ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗಿನಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ನಿತ್ಯ ಕೆಟ್ಟಕೆಟ್ಟಕನಸು 'ಈ ಜನ್ಮದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ'

 ಬೆಳಗಾವಿ (ಆ.12): ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗಿನಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ನಿತ್ಯ ಕೆಟ್ಟಕೆಟ್ಟಕನಸುಗಳು ಬೀಳುತ್ತಿವೆ. ಆ ಕೆಟ್ಟಕನಸು ನನಸಾಗಲು ಸಾಧ್ಯವಿಲ್ಲ. ಈ ಜನ್ಮದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಿಯಾಗಿ ಆಡಳಿತ ಮಾಡಿದ್ದರೆ ಕಾಂಗ್ರೆಸ್‌ನವರೇ ಮತ್ತೆ ಅಧಿಕಾರಕ್ಕೆ ಬರುತ್ತಿದ್ದರು. ಈಗ ಚುನಾವಣೆಗೆ ಎರಡು ವರ್ಷಗಳ ಮೊದಲೇ ನಾನು ಮುಂದಿನ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಅಲ್ಲದೇ, ಡಿ.ಕೆ.ಶಿವಕುಮಾರ್‌, ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ ಎಲ್ಲರೂ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಇವರ ಕೆಟ್ಟಕನಸು ಎಂದಿಗೂ ನನಸಾಗುವುದಿಲ್ಲ. ಈ ಜನ್ಮದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ದಲಿತರನ್ನೇಕೆ ಸಿಎಂ ಮಾಡಲಿಲ್ಲ: ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ದಲಿತ ಮುಖ್ಯಮಂತ್ರಿಯನ್ನು ನೀವೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ನಮ್ಮಲ್ಲಿ ನಾಯಕತ್ವ ಬದಲಾವಣೆ ಆಗಿದ್ದ ಸಂದರ್ಭದಲ್ಲಿ ಸಿಎಂ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಸಿದ್ದರಾಮಯ್ಯನವರು ಬಿಜೆಪಿಯವರು ದಲಿತರನ್ನು ಸಿಎಂ ಮಾಡಲಿ ಎಂದು ಹೇಳಿಕೆ ನೀಡಿದರು. ಆದರೆ, ಇವರೇಕೆ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ದಲಿತರಿಗೆ ಕಾಂಗ್ರೆಸ್‌ ಕೊಡುಗೆ ಶೂನ್ಯವಾಗಿದೆ ಎಂದು ಆರೋಪಿಸಿದರು.

ಪಾಲಿಕೆಗಳಿಗೆ ಎಲೆಕ್ಷನ್ ಘೋಷಣೆ: ಚುನಾವಣೆ ಆಯೋಗದ ವಿರುದ್ಧ ಈಶ್ವರಪ್ಪ ಅಸಮಾಧಾನ

ಮುಂಚೆ ಬಿಜೆಪಿ ಬ್ರಾಹ್ಮಣರ ಪಕ್ಷ ಎಂಬ ಹಣೆಪಟ್ಟಿಇತ್ತು. ಈಗ ಹಿಂದೂಗಳ ಪಕ್ಷವಾಗಿ ಪರಿವರ್ತನೆಯಾಗಿದೆ. 27 ಜನ ಹಿಂದುಳಿದವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಓಬಿಸಿ ವರ್ಗಕ್ಕೆ ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣವನ್ನು ನಮ್ಮ ಸರ್ಕಾರ ಹೆಚ್ಚಿಸಿದೆ ಎಂದು ಹೇಳಿದರು.

 ಮೃದು ಧೋರಣೆ ಪ್ರಶ್ನೆಯೇ ಇಲ್ಲ:ಜೆಡಿಎಸ್‌ ನಾಯಕರ ಬಗ್ಗೆ ಬಿಜೆಪಿ ಮೃದು ಧೋರಣೆ ತೋರುವ ಪ್ರಶ್ನೆಯೇ ಇಲ್ಲ. ಬಿಜೆಪಿ ರಾಜಕೀಯ ಪಕ್ಷ. ಜೆಡಿಎಸ್‌ ಕೂಡ ರಾಜಕೀಯ ಪಕ್ಷ. ಮೃದು ಧೋರಣೆ ತೋರುವುದನ್ನು ಬಿಟ್ಟು ಕರೆದುಕೊಂಡು ಬಂದು ಹೊಡೆಯೋಣವೇ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರ ಪೂರ್ಣಾವಧಿ ಪೂರೈಸಲಿದೆ. ಯಾರ ಬೆಂಬಲವೂ ನಮಗೆ ಈಗ ಬೇಡ ಎಂದರು.

 ಹರಿಪ್ರಸಾದ್‌ ಕ್ಷಮೆ ಕೇಳಬೇಕಲ್ವಾ?:ನಾನು ನಾಗಪುರದಲ್ಲಿ ತರಬೇತಿ ಪಡೆದಿದ್ದೇನೆ. ಸುಸಂಸ್ಕೃತ ಎಂಬ ಕಾರಣಕ್ಕೆ ಶಿವಮೊಗ್ಗ ಜನತೆ ನನ್ನನ್ನು ಐದು ಬಾರಿ ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ. ನಾನು ಬಳಸಿದ ಪಕ್ಕೆ ಕ್ಷಮೆ ಕೇಳಿದ್ದೇನೆ. ಹರಿಪ್ರಸಾದ್‌ ಕೂಡ ಕ್ಷಮೆ ಕೇಳಬೇಕಲ್ಲವೇ? ಕ್ಷಮೆ ಕೇಳಿದರೆ ಇಟಲಿ ಯೂನಿವರ್ಸಿಟಿಯವರು ಒಳ್ಳೆಯ ಬುದ್ಧಿ ಹೇಳಿಕೊಟ್ಟಿದ್ದಾರೆ ಎನ್ನುತ್ತಿದ್ದೆ. ನನ್ನ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್‌ ನಾಯಕರು ಹರಿಪ್ರಸಾದ ಅವರಿಗೇಕೆ ಬುದ್ಧಿ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.