ಬೆಂಗಳೂರು (ನ.16):  ಬಸವ ಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಕಳೆದ ಒಂದು ತಿಂಗಳ ಹಿಂದಿನಿಂದಲೇ ಕಾಂಗ್ರೆಸ್‌ ಪಕ್ಷವು ತೀವ್ರ ಸಿದ್ಧತೆ ಆರಂಭಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ ಹಾಗೂ ಸತೀಶ್‌ ಜಾರಕಿಹೊಳಿ ಅವರಿಗೆ ಕಳೆದ ತಿಂಗಳ ಹಿಂದೆಯೇ ಹೊಣೆಗಾರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಉಭಯ ನಾಯಕರು ಕ್ಷೇತ್ರಗಳಲ್ಲಿ ಬೀಡುಬಿಟ್ಟು ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

"

ಕಾಂಗ್ರೆಸ್‌ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ್‌ ಅನರ್ಹತೆ ಹಾಗೂ ಬಸವ ಕಲ್ಯಾಣ ಶಾಸಕರಾಗಿದ್ದ ಬಿ. ನಾರಾಯಣ ರಾವ್‌ ಅಕಾಲಿಕ ನಿಧನದಿಂದ ಉಭಯ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಶತಾಯಗತಾಯ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ಸತೀಶ್‌ ಜಾರಕಿಹೊಳಿ ಹಾಗೂ ಬಸವ ಕಲ್ಯಾಣ ಕ್ಷೇತ್ರದ ಸಂಪೂರ್ಣ ಹೊಣೆಗಾರಿಕೆಯನ್ನು ಈಶ್ವರ್‌ ಖಂಡ್ರೆ ಅವರಿಗೆ ನೀಡಲಾಗಿದೆ.

ಉಪಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಮಸ್ಕಿಗೆ ದೀಪಾವಳಿ ಗಿಫ್ಟ್ ..

ಹೈಕಮಾಂಡ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೂಚನೆಯಂತೆ ಈ ಇಬ್ಬರೂ ಕಳೆದ ಒಂದು ತಿಂಗಳ ಹಿಂದೆಯಿಂದಲೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಅಭ್ಯರ್ಥಿ ಆಯ್ಕೆ ಸೇರಿದಂತೆ ಅಗತ್ಯ ಸಿದ್ಧತೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೀಗಾಗಿ ಶಿರಾ, ಆರ್‌.ಆರ್‌.ನಗರ ಚುನಾವಣಾ ಪ್ರಚಾರದತ್ತ ಇಬ್ಬರೂ ಆಸಕ್ತಿ ತೋರಲಿಲ್ಲ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಅಂತಿಮ ಕ್ಷಣದಲ್ಲಿ ಅಭ್ಯರ್ಥಿ ಆಯ್ಕೆಯಿಂದ ಕಾಂಗ್ರೆಸ್‌ ಹಿನ್ನಡೆ ಉಂಟಾಯಿತು. ಹೀಗಾಗಿ ಮಸ್ಕಿ, ಬಸವ ಕಲ್ಯಾಣದಲ್ಲಿ ಅಂತಹ ತಪ್ಪು ಮರು ಕಳಿಸದಂತೆ ಸತೀಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ ಅವರು ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ. ಬಣಗಳು ಉಂಟಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಕಳೆದ ಒಂದು ತಿಂಗಳಿಂದ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರ ಪರಿಗಣನೆ

ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್‌ ಒಂದು ತಿಂಗಳ ಹಿಂದೆಯೇ ಮಸ್ಕಿ ಉಸ್ತುವಾರಿ ನನಗೆ, ಬಸವ ಕಲ್ಯಾಣ ಉಸ್ತುವಾರಿ ಈಶ್ವರ್‌ ಖಂಡ್ರೆ ಅವರಿಗೆ ನೀಡಿದೆ. ಪಕ್ಷ ಸಂಘಟಿಸುವುದು, ಗೊಂದಲಗಳನ್ನು ನಿವಾರಿಸುವುದು, ಅಭ್ಯರ್ಥಿ ಆಯ್ಕೆ, ಚುನಾವಣೆ ಸಿದ್ಧತೆ ಸೇರಿದಂತೆ ಕಳೆದು ಒಂದು ತಿಂಗಳಿಂದ ಬಿಡುವಿಲ್ಲದೆ ಸಿದ್ಧತೆ ನಡೆಸುತ್ತಿದ್ದೇವೆ.

- ಸತೀಶ್‌ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ