ಬೆಂಗಳೂರು(ಫೆ.14): ಬಿಬಿಎಂಪಿ ಚುನಾವಣೆಗೆ ಭರ್ಜರಿ ಸಿದ್ಧತೆಗೆ ಕಾಂಗ್ರೆಸ್‌ ಮುಂದಾಗಿದ್ದು, ಶೀಘ್ರವೇ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ಬೆಂಗಳೂರು ಶಾಸಕರು, ನಾಯಕರ ಜತೆಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಸುರ್ಜೇವಾಲಾ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪುತ್ರಿ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫೆ.17 ಹಾಗೂ 18ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬಿಬಿಎಂಪಿ ಚುನಾವಣೆ ಕುರಿತ ಸಭೆಯನ್ನೂ ನಡೆಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ನಾಯಕರು, ಶಾಸಕರು ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಬಿಎಂಪಿ ಚುನಾವಣಾ ಪೂರ್ವ ಸಿದ್ಧತೆ, ಪ್ರಚಾರ ತಂತ್ರ ಕುರಿತು ರೂಪರೇಷೆ ಸಿದ್ಧವಾಗಲಿದೆ ಎಂದು ಮೂಲಗಳು ಹೇಳಿವೆ.

'ಇನ್ನೂ 6 ತಿಂಗಳವರೆಗೆ ಬಿಬಿಎಂಪಿ ಚುನಾವಣೆ ನಡೆಯೋದಿಲ್ಲ'

ನೂತನ ಕಾರ್ಯಾಧ್ಯಕ್ಷರ ಅದ್ಧೂರಿ ಪದಗ್ರಹಣ: 

ಫೆ.21ರಂದು ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಂಸದ ಧೃವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲು ಕೆಪಿಸಿಸಿ ನಿರ್ಧರಿಸಿದೆ. ನಗರದ ರಮಣಮಹಶ್ರೀ ರಸ್ತೆಯ ಕಿಂಗ್ಸ್‌ ಕೋರ್ಟ್‌ ಹೋಟೆಲ್‌ನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಸಲೀಂ ಅಹ್ಮದ್‌, ಈಶ್ವರ್‌ ಖಂಡ್ರೆ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.