‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ನೀಡದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಬೆಂಗಳೂರು, ಮೈಸೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು (ಜೂ.21): ‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ನೀಡದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಬೆಂಗಳೂರು, ಮೈಸೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ, ಉಳಿದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಕಾಂಗ್ರೆಸ್ ಶಾಸಕರು, ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿಧಾನಸಭಾ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಲಾಯಿತು.
ಅನ್ನಭಾಗ್ಯ ಯೋಜನೆ ಜಾರಿಗೊಂಡರೆ ರಾಜ್ಯ ಸರ್ಕಾರಕ್ಕೆ ಜನಪ್ರಿಯತೆ ಹೆಚ್ಚಾಗಬಹುದು ಎಂಬ ಒಂದೇ ಕಾರಣಕ್ಕೆ ಬಡವರಿಗೆ ಕೊಡುವ ಅಕ್ಕಿಯಲ್ಲೂ ರಾಜಕಾರಣ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಡೆ ವಿರುದ್ಧ ಹಳ್ಳಿ-ಹಳ್ಳಿಯಲ್ಲೂ ಜಾಗೃತಿ ಮೂಡಿಸಲಾಗುವುದು ಎಂದು ಇದೇ ವೇಳೆ ಕಾಂಗ್ರೆಸ್ ಮುಖಂಡರು ಘೋಷಿಸಿದರು. ಒಂದು ಕಡೆ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ನೀಡದೆ ರಾಜಕೀಯ ಮಾಡುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಎಷ್ಟೇ ಕಷ್ಟವಾದರೂ ಬೇರೆ ರಾಜ್ಯಗಳಿಂದ ಖರೀದಿಸಿಯಾದರೂ ಅಕ್ಕಿ ಕೊಟ್ಟೇ ಕೊಡುತ್ತೇವೆ.
ಘನ ತ್ಯಾಜ್ಯ ಕಂಪನಿ ಹಣ ದುರ್ಬಳಕೆ: ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ
ಕೇಂದ್ರ ಸರ್ಕಾರದ ವಿರುದ್ಧ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಇನ್ನು ಬೆಳಗಾವಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೇಂದ್ರ ಸರ್ಕಾರವನ್ನು ಕೇಳಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರಾ? ಎಂಬ ಬಿಜೆಪಿಗರ ಆರೋಪಕ್ಕೆ ಕಿಡಿಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸೇಡಿನ ರಾಜಕೀಯ ಮಾಡುತ್ತಿದೆ. ಬಿಹಾರಕ್ಕೆ 2 ಲಕ್ಷ ಕೋಟಿ ಕೊಡ್ತೀವಿ, ಪಂಜಾಬ್‌ಗೆ ಲಕ್ಷ ಕೋಟಿ ಕೊಡ್ತೀವಿ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಅಲ್ಲಿನ ರಾಜ್ಯ ಸರ್ಕಾರವನ್ನು ಕೇಳಿ ಘೋಷಣೆ ಮಾಡಿದ್ರಾ? ಎಂದು ತಿರುಗೇಟು ನೀಡಿದರೆ, ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಬೇಡಿ ಎಂದು ರಾಜ್ಯ ಬಿಜೆಪಿ ನಾಯಕರೇ ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ. ಬಿಜೆಪಿಯವರು ಬಡವರ ವಿರೋಧಿಗಳು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದರು.
ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ: ಬೆಂಗಳೂರಿನಲ್ಲಿ ಬೆಳಗ್ಗಿನಿಂದ ಸುರಿಯುತ್ತಿದ್ದ ತುಂತುರು ಮಳೆಯನ್ನೂ ಲೆಕ್ಕಿಸದೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ದೊಡ್ಡ ಪಾತ್ರೆಗೆ ಅಕ್ಕಿ ಸುರಿದು ಬೇಯಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಭಟನೆಗೆ ಚಾಲನೆ ನೀಡಿದರು. ಬೆಳಗಾವಿಯಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕೈಯಲ್ಲಿ ಅಕ್ಕಿ ಬುಟ್ಟಿಹಿಡಿದು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಅದೇ ರೀತಿ ಮಂಗಳೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಎದುರು ಊಟದ ಬಟ್ಟಲು ಬಡಿಯುತ್ತಾ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಹಿಂದೆ ನಾನು ಸಚಿವನಾಗಿದ್ದಾಗ ಪುತ್ತೂರು ಶಾಲೆಯ ಮಕ್ಕಳಿಗೆ ಕೊಡುವ ಅನ್ನ ನಿಲ್ಲಿಸಿದ್ದೇನೆಂದು ಅಪಪ್ರಚಾರ ಮಾಡಿದ್ದರು. ನನ್ನ ವಿರುದ್ಧ ಅನ್ನದ ಬಟ್ಟಲು ತಟ್ಟಿಪ್ರತಿಭಟಿಸಿದ್ದರು. ಆದರೆ ಅಂದು ಶಾಲೆ ಮಕ್ಕಳ ಒಂದು ಹಿಡಿ ಅನ್ನವನ್ನೂ ನಾನು ನಿಲ್ಲಿಸಿರಲಿಲ್ಲ. ದೇವಸ್ಥಾನದ ಹಣ ಅನ್ಯ ಕಾರ್ಯಗಳಿಗೆ ದುರುಪಯೋಗ ಆಗಬಾರದೆಂದು ತಡೆಯಲಾಗಿತ್ತು. ಇದೀಗ ಕೇಂದ್ರ ಬಿಜೆಪಿ ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ನೀಡದೆ ಬಡವರ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮೊದಲು ಅಕ್ಕಿ ಕೊಡಲು ಒಪ್ಪಿಕೊಂಡು ನಂತರ ಕೊಡಲ್ಲ ಅನ್ನುವುದು ದ್ವೇಷ ರಾಜಕಾರಣ. ಭಾರತದಲ್ಲಿರುವುದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಸರ್ವಾಧಿಕಾರಿ ವ್ಯವಸ್ಥೆಯಲ್ಲ. ಕೇಂದ್ರ ಸರ್ಕಾರವೇನು ತಾನೇ ಅಕ್ಕಿ ಬೆಳೆಯುತ್ತಾ? ಹೇಗಾದರೂ ಮಾಡಿ ನಾವು ಅಕ್ಕಿ ಖರೀದಿಸಿ ಅನ್ನಭಾಗ್ಯದಡಿ 10 ಕೆ.ಜಿ. ಕೊಟ್ಟೇ ಕೊಡುತ್ತೇವೆ. ಸ್ವಲ್ಪ ತಡವಾಗಬಹುದು ಅಷ್ಟೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಜನಸ್ನೇಹಿ ಆಡಳಿತ ನೀಡಿ, ಇಲ್ಲ ನಿಮ್ಮ ದಾರಿ ನೋಡಿಕೊಳ್ಳಿ: ಸಂಸದ ಸುರೇಶ್ ಖಡಕ್ ವಾರ್ನಿಂಗ್
ಬೊಮ್ಮಾಯಿ ದಮ್, ತಾಕತ್ತಿಗೆ ರಾಜ್ಯ ಜನ ಚುನಾವಣೆಯಲ್ಲೇ ಉತ್ತರ ಕೊಟ್ಟಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಕರ್ನಾಟಕಕ್ಕೆ ಕೇಂದ್ರದ ಬೆಂಬಲ ಸಿಗಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಚುನಾವಣೆ ಸಮಯದಲ್ಲೇ ಹೇಳಿದ್ದರು. ಈಗ ಅದೇ ರೀತಿ ಮಾಡುತ್ತಿದ್ದಾರೆ. ನಾವು ಜನರಿಗೆ ಕೊಟ್ಟಮಾತಿನಂತೆ 10 ಕೆ.ಜಿ. ಅಕ್ಕಿ ಕೊಟ್ಟೇ ಕೊಡುತ್ತೇವೆ.
- ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
