ಸುಳ್ಳಿನ ಫ್ಯಾಕ್ಟರಿ ತಯಾರಿಸುತ್ತಿರುವ ಜೆಡಿಎಸ್: ಡಿ.ಕೆ. ಸುರೇಶ್ ವ್ಯಂಗ್ಯ
ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡು ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸಂಸದ ಡಿ.ಕೆ. ಸುರೇಶ್
ಮಾಗಡಿ(ನ.20): ಸುಳ್ಳಿನ ಫ್ಯಾಕ್ಟರಿ ತಯಾರಿಸುವ ಕಂಪನಿ ಜೆಡಿಎಸ್ ಪಕ್ಷವಾಗಿದ್ದು, ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಂಸದ ಡಿ.ಕೆ. ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ತಾಲೂಕಿನ ಬಿಸ್ಕೂರು ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ರವರ ಅನುದಾನದಲ್ಲಿ ನಿರ್ಮಾಣವಾಗಲಿರುವ ತಿಗಳ ಸಮುದಾಯ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾಗಿದ್ದಾಗ ಅವರು ನೀಡಿದ ಭರವಸೆಯನ್ನು ಈಡೇರಿಸಲು ಆಗಲಿಲ್ಲ.. 5 ಸಾವಿರ ವೃದ್ಧಾಪ್ಯ ವೇತನ ನೀಡುತ್ತೇನೆಂದು ಹೇಳಿದರು. ಆ ಮಾತನ್ನು ಮರೆತು ಹೋದರು. ಈಗ ರಾಜ್ಯದಲ್ಲಿ ನಾವೇ ಮಳೆ ಬರಿಸಿದ್ದು ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುತ್ತೇನೆಂದು ಮತ್ತೊಂದು ಯೋಜನೆ ಸಿದ್ಧ ಪಡಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಚುನಾವಣಾ ಆಯೋಗದ ಮೇಲೂ ಹಿಡಿತ ಸಾಧಿಸಲು ಹೊರಟ ಬಿಜೆಪಿ: ಡಿ.ಕೆ.ಸುರೇಶ್
ಶಾಸಕ ಎ.ಮಂಜುನಾಥ್‌ರವರು ಕೂಡ ಸುಳ್ಳಿನ ನಾಯಕರ ಜೊತೆ ಸೇರಿಕೊಂಡು ಸುಳ್ಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಕೇವಲ ಭಾಷಣಕ್ಕೆ ಸೀಮಿತರಾಗಿದ್ದು ಜನಗಳು ನಿಮ್ಮ ರಿಪೋರ್ಚ್ ಕಾರ್ಡ್ ನೋಡುತ್ತಿದ್ದು ಪಾಸಾ ಫೇಲಾ ಎಂಬುದನ್ನು ನಿರ್ಧಾರ ಮಾಡುತ್ತಾರೆ. ಯಾರದೊ ಅವಧಿಯ ಕಾಮಗಾರಿಗಳನ್ನು ನನ್ನದೇ ಎಂದು ಹೇಳುವುದು ಸರಿಯಲ್ಲ. ಭಾಷಣಕ್ಕೆ ಸೀಮಿತರಾಗುದು ಸರಿಯಲ್ಲ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕೆಂದು ಶಾಸಕರ ವಿರುದ್ಧವೂ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವು ಎಲ್ಲಾ ಸಮುದಾಯದ ನಾಯಕರಿಗೂ ಮನ್ನಡೆ ನೀಡುತ್ತಿದ್ದು ತಿಗಳ ಸಮುದಾಯದ ಪಿ.ಆರ್ ರಮೇಶ್ ಅವರಿಗೆ ಎಸ್.ಎಂ. ಕೃಷ್ಣರವರು ಮುಖ್ಯಮಂತ್ರಿ ಅವಧಿಯಲ್ಲಿ ಮೇಯರ್ ಮಾಡಲು ಡಿ.ಕೆ.ಶಿವಕುಮಾರ್ ಅವರ ಪಾತ್ರ ಮಹತ್ವದಾಗಿತ್ತು. ಈಗ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಅದೇ ಸಮುದಾಯದ ಮಾಜಿ ಶಾಸಕ ನರೇಂದ್ರಬಾಬುರವರು ಈಗ ಬಿಜೆಪಿಗೆ ಹೋಗಿ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿಯಲಿ ಎಂದು ಸುರೇಶ್ ಹೇಳಿದರು.
ಬಿಜೆಪಿಗೆ ಮಾಗಡಿಯಲ್ಲಿ ಠೇವಣಿ ಬಂದರೆ ದೀರ್ಘದಂಡ ನಮಸ್ಕಾರ:
ಮಾಜಿ ಶಾಸಕ ಬಾಲಕೃಷ್ಣ ಮಾತನಾಡಿ, ಮಾಗಡಿ ತಾಲೂಕಿನವರೇ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣರವರು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಠೇವಣಿ ತೆಗೆದುಕೊಂಡರೆ ಮಾಗಡಿ ಬಸ್ ನಿಲ್ದಾಣದ ಬಳಿ ದೀರ್ಘದಂಡ ನಮಸ್ಕಾರ ಮಾಡುತ್ತೇನೆ. ಅವರು ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುತ್ತಿಲ್ಲ. ಅವರ ಸಂಬಂಧಿಕರೇ ಜೆಡಿಎಸ್ ಪಕ್ಷದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತಿದ್ದಾರೆ. ಇದು ಬಿಜೆಪಿಯ ಸ್ಥಿತಿಯಾಗಿದ್ದು ಈಗ ಹರಕೆ ಕುರಿ ಪ್ರಸಾದ್ ಗೌಡ ಅವರನ್ನು ಬಿಜೆಪಿ ಪಕ್ಷದಿಂದ ನಿಲ್ಲಿಸುತ್ತಿದ್ದು, ಠೇವಣಿಕೂಡ ಬರುವುದಿಲ್ಲ ಎಂದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಸತೀಶ್ ಹೇಳಿಕೆ ದುರಾದೃಷ್ಟಕರ: ಬಿಜೆಪಿಗೆ ಹೋರಾಟ ಮಾಡುವ ನೈತಿಕತೆಯಿಲ್ಲ ಎಂದ ಡಿ.ಕೆ ಸುರೇಶ್
ಪಲಾಯನ ಮಾಡುವುದಿಲ್ಲ :
ತಿಪ್ಪಸಂದ್ರ ಹೋಬಳಿಯಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವಿರೋಧಿಗಳು ಕಲ್ಲು ಹೊಡೆದರು ನಾನು ಎದುರಿಕೊಂಡು ಪಲಾಯನ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಪಲಾಯನ ಮಾಡುವ ಸ್ಥಿತಿಗೆ ಬಂದಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾಮಗಾರಿಗಳು ಪೂರ್ಣವಾಗಿಲ್ಲ. ಶಾಸಕ ಎ.ಮಂಜುನಾಥ್ ರವರು 5 ವರ್ಷ ಅವಧಿ ಮುಗಿದಿದೆ. ಹೇಮಾವತಿ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದನ್ನು ಉತ್ತರಿಸಬೇಕೆಂದು ಹೇಳಿದರು.
ಪ್ರಧಾನ ಮಂತ್ರಿ ಆದರ್ಶಗ್ರಾಮ ಯೋಜನೆಯಡಿ ಯಲ್ಲಾಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದರು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ವಿಜಯಕುಮಾರ್, ಜೆ.ಪಿ. ಚಂದ್ರೇಗೌಡ, ಬಮುಲ್ ನಿರ್ದೇಶಕ ಕೆಇಬಿ ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಕೆ. ಧನಂಜಯ್ಯ, ಗ್ರಾಪಂ ಉಪಾಧ್ಯಕ್ಷ ಭಾಗ್ಯಮ್ಮ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ದೀಪ ಮುನಿರಾಜು, ಕಲ್ಪನಾ ಶಿವಣ್ಣ ಮರಿಗೌಡ, ನಾರಾಯಣಪ್ಪ, ದೊಡ್ಡಯ್ಯ, ಮಣಿಗನಹಳ್ಳಿ ಸುರೇಶ…, ಶೋಭಾ ಮತ್ತಿತರರು ಹಾಜರಿದ್ದರು.