*   ಆಡಳಿತದಲ್ಲಿ ಬಿಜೆಪಿ ವಿಫಲ*   ದಿವಾಳಿಯಾದ ರಾಜ್ಯ ಸರ್ಕಾರ*   ಶ್ರೀರಾಮುಲು ರಕ್ತ ಲವ್‌ ಲೆಟರ್‌ ಬರೆಯಲು ಯೋಗ್ಯವೇ ಹೊರತು ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಅಲ್ಲ 

ಬೆಂಗಳೂರು(ಡಿ.01): ಸುಳ್ಳು ಹೇಳುವುದು, ಮೋಸ, ವಂಚನೆ ಮಾಡುವುದೇ ಬಿಜೆಪಿಯ(BJP) ಆಸ್ತಿಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌(DK Suresh) ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಹಿನ್ನೆಲೆ ಮಂಗಳವಾರ ಕೆಂಗೇರಿ ವ್ಯಾಪ್ತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ವಿಫಲವಾಗಿದೆ ಎಂದು ಗುಡುಗಿದರು. ಕಳೆದ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌(Congress) ಗೆಲುವು ಸಾಧಿಸಿದೆ. ಈ ಬಾರಿಯು ಪರಿಷತ್‌ ಚುನಾವಣೆಯಲ್ಲಿ ಸ್ಥಳಿಯ ಸಂಸ್ಥೆಗಳ ಸದಸ್ಯರು ನಿರ್ಭೀತಿಯಿಂದ ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಕೋರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ(Ramalinga Reddy) ಮಾತನಾಡಿ, ಯೂಸುಫ್‌ ಷರೀಫ್‌ ಬಗೆಗಿನ ಹತ್ತು ವರ್ಷದ ಹಳೆಯ ಎಫ್‌ಐಆರ್‌ ಕುರಿತು ಪ್ರಸ್ತಾಪಿಸಿರುವ ಸ್ಥಳೀಯ ಶಾಸಕರು ಸೀಡಿ ಬಿಡುಗಡೆ ವಿಚಾರದಲ್ಲಿ ಏಕೆ ನ್ಯಾಯಾಲಯದಿಂದ(Court) ಮಧ್ಯಂತರ ತಡೆ ತಂದರು ಎಂದು ಪ್ರಶ್ನಿಸಿದರು. ಯೂಸುಫ್‌ ಷರೀಫ್‌ ವಿರುದ್ಧದ ದೂರು ಸುಖಾಂತ್ಯವಾಗಿದೆ ಎಂದರು.

Karnataka Politics : ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೆಂದು ಜಿಟಿಡಿ ಪೂಜೆ

ಆನೇಕಲ್‌, ಯಲಹಂಕ, ಮಾದೇವಪುರ, ಬ್ಯಾಟರಾಯನಪುರ ಯಶವಂತಪುರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ ಕ್ರಾಂತಿಗೆ ಶ್ರಮಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿ ಯೂಸುಫ್‌ ಷರೀಫ್‌ ಡಿ ಬಾಬು (ಕೆಜಿಎಫ್‌ ಬಾಬು) ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸ್ವಾಮಿ, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ರಾಜಕುಮಾರ್‌, ಚುನಾವಣೆ ವೀಕ್ಷಕ ಉಸ್ತುವಾರಿ ಹನುಮಂತಪ್ಪ, ಮುಖಂಡರಾದ ಸದಾನಂದ, ನಾಗರಾಜ್‌, ಎಸ್‌.ಬಾಲರಾಜ್‌ ಗೌಡ್ರು ಮತ್ತು ಕಾಂಗ್ರೆಸ್‌ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.

ದಿವಾಳಿಯಾದ ರಾಜ್ಯ ಸರ್ಕಾರ

ಹೊಳಲ್ಕೆರೆ: ಬಿಜೆಪಿ ಅಧಿಕಾರಕ್ಕೆ ಬಂದ ಕ್ಷಣದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಮಾಜಿ ಸಚಿವ ಎಚ್‌.ಆಂಜನೇಯ(H Anjaneya) ದೂರಿದರು.

ಪಟ್ಟಣದ ಶಾದಿ ಮಹಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿಧಾನಪರಿಷತ್‌ ಚುನಾವಣೆ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ(BJP Government) ಕೇಂದ್ರ ಮತ್ತು ರಾಜ್ಯದ ಅಧಿ​ಕಾರ ವಹಿಸಿಕೊಂಡ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹಾಗಾಗಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು. ಅಧಿಕಾರಕ್ಕೆ ಬಂದು ಇಷ್ಟು ವರ್ಷ ಕಳೆದರೂ ಬಡರಿಗೆ ವಸತಿ ಕಲ್ಪಿಸಿಲ್ಲ. ವೃದ್ಧರಿಗೆ ಮಾಸಾಶನ ನೀಡುವುದು ಸೇರಿ ಅನೇಕ ಯೋಜನೆಗಳಿಗೆ ಹಣ ನೀಡದೆ ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 5,057 ಮತಗಳಿವೆ. ಅದರಲ್ಲಿ ಕಾಂಗ್ರೆಸ್‌ ಬೆಂಬಲಿತ 3,500 ಗ್ರಾಪಂ ಸದಸ್ಯರಿದ್ದಾರೆ. ಹೀಗಾಗಿ, ಇತರೆ ಪಕ್ಷದ 500ಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ್‌ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, 2013-18ರವೆರೆಗೆ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ, ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದವು. ಆದರೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸಗಳು ಎಲ್ಲೂ ಕಾಣುತ್ತಿಲ್ಲ. ಹೀಗಾಗಿ, ಮತದಾರರು ಕಾಂಗ್ರೆಸ್‌ ಸಾಧನೆಗಳನ್ನು ಅರಿತು ಮತ ನೀಡಬೇಕು ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅ​ಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಸಾಧನೆಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಅವ​ಧಿಯಲ್ಲಿ ಹಿಂದುಳಿದ ವರ್ಗ, ದಲಿತರು ಹಾಗೂ ಎಲ್ಲ ವರ್ಗದ ಜನರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನ ಕೆರೆಗಳನ್ನು ಸೇರಿಸಿದ್ದು ಹಾಗೂ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಜಿಲ್ಲೆಯಲ್ಲಿ ಮತ್ತಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಮಶೇಖರ್‌ ಅವರನ್ನು ಗೆಲ್ಲಿಸಬೇಕು ಎಂದು ಗ್ರಾಪಂ ಸದಸ್ಯರಲ್ಲಿ ಮನವಿ ಮಾಡಿದರು.

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಸೋಮಶೇಖರ್‌ ಅವರು ಸ್ಪರ್ಧೆ ಮಾಡಿರುವುದರಿಂದ ಇಡೀ ಜಿಲ್ಲೆಯಲ್ಲಿ ಉತ್ಸಾಹದ ವಾತಾವರಣ ಮೂಡಿದೆ. ಕಾಂಗ್ರೆಸ್‌ ಅಭಿವೃದ್ಧಿ ಕೆಲಸಗಳನ್ನು ಮಾಡಿ ಮತ ಕೇಳುತ್ತಿದೆ. ಬಿಜೆಪಿ ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುತ್ತಿದೆ ಎಂದರು.

Council Election Karnataka: ರಾಜಕೀಯ ಕುತೂಹಲ ಹುಟ್ಟು ಹಾಕಿದ ನಡೆ : ನಿಖಿಲ್‌ಗೆ ಸಾರಥ್ಯ?

ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಮಾತನಾಡಿ, ಸಚಿವ ಶ್ರೀರಾಮುಲು(B Sriramulu) ಡಿಸಿಎಂ ಆಗುತ್ತೇನೆ, ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇನೆ, ಎಸ್‌ಟಿ ಮೀಸಲಾತಿಯನ್ನು ಶೇ.7.5ಕ್ಕೆ ಏರಿಸುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಚುನಾವಣೆ ಗೆದ್ದರು. ಆದರೆ, ಒಂದೇ ಒಂದು ಭರವಸೆಯನ್ನು ಅವರಿಂದ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ, ಶ್ರೀರಾಮುಲು ಅವರ ರಕ್ತ ಲವ್‌ ಲೆಟರ್‌ ಬರೆಯಲು ಯೋಗ್ಯವೇ ಹೊರತು ಮೀಸಲಾತಿ(Reservation) ಹೆಚ್ಚಳ ಮಾಡುವುದಕ್ಕೆ ಅಲ್ಲ ಎಂದು ವಾಲ್ಮೀಕಿ ಸ್ವಾಮೀಜಿಗಳು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಕಾಂಗ್ರೆಸ್‌ನಿಂದ ಗೆದ್ದಂತಹ ರಘು ಆಚಾರ್‌ ಜಿಲ್ಲೆಯಲ್ಲಿಯೇ ಇದ್ದರು. ಆದರೆ, ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಎಷ್ಟು ಬಾರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ, ಎಷ್ಟು ಬಾರಿ ಜಿಲ್ಲಾ ಮಟ್ಟದ ಅ​ಧಿಕಾರಿಗಳ ಸಭೆ ಕರೆದಿದ್ದಾರೆ, ಮಳೆ ಹಾನಿ ಸಂದರ್ಭದಲ್ಲಿ ಯಾವ ತಾಲೂಕಿಗೆ ಭೇಟಿ ಕೊಟ್ಟಿದ್ದಾರೆ, ಯಾವ ಬಡ ಜನರ ಸಮಸ್ಯೆ ಆಲಿಸಿದ್ದಾರೆ ಎಂಬ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಅಭ್ಯರ್ಥಿ ಸೋಮಶೇಖರ್‌, ಮಾಜಿ ಶಾಸಕ ಎ.ವಿ.ಉಮಾಪತಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಡಿಸಿಸಿ ಕಾರ್ಯಾಧ್ಯಕ್ಷ ಹಾಲಸ್ವಾಮಿ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್‌, ಅಸಂಘಟಿತ ಕಾರ್ಮಿಕರ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್‌.ಮಂಜುನಾಥ, ಡಿಸಿಸಿ ಮಾಜಿ ಅಧ್ಯಕ್ಷ ಫಾತ್ಯರಾಜನ್‌, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‌ ಬಾಬು, ಮಾಜಿ ಸದಸ್ಯರಾದ ಆರ್‌.ನರಸಿಂಹರಾಜು, ಡಿ.ಕೆ.ಶಿವಮೂರ್ತಿ, ಕೃಷ್ಣಮೂರ್ತಿ, ಡಾ.ಅನಂತ್‌, ಮಹಿಳಾ ಘಟಕದ ಅಧ್ಯಕ್ಷೆ ಗೀತ ನಂದಿನಿಗೌಡ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಉಲ್ಲಾಸ್‌, ಹೊಳಲ್ಕೆರೆ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಂಪತ್‌ ಕುಮಾರ್‌, ಡಿ.ಎನ್‌.ಮೈಲಾರಪ್ಪ ಉಪಸ್ಥಿತರಿದ್ದರು.