ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣಗಳೂ ಇಲ್ಲ. ಕಾಂಗ್ರೆಸ್ ಪಕ್ಷ ಒಂದೇ ಬಣ, ಆ ಬಣ, ಈ ಬಣ ಎಂಬುವುದು ಇಲ್ಲ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದಾರೆಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್ ಹೇಳಿದರು.

ಮುಧೋಳ (ನ.23): ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣಗಳೂ ಇಲ್ಲ. ಕಾಂಗ್ರೆಸ್ ಪಕ್ಷ ಒಂದೇ ಬಣ, ಆ ಬಣ, ಈ ಬಣ ಎಂಬುವುದು ಇಲ್ಲ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದಾರೆಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್ ಹೇಳಿದರು. ನಗರದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಎರಡೂವರೆ ವರ್ಷ ಪೂರ್ಣಗೊಳಿಸಿದೆ.

ಇನ್ನೂ ಎರಡೂವರೆ ವರ್ಷ ಪೂರ್ಣಗೊಳಿಸಲಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ರಾಜ್ಯದ ಜನತೆ ಅದರಲ್ಲೂ ಮಹಿಳೆಯರು ಇತೀ ಸಂತೋಷದಿಂದ ಇದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈಗಿನಗಿಂತಲೂ ಹೆಚ್ಚಿನ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಲಾಡ್

ಭಾರತದ ಒಟ್ಟು ಮತದಾರರಲ್ಲಿ ಶೇ.54ರಷ್ಟು ಯುವಕರೇ ಇದ್ದಾರೆ. ಯುವಕರು ಮನಸ್ಸು ಮಾಡಿದರೆ ತಮಗೆ ಬೇಕಾದವರನ್ನು ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಶಕ್ತಿ ಮತ್ತು ಸಾಮರ್ಥ್ಯವಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಹಾಗೂ ಮುಧೋಳ ಕುಮಕಾಲೆ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮುಧೋಳ-ಜಮಖಂಡಿ ಬೈಪಾಸ್ ರಸ್ತೆ ಮಾರ್ಗದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಪದವಿ ಪೂರ್ವ ಮಹಾವಿದ್ಯಾಲಯಗಳ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂವಿಧಾನದ' ಹಿಂದೂ ಕೋಡ್ ಬಿಲ್ ಓದಬೇಕು, ಕ್ರೀಡಾ ಮನೋಭಾವದಷ್ಟೇ ಸಂವಿಧಾನ ಅರಿವು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಗಳನ್ನು ನೀಡಿ ಪ್ರಮುಖ ಭಾಗಗಳನ್ನು ಓದಲು ಪ್ರೇರೇಪಿಸಿದರು,

ವಿಶೇಷವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯ ಹಿಂದೂ ಕೋಡ್ ಬಿಲ್ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ದೊರಕಿಸಿಕೊಡುವಲ್ಲಿ ಅದರ ಐತಿಹಾಸಿಕ ಪಾತ್ರದ ಕುರಿತು ಸಚಿವರು ವಿದ್ಯಾರ್ಥಿಗಳಿಗೆ ವಿವರವಾಗಿ ಬೋಧಿಸಿದರು. ​ಈ ಅನಿರೀಕ್ಷಿತ ಸಂವಿಧಾನದ ತರಗತಿಯಿಂದ ಉತ್ತೇಜಿತರಾದ ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳು ಸಚಿವರೊಂದಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕುರಿತು ಗಹನವಾದ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬ ನಾಗರಿಕನೂ ಸಂವಿಧಾನ ಮತ್ತು ಇತಿಹಾಸ ಅರಿತಿದ್ದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯ ಎಂದು ಹೇಳಿದರು.