* ಅಕ್ರಮ ಹಣ ವರ್ಗಾವಣೆ ಚಟುವಟಿಕೆಯಡಿ ಸುಮಾರು 8.90 ಕೋಟಿ ರು. ಸಿಕ್ಕಿದೆ * ಡಿ.ಕೆ.ಶಿವಕುಮಾರ್ ಒಟ್ಟು ರಾಜಕೀಯ ಯಾತ್ರೆಯೇ ಕ್ರಿಮಿನಲ್ ಚಟುವಟಿಕೆ ಆಧರಿಸಿದೆ* ಕ್ರಿಮಿನಲ್ ಚಟುವಟಿಕೆ ಮೂಲಕವೇ ಡಿಕೆಶಿ ರಾಜಕೀಯಕ್ಕೆ ಆಗಮಿಸಿದವರು
ಬೆಂಗಳೂರು(ಮೇ.27): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕ್ರಿಮಿನಲ್ ಚಟುವಟಿಕೆಯ ಕಾರಣಕ್ಕಾಗಿ ಸದ್ಯದಲ್ಲೇ ಜೈಲಿಗೆ ಹೋಗಲಿದ್ದಾರೆ ಎಂದು ರಾಜ್ಯ ಬಿಜೆಪಿಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಹೇಳಿದ್ದಾರೆ.
ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ದಿನಗಳಿಂದ ಜಾಮೀನಿನಲ್ಲಿದ್ದರು. ಗುರುವಾರ ಕೋರ್ಟ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಚಾರ್ಜ್‌ಶೀಟ್ ಸಲ್ಲಿಸಿದೆ. ಅವರ ಕ್ರಿಮಿನಲ್ ಚಟುವಟಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಚಟುವಟಿಕೆಯಡಿ ಸುಮಾರು 8.90 ಕೋಟಿ ರು. ಸಿಕ್ಕಿದೆ ಎಂದರು.
ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಜಾಮೀನಿನಲ್ಲಿದ್ದಾರೆ ಎಂದು ಬಿಜೆಪಿ ಯಾವಾಗಲೂ ಹೇಳುತ್ತಿತ್ತು. ಕೊತ್ವಾಲ್ ರಾಮಚಂದ್ರ ಸ್ಕೂಲ್ ಆಫ್ ಥಾಟ್‌ನಿಂದ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರ ಒಟ್ಟು ರಾಜಕೀಯ ಯಾತ್ರೆಯೇ ಕ್ರಿಮಿನಲ್ ಚಟುವಟಿಕೆ ಆಧರಿಸಿದೆ. ಆ ಮೂಲಕವೇ ರಾಜಕೀಯಕ್ಕೆ ಆಗಮಿಸಿದವರು ಎಂದು ಲೇವಡಿ ಮಾಡಿದರು.
ಬಿಜೆಪಿಗೆ ಸೇರುವಂತೆ ಡಿಕೆಶಿ ಮೇಲೆ ಒತ್ತಡ ಹೇರಲಾಗ್ತಿದ್ಯಾ? ಗಂಭೀರ ಆರೋಪ
ಡಿಕೆಶಿ ವಿರುದ್ಧ ಇ.ಡಿ. ಚಾರ್ಜ್‌ಶೀಟ್ ಸಲ್ಲಿಕೆ
ನವದೆಹಲಿ: ಆದಾಯ ತೆರಿಗೆ (ಐ.ಟಿ.) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ದ ತನಿಖೆಯ ಸುಳಿಯಲ್ಲಿ ಸಿಲುಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಇ.ಡಿ. ಆರೋಪ ಪಟ್ಟಿಸಲ್ಲಿಕೆ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಸಂಬಂಧ 2018ರಲ್ಲಿ ದಾಖಲಿಸಿದ್ದ ಪ್ರಕರಣದ ಬಗ್ಗೆ ಗುರುವಾರ ದೆಹಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ದೋಷಾರೋಪ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಕೋಟ್ಯಂತರ ರು. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು, ಹವಾಲಾ ದಂಧೆ ನಡೆಸಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸುಮಾರು 55 ಪುಟಗಳ ಚಾಜ್‌ರ್‍ಶೀಟ್ ಜತೆಗೆ ಒಂದು ಸಣ್ಣ ಟ್ರಂಕ್‌ನಲ್ಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
ಮೋದಿ ವಿರೋಧಿಸಿದ್ರೆ ತುಳೀತಾರೆ, ನಾನು ಬಗ್ಗಲ್ಲ; ಡಿಕೆಶಿ
ಡಿ.ಕೆ.ಶಿವಕುಮಾರ್ ಸೇರಿದಂತೆ ಅವರ ಆಪ್ತರಾದ ಸುನೀಲ್ ಕುಮಾರ್ ಶರ್ಮಾ, ಸಚಿನ್ ನಾರಾಯಣ, ಅಂಜನೇಯ ಹನುಮಂತಯ್ಯ ಮತ್ತಿತರರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಸಲ್ಲಿಕೆ ಮಾಡಿರುವ ಆರೋಪಗಳ ಮೇಲೆ ಶನಿವಾರ ಇ.ಡಿ. ಪರ ವಕೀಲರು ವಾದ ಮಂಡಿಸಲಿದ್ದಾರೆ. ಇ.ಡಿ. ಅಧಿಕಾರಿಗಳು ಕಳೆದ ಎರಡೂವರೆ ವರ್ಷಗಳಿಂದ ಸಮಗ್ರ ತನಿಖೆ ನಡೆಸಿ ದಾಖಲೆ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಲ್ಲಿಕೆ ಮಾಡಿದ್ದಾರೆ.
ಶರ್ಮಾ ಟ್ರಾನ್ಸ್‌ಪೋಟ್ಸ್‌ರ್ ಸಂಸ್ಥೆಯ ಮಾಲಿಕ ಸುರೇಶ್ ಕುಮಾರ್ ಶರ್ಮಾ ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದರು. ಅವರ ನಿಧನದ ಬಳಿಕ ಅವುಗಳನ್ನು ಅವರ ಸಂಬಂಧಿ ಸುನೀಲ್ ಕುಮಾರ್ ಶರ್ಮಾ ಮತ್ತು ಡಿ.ಕೆ.ಶಿವಕುಮಾರ್ ನೋಡಿಕೊಳ್ಳುತ್ತಿದ್ದರು. ಫ್ಲಾಟ್‌ನ ಲಾಕರ್‌ನಲ್ಲಿ ಶಿವಕುಮಾರ್ ಅವರು ಹವಾಲಾ ಹಣವನ್ನು ಅಕ್ರಮವಾಗಿ ಇಡುತ್ತಿದ್ದರು. ವಿದೇಶದಲ್ಲಿಯೂ ಬಂಡವಾಳ ಹೂಡಿಕೆ ಮಾಡಿದ್ದಾರೆ. ಸಫ್ದರ್‌ಜಂಗ್ ಎನ್‌ಕ್ಲೇವ್ ಫ್ಲಾಟ್ ಬಿ.5 ಅನ್ನು ಅಘೋಷಿತ ಹಣ ಸಂಗ್ರಹಿಸಲೆಂದೇ ಬಳಕೆ ಮಾಡಲಾಗುತ್ತಿತ್ತು ಎಂಬ ಅಂಶವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
