ಕಾರ್ಯಾಧ್ಯಕ್ಷರು ಒಂದೊಂದು ಜಿಲ್ಲೆಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ತನ್ಮೂಲಕ ಸುಳ್ಳು ಪ್ರಕರಣಗಳ ಮೂಲಕ ಸರ್ಕಾರ ನಮ್ಮನ್ನು ಬೆದರಿಸಲು ಮಾಡುತ್ತಿರುವ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ ಎಂಬ ಸಂದೇಶ ರವಾನಿಸುತ್ತೇವೆ ಎಂದು ಹೇಳಿದರು.
ಪ್ರಕರಣದಲ್ಲಿ ಹುರುಳಿಲ್ಲ: ಪ್ರಕರಣದ ಬಗ್ಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಹುರಳಿಲ್ಲ ಎಂದು ಬಿಜೆಪಿಯವರಿಗೆ ತಿಳಿದಿದೆ. ಸ್ವತಃ ಅರುಣ್ ಜೇಟ್ಲಿ ಅವರೇ ಸಂಸತ್ತಿನಲ್ಲಿ ಈ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ಆಸ್ತಿಯನ್ನು ತಮ್ಮ ಆಸ್ತಿ ಎಂದು ಹೇಳಿಕೊಂಡಿದ್ದಾರಾ? ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಸ್ಥೆಗಳ ಜವಾಬ್ದಾರಿ ನನ್ನ ಮೇಲಿರುತ್ತದೆ.
ಹಾಗೆಂದು ಪಕ್ಷದ ಆಸ್ತಿಯೆಲ್ಲ ನನ್ನದು ಎಂದು ಹೇಳಲು ಸಾಧ್ಯವೇ? ಎಂದು ಕಿಡಿ ಕಾರಿದರು. ಖಾಸಗಿ ಕಂಪನಿಗಳೇ ಬೇರೆ, ಚಾರಿಟೇಬಲ್ ಟ್ರಸ್ಟ್‌ಗಳ ವತಿಯಿಂದ ನಡೆಯುವ ಸಂಸ್ಥೆಗಳೇ ಬೇರೆ. ಟ್ರಸ್ಟ್‌ಗಳ ವತಿಯಿಂದ ನಡೆಯುವ ಸಂಸ್ಥೆಗಳ ಜವಾಬ್ದಾರಿ ಆ ಟ್ರಸ್ಟ್‌ನ ಮುಖ್ಯಸ್ಥರು ಬದಲಾದಂತೆ ಬದಲಾಗುತ್ತದೆ. ಈ ಹಿಂದೆ ಈ ಸಂಸ್ಥೆಗಾಗಿ ಖರೀದಿಸಿದ್ದ ಆಸ್ತಿಯ ಮೌಲ್ಯ ಇಂದು ಹೆಚ್ಚಾಗಿದೆ ಎಂದು ಸಮರ್ಥಿಸಿದರು.
ಪ್ರವಾಹ ಪ್ರದೇಶಕ್ಕೆ ಸಚಿವರ ಕಾಟಾಚಾರದ ಭೇಟಿ: ಡಿಕೆಶಿ
ತಮ್ಮದೇ ಉದಾಹರಣೆ ನೀಡಿದ ಡಿಕೆಶಿ: ಆಸ್ತಿ ಮೌಲ್ಯ ಹೆಚ್ಚಳಕ್ಕೆ ತಮ್ಮದೇ ಉದಾಹರಣೆ ನೀಡಿದ ಅವರು, ಬಂಗಾರಪ್ಪ ಅವರ ಕಾಲದಲ್ಲಿ ನನಗೆ ಒಂದು ಲಕ್ಷ ರು. ಮೊತ್ತಕ್ಕೆ ಒಂದು ನಿವೇಶನ ನೀಡಿದ್ದರು. ಈಗ ಅದರ ಮೌಲ್ಯ ನಾಲ್ಕರಿಂದ ಐದು ಕೋಟಿಗೆ ಏರಿಕೆಯಾಗಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಊರಿನಲ್ಲಿದ್ದ ಜಮೀನು ಮಾರಿ ಬೆಂಗಳೂರಿನಲ್ಲಿ 50,000 ರು. ಮೊತ್ತಕ್ಕೆ ಒಂದು ಎಕರೆ ಜಮೀನು ಖರೀದಿಸಿದೆ. ಈಗ ಅದರ ಮೌಲ್ಯ 15 ಕೋಟಿ ರು.ಗೆ ಏರಿಕೆಯಾಗಿದೆ. ಹೀಗೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಆಸ್ತಿ ಮೌಲ್ಯವೂ ಹೆಚ್ಚಾಗಿದೆ. ಗಾಂಧಿ ಕುಟುಂಬ ಅಲಹಾಬಾದ್‌ನಲ್ಲಿ 25 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ತ್ಯಾಗ ಮಾಡಿದ್ದಾರೆ. ಅಂತಹವರ ಮೇಲೆ ಬಿಜೆಪಿ ಸುಳ್ಳು ಆರೋಪ ಹೊರೆಸಲು ವಿಫಲ ಯತ್ನ ನಡೆಸುತ್ತಿದೆ ಎಂದು ಟೀಕಿಸಿದರು.
