ಲೋಕಸಭೆ ಚುನಾವಣೆ 2024: ಮೈಸೂರು ಕೊಡಗು ಕ್ಷೇತ್ರದ ಗೆಲುವಿಗಾಗಿ ಕಾಂಗ್ರೆಸ್‌ ಪ್ಲಾನ್‌..!

ಒಂದೆಡೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರಿಗೆ ಟಿಕೆಟ್ ಸಿಗುವುದು ಶೇ 95 ರಷ್ಟು ಖಚಿತ ಎನ್ನಲಾಗುತ್ತಿದೆ. ಹೀಗಾಗಿಯೇ ಲಕ್ಷ್ಮಣ್ ಅವರು ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಫುಲ್ ಆಕ್ಟೀವ್ ಆಗಿ ಓಡಾಡುತ್ತಿದ್ದಾರೆ. 

Congress Plan to Win Mysuru Kodagu Constituency in Lok Sabha Elections 2024 grg

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಜ.04):  ಲೋಕಸಭಾ ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳ ಕಾಲ ಸಮಯ ಇರುವಾಗಲೇ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳಿಸುತ್ತಿದೆ. ಹೌದು ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಕಳೆದ 25 ವರ್ಷಗಳಿಂದ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿದ್ದ ಕೊಡಗು ಜಿಲ್ಲೆಯಲ್ಲೂ ಎರಡು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ. ಅದರ ಹುಮ್ಮಸ್ಸಿನಲ್ಲಿ ಇರುವ ಕೈ ಪಡೆ ಲೋಕಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಲು ಈಗಾಗಲೇ ವೇದಿಕೆ ಸಜ್ಜುಗೊಳಿಸುತ್ತಿದೆ. 

ಹೌದು, ಒಂದೆಡೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರಿಗೆ ಟಿಕೆಟ್ ಸಿಗುವುದು ಶೇ 95 ರಷ್ಟು ಖಚಿತ ಎನ್ನಲಾಗುತ್ತಿದೆ. ಹೀಗಾಗಿಯೇ ಲಕ್ಷ್ಮಣ್ ಅವರು ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಫುಲ್ ಆಕ್ಟೀವ್ ಆಗಿ ಓಡಾಡುತ್ತಿದ್ದಾರೆ. 

ನದಿ ರಕ್ಷಣೆಗೆ ವರದಿ ಬರೆದು ಬಾಲ ವಿಜ್ಞಾನಿಯಾದ 13 ವರ್ಷದ ಪೋರಿ!

ಪದೇ ಪದೇ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿರುವ ಅವರು ಒಂದಿಲ್ಲೊಂದು ವಿಷಯಕ್ಕೆ ಕೊಡಗಿನಲ್ಲಿ ಸುದ್ದಿಯಲ್ಲಿರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದು ಅಷ್ಟೇ ಅಲ್ಲ, ಈಗಾಗಲೇ ಕೊಡಗು ಜಿಲ್ಲೆಯ ತಾಲ್ಲೂಕುವಾರು ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಒಂದು ಸುತ್ತಿನ ಸಭೆಗಳನ್ನು ಮಾಡಿ ತಮಗೆ ಸಪೋರ್ಟ್ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ. 

ಇದೀಗ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರವಾರು ಸಮಾವೇಶಗಳನ್ನು ಮಾಡುತ್ತಿದೆ. ಕುಶಾಲನಗರದ ರೈತ ಸಹಕಾರ ಭವನದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಮಾವೇಶ ಮಾಡಿದ್ದಾರೆ. ಕೊಡಗು ಉಸ್ತುವಾರಿ ಸಚಿವ ಎನ್.ಎಸ್ ಭೋಸರಾಜ್ ಮತ್ತು ಕಾಂಗ್ರೆಸ್ ವಕ್ತಾರ ನಾಗರಾಜ್ ಯಾದವ್ ನೇತೃತ್ವದಲ್ಲಿ ಸಾವಿರಾರು ಜನರನ್ನು ಸೇರಿಸಿ ಸಮಾವೇಶ ಮಾಡಲಾಗಿದೆ. ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡ, ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಇಬ್ಬರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಮಡಿಕೇರಿ ಶಾಸಕ ಮಂತರ್ ಗೌಡ ಅವರು ಈ ಹಿಂದಿನ ಶಾಸಕರು ಅದೆಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೋ ಏನೋ ಗೊತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗಿಂತ ಅವರ ಅಹಂಕಾರ ಅವರನ್ನು ಸೋಲಿಸಿತು. ಆದರೆ ನಾವು ಜನರೊಂದಿಗೆ ಬೆರೆತು ಕೆಲಸ ಮಾಡಿ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಶಿಕ್ಷಕರ ಕ್ಷೇತ್ರ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. 

ಬಿಜೆಪಿ ಜನರದ ಹಾದಿ ತಪ್ಪಿಸುವ ಮೂಲಕ ಧರ್ಮದ ರಾಜಕಾರಣ: ಸಚಿವ ಭೋಸರಾಜು

ಇನ್ನು ಸಚಿವ ಬೋಸರಾಜು ಅವರು ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷ ಬಿಜೆಪಿ ಪಕ್ಷಕ್ಕಿಂತ 6 ರಷ್ಟು ಹೆಚ್ಚು ಮತಗಳನ್ನು ಪಡೆದಿದೆ. ಹೀಗಾಗಿ ರಾಜ್ಯದ ಜನತೆ ಕಾಂಗ್ರೆಸ್ ಪರವಾಗಿದ್ದಾರೆ ಎನ್ನುವುದು ಸ್ಪಷ್ಟ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಎರಡು ಜಿಲ್ಲೆಗಳ ಮುಖಂಡರನ್ನು ಕರೆದು ಸಭೆ ನಡೆಸಿ ಅಭ್ಯರ್ಥಿ ಆಯ್ಕೆಗೆ ರಾಜ್ಯ ಹಾಗೂ ಕೇಂದ್ರದ ತಂಡ ಚರ್ಚಿಸಿದೆ. ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ. 

ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಕಾಲ ಇರುವಾಗಲೇ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರದಲ್ಲೂ ಗೆದ್ದು ಬೀಗಿರುವ ಕೈಪಡೆ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುವುದಕ್ಕೆ ವೇದಿಕೆ ಸಿದ್ಧ ಮಾಡುತ್ತಿದೆ. ಆದರೆ ಮತದಾರ ಮಾತ್ರ ಯಾರ ಕೈಹಿಡಿಯುತ್ತಾನೋ ಎನ್ನುವ ಕುತೂಹಲವಿದೆ.

Latest Videos
Follow Us:
Download App:
  • android
  • ios