* ಆಗಸ್ಟಲ್ಲಿ ಮತ್ತೆ ಕಾಂಗ್ರೆಸ್ ಪಾದಯಾತ್ರೆ* ಬಿಜೆಪಿ ವೈಫಲ್ಯಗಳ ವಿರುದ್ಧ ಸಮರ* ಜೂ.1ರಂದು ಸುರ್ಜೇವಾಲ ಚರ್ಚೆ
ಬೆಂಗಳೂರು(ಮೇ.27): ಬಿಜೆಪಿ ವೈಫಲ್ಯಗಳ ವಿರುದ್ಧ ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್ 9ರಂದು ರಾಜ್ಯ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಿರುವ 75 ಕಿ.ಮೀ. ಉದ್ದದ ಪಾದಯಾತ್ರೆ ಹಾಗೂ ನವ ಸಂಕಲ್ಪ ಶಿಬಿರದಲ್ಲಿ ಚರ್ಚಿಸಿದ ವಿಚಾರಗಳ ಅನುಷ್ಠಾನದ ಕುರಿತು ಚರ್ಚಿಸಲು ಜೂನ್ 1ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಪಾದಯಾತ್ರೆ ಕುರಿತು ಕುರಿತು ಚರ್ಚಿಸಲು ಜೂನ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಆ ಕಾರ್ಯಾಗಾರದ ಸಿದ್ಧತೆಗಳು, ಮುಂದಿನ ಒಂದು ವರ್ಷದಲ್ಲಿ ಪಕ್ಷ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳು, ಬಿಬಿಎಂಪಿ ಚುನಾವಣೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆಗಳ ಕುರಿತು ರಾಜ್ಯ ನಾಯಕರೊಂದಿಗೆ ಸುರ್ಜೇವಾಲಾ ಜೂ.1 ಹಾಗೂ 2ರಂದು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ಜೈಲಿಗೆ ಹೋಗ್ತಾರೆ'
ಇದೇ ವೇಳೆ ಎಐಸಿಸಿ ನವ ಸಂಕಲ್ಪ ಶಿಬಿರದಲ್ಲಿ ಕಾಂಗ್ರೆಸ್‌ನ ಪುನಶ್ಚೇತನಕ್ಕೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಇದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಕುರಿತು ರಾಜ್ಯಕ್ಕೆ ಆಗಮಿಸುತ್ತಿದ್ದೇನೆ. ತನ್ಮೂಲಕ ಭಾರತ ಕಲ್ಪನೆಯನ್ನು ಮರಳಿ ಪಡೆಯಲು ನಾವೆಲ್ಲಾ ಸಜ್ಜಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸುರ್ಜೇವಾಲಾ ಗುರುವಾರ ಸಂದೇಶ ಕಳುಹಿಸಿದ್ದಾರೆ.
75 ಕಿ.ಮೀ. ಪಾದಯಾತ್ರೆ
ಇನ್ನು 75 ಕಿ.ಮೀ. ಉದ್ದದ ಪಾದಯಾತ್ರೆಯಲ್ಲಿ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಬ್ರ್ಯಾಂಡ್ ಬೆಂಗಳೂರನ್ನು ಹಾಳು ಮಾಡಿರುವುದು, ಶೇ.40 ಕಮಿಷನ್, ಬಿಜೆಪಿಯ ಕರ್ಮಕಾಂಡಗಳು, ತ್ಯಾಜ್ಯ, ರಸ್ತೆ ಗುಂಡಿ, ಕುಡಿಯುವ ಸಮಸ್ಯೆ ಸೇರಿದಂತೆ ನಗರದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ನಗರದ ಜನತೆಯ ಗಮನ ಸೆಳೆಯಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
