ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇಂದು ನಡೆದಿದೆ. ಶೇಕಡಾ 96 ರಷ್ಟು ಮತದಾನ ನಡೆದಿದೆ. ಅಕ್ಟೋಬರ್19 ರಂದು ಮತ ಎಣಿಕೆ ನಡೆಯಲಿದೆ. ಮಲ್ಲಿಕಾರ್ಜುನ್ ಖರ್ಗೆ ಅಥವಾ ಶಶಿ ತರೂರ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಲಿದ್ದಾರೆ. ಆದರೆ ಅದಕ್ಕೂ ಅಧ್ಯಕ್ಷ ಯಾರೇ ಆದರೂ ಗಾಂಧಿ ಮಾತು ಕೇಳಬೇಕು ಅನ್ನೋ ಸಂದೇಶ ಈಗಲೇ ಬಂದಿದೆ.
ನವದೆಹಲಿ(ಅ.17): ಕಳೆದ ಹಲವು ವರ್ಷಗಳಿಂದ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಕೊನೆಗೂ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಸ್ಪರ್ಧಿಸಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಶೇಕಡಾ 96 ರಷ್ಟು ಮತದಾನವಾಗಿದೆ. ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನೂತನ ಅಧ್ಯಕ್ಷರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಯಾರೇ ಆದರೂ ಗಾಂಧಿ ಕುಟುಂಬದ ಕೈಗೊಂಬೆ ಅನ್ನೋ ಬಿಜೆಪಿ ಆರೋಪಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಕಾರಣ ಇದೀಗ ಕಾಂಗ್ರೆಸ್ ಅಧ್ಯಕ್ಷರಾಗುವವರು ಗಾಂಧಿ ಕುಟುಂಬದ ಅಭಿಪ್ರಾಯ ಆಲಿಸಬೇಕು. ಬಳಿಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂಬ ಸಂದೇಶ ಬಂದಿದೆ. ಈ ಸಂದೇಶ ನೀಡಿರುವುದು ಕಾಂಗ್ರೆಸ್ ಹಿರಿಯ ನಾಯಕ, ಗಾಂಧಿ ಕುಟುಂಬದ ಆಪ್ತ ಪಿ ಚಿದಂಬರಂ.
ಎನ್‌ಡಿವಿಗೆ ನೀಡಿದ ಸಂದರ್ಶದನಲ್ಲಿ ಪಿ ಚಿದಂಬರಂ ಈ ಮಾತು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನೂತನ ಅಧ್ಯಕ್ಷರು ಗಾಂಧಿ ಕುಟುಂಬ ಕೈಗೊಂಬೆ ಅನ್ನೋ ಆರೋಪವನ್ನು ಪಿ ಚಿದಂಬರಂ ತಳ್ಳಿ ಹಾಕಿದ್ದಾರೆ. ಆದರೆ ನೂತನ ಅಧ್ಯಕ್ಷರು ಗಾಂಧಿ ಕುಟುಂಬದ ಮಾತು ಕೇಳಬೇಕು, ಅವರ ಅಭಿಪ್ರಾಯ ಆಲಿಸಬೇಕು ಎಂದಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ಸಮಿತಿ, ಪಕ್ಷದ ವೇದಿಕೆಗಳಲ್ಲಿ ಗಾಂಧಿ ಕುಟುಂಬದ ಅಭಿಪ್ರಾಯಗಳನ್ನು ಅಧ್ಯಕ್ಷರು ಆಲಿಸಬೇಕು. ಬಳಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಚಿದಂಬರಂ ಹೇಳಿದ್ದಾರೆ.
ಯಾವ ಪಕ್ಷದಲ್ಲೂ ಇಲ್ಲದ ಆತಂಪಿಕ ಪ್ರಜಾಪ್ರಭುತ್ವ ಕಾಂಗ್ರೆಸ್‌ನಲ್ಲಿದೆ. ಇದಕ್ಕಾಗಿ ನಾನು ಮೊದಲು ಧ್ವನಿ ಎತ್ತಿದ್ದೆ. ಇದೀಗ ನೂತನ ಅಧ್ಯಕ್ಷರ ಮುಂದೆ ಹಲವು ಸವಾಲುಗಳಿವೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಇದೆ ಎಂದು ಚಿದಂಬರಂ ಹೇಳಿದ್ದಾರೆ.
ಗಾಂಧಿ ಕುಟುಂಬದ ಸಲಹೆ ಪಡೆಯಲು ನಾಚಿಕೆಯಿಲ್ಲ: ಖರ್ಗೆ
ನಾನು ಎಐಸಿಸಿ ಅಧ್ಯಕ್ಷನಾದರೆ ಪಕ್ಷದ ವ್ಯವಹಾರಗಳನ್ನು ನಡೆಸುವಲ್ಲಿ ಗಾಂಧಿ ಕುಟುಂಬದಿಂದ ಒಳ್ಳೆಯ ಸಲಹೆಗಳು ಬಂದರೆ ಪಡೆಯುತ್ತೇನೆ. ಇದರಲ್ಲಿ ನಾಚಿಕೊಳ್ಳುವುದು ಏನೂ ಇಲ್ಲ. ನೀವು ಸಲಹೆ ನೀಡಿದರೂ ಪಡೆಯುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು. ಗಾಂಧಿ ಕುಟುಂಬದ ಸಲಹೆ ಪಡೆಯುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ನಾನು ಪಕ್ಷದ ಅಧ್ಯಕ್ಷನಾದರೆ, ಪಕ್ಷದ ಬೆಳವಣಿಗೆಗೆ ಹೋರಾಡಿ ತಮ್ಮ ಶಕ್ತಿಯನ್ನು ಹಾಕಿರುವ ಗಾಂಧಿ ಕುಟುಂಬದ ಸಲಹೆ ಮತ್ತು ಬೆಂಬಲವನ್ನು ತೆಗೆದುಕೊಳ್ಳುತ್ತೇನೆ. ಒಳ್ಳೆಯ ಸಲಹೆಗಳನ್ನು ಪಡೆಯುವುದರಲ್ಲಿ ನಾಚಿಕೊಳ್ಳುವುದು ಏನೂ ಇರುವುದಿಲ್ಲ ಎಂದರು. ಬಿಜೆಪಿಯವರಿಗೆ ಚರ್ಚೆ ಮಾಡಲು ಬೇರೆ ವಿಚಾರವೇ ಇಲ್ಲ. ಕಳೆದ 20 ವರ್ಷಗಳಿಂದ ಸೋನಿಯಾ ಗಾಂಧಿ ಅವರು ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ತನ್ಮೂಲಕ ಬಡವರ ಹೊಟ್ಟೆತುಂಬುವ ಆಹಾರ ಭದ್ರತೆ, ಕಡ್ಡಾಯ ಶಿಕ್ಷಣ ಹಕ್ಕು, ನರೇಗಾದಂತಹ ಯೋಜನೆ ತಂದಿದ್ದಾರೆ. ಇಂತಹ ಯೋಜನೆಗಳಿಗೆ ಬೆಂಬಲ ನೀಡಬೇಕು. ಅವರ ಅನುಭವದಿಂದ ನೀಡುವ ಉತ್ತಮ ಸಲಹೆ ಪಡೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
