ನಮ್ಮನ್ನು ಶತ್ರುಗಳ ರೀತಿ ನೋಡ್ತಾರೆ: ಮತ್ತೆ ಸಿಎಂ ಬಗ್ಗೆ ಹರಿಪ್ರಸಾದ್ ಕಿಡಿ
ನಿಷ್ಠಾವಂತ ಕಾರ್ಯಕರ್ತರು ಜಿಲ್ಲೆಗಳಲ್ಲಿ ಹಿಂದಿನಿಂದ ಕೆಲಸ ಮಾಡಿರುತ್ತಾರೆ. ಅವರಿಗೆ ಸ್ಥಾನಮಾನ ನೀಡಲು ಹೋದರೆ ಹೊಸ ನಾಯಕರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಾರೆ. ಇದನ್ನು ಮೀರಿ ನಿಷ್ಠಾವಂತ ಕಾರ್ಯಕರ್ತರಿಗೆ ರಕ್ಷಣೆ ಕೊಟ್ಟರೆ ಮಾತ್ರ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಜೀವಂತವಾಗಿ ಇರುತ್ತದೆ. ಕಾರ್ಯಕರ್ತರ ನೋವನ್ನು ಅರ್ಥ ಮಾಡಿಕೊಳ್ಳಬೇಕು: ಬಿ.ಕೆ.ಹರಿಪ್ರಸಾದ್

ಬೆಂಗಳೂರು(ಆ.21): ‘ದೇವರಾಜು ಅರಸು ಅವರು ವಿರೋಧಿ ಬಣದಲ್ಲಿದ್ದವರನ್ನೂ ಕರೆದು ಮಾತನಾಡಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ತಮ್ಮನ್ನು ವಿರೋಧಿಸಿದ್ದಾರೆ ಎಂದರೆ ಶತ್ರುಗಳಂತೆ ನೋಡಲಾಗುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇವರಾಜ ಅರಸು ಧೀಮಂತ ನಾಯಕ. ನಾನು, ರೇವಣ್ಣ, ಬೋಸ್‌ರಾಜು, ಕೆ.ಎಂ.ನಾಗರಾಜು, ನಝೀರ್ ಅಹ್ಮದ್, ಸಲೀಂ ಅಹ್ಮದ್ ಒಟ್ಟಾಗಿ ಬಂದವರು. ಅಶೋಕ್, ಕೆ.ಎಂ.ನಾಗರಾಜು, ರೇವಣ್ಣ ಅವರೆಲ್ಲ ದೇವರಾಜ ಅರಸು ಜೊತೆಗೆ ಇರುತ್ತಿದ್ದರು. ಹೀಗಾಗಿ ನಾವು ಬೇರೆ ಗುಂಪಿನಲ್ಲಿ ಇರುತ್ತಿದ್ದೆವು. ಯಾವತ್ತೂ ಸೇರುತ್ತಿರಲಿಲ್ಲ. ನಾವು ವಿರೋಧಿ ಗುಂಪಿನಲ್ಲಿ ಇದ್ದರೂ ಅರಸು ಅವರು ನಮ್ಮನ್ನು ಕರೆಸಿ ಮಾತನಾಡುತ್ತಿದ್ದರು’ ಎಂದರು.
ಬಿಜೆಪಿ ನಾಯಕರು, ಶಾಸಕರು ಭಯೋತ್ಪಾದಕರು: ಬಿ.ಕೆ.ಹರಿಪ್ರಸಾದ್
‘ನೀವೆಲ್ಲ ಕಪಿ ಸೈನ್ಯದ ಕಪಿಗಳು. ತುಂಬಾ ಚೇಷ್ಟೆ ಮಾಡಬೇಡಿ. ಚೇಷ್ಟೆ ಮಾಡಿದರೆ ವಿರೋಧ ಪಕ್ಷದವರು ಗಲಾಟೆ ಮಾಡುತ್ತಾರೆ. ನೀವು ನನ್ನ ವಿರೋಧಿ ಗುಂಪಿನಲ್ಲಿದ್ದರೂ ನಾನು ನಿಮ್ಮ ರಕ್ಷಣೆಗೆ ಇರುತ್ತೇನೆ ಎಂದು ಅರಸು ದೊಡ್ಡತನ ತೋರಿಸುತ್ತಿದ್ದರು. ಆದರೆ ಈಗ ಅದು ಇಲ್ಲವೇ ಇಲ್ಲ. ಯಾರಾದರೂ ವಿರೋಧಿಗಳ ಸಾಲಿನಲ್ಲಿ ಇದ್ದರೆ ಶತ್ರುಗಳ ಥರ ನೋಡುತ್ತಾರೆ. ಇಂಥ ಬಹಳ ಬದಲಾವಣೆಗಳನ್ನು ನಾವು ನೋಡಿದ್ದೇವೆ’ ಎಂದು ಹರಿಹಾಯ್ದರು.
ಡಿಕೆಶಿಗೂ ಟಾಂಗ್:
‘ಈಗಿನ ಪರಿಸ್ಥಿತಿಯೇ 1989ರಲ್ಲೂ ನನಗಾಗಿತ್ತು. ಗಾಂಧಿನಗರದಲ್ಲೂ ಟಿಕೆಟ್ ಇರಲಿಲ್ಲ, ಲೋಕಸಭೆಯ ಟಿಕೆಟೂ ಇರಲಿಲ್ಲ. ಆಗ ರಾಜೀವ್ ಗಾಂಧಿಯವರನ್ನು ನೋಡಲು ಹೋದಾಗ ಬೇಜಾರಾಗಿದೆಯಾ ಎಂದು ಕೇಳಿದ್ದರು. ಸರ್ಕಾರ ಬಂದ ಬಳಿಕ ರಾಜ್ಯಸಭೆಗೆ ಅವಕಾಶ ನೀಡುವುದಾಗಿ ಹೇಳಿದರು. ಸರ್ಕಾರ ಬಂದ ಬಳಿಕ ರಾಜ್ಯಸಭೆ ಸ್ಥಾನವನ್ನೂ ಕೊಡಲಿಲ್ಲ. ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿ ಬೆನ್ನು ತಟ್ಟಿಕಳಿಸಿದ್ದರು. ನಂತರ 1990ರಲ್ಲಿ ರಾಜ್ಯಸಭೆಗೆ ಅವಕಾಶ ನೀಡಿದರು. ಇದೇ ಗುಣವನ್ನು ಡಿ.ಕೆ.ಶಿವಕುಮಾರ್ ಕೂಡ ಅನುಸರಿಸುತ್ತಾರೆ ಎಂದು ತಿಳಿದುಕೊಂಡಿದ್ದೇನೆ’ ಎಂದರು.
‘ನಿಷ್ಠಾವಂತ ಕಾರ್ಯಕರ್ತರು ಜಿಲ್ಲೆಗಳಲ್ಲಿ ಹಿಂದಿನಿಂದ ಕೆಲಸ ಮಾಡಿರುತ್ತಾರೆ. ಅವರಿಗೆ ಸ್ಥಾನಮಾನ ನೀಡಲು ಹೋದರೆ ಹೊಸ ನಾಯಕರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಾರೆ. ಇದನ್ನು ಮೀರಿ ನಿಷ್ಠಾವಂತ ಕಾರ್ಯಕರ್ತರಿಗೆ ರಕ್ಷಣೆ ಕೊಟ್ಟರೆ ಮಾತ್ರ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಜೀವಂತವಾಗಿ ಇರುತ್ತದೆ. ಕಾರ್ಯಕರ್ತರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ ಕಾರ್ಯಕರ್ತರಿಗೆ ಕೆಲವೊಮ್ಮೆ ಯಾವ ಸ್ಥಾನವೂ ಸಿಗಲ್ಲ. ಅವರ ಮದುವೆಗೆ ಅರಸು ಅವರು ತಮ್ಮ ರಾಜಕೀಯ ಸಲಹೆಗಾರರ ಕೈಯಲ್ಲಿ ಹಣ (ಮುಯ್ಯಿ) ಕೊಟ್ಟು ಕಳಿಸುತ್ತಿದ್ದರು. ಇಂಥ ಕೆಲಸ ಆಗಬೇಕು’ ಎಂದರು.
ಸಿಎಂ ಇಳಿಸೋ ಹರಿಪ್ರಸಾದ್ ಹೇಳಿಕೆ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ: ಸತೀಶ್ ಜಾರಕಿಹೊಳಿ
‘ದೇವರಾಜ ಅರಸರು ಹಿಂದುಳಿದ ವರ್ಗ ಎಂದರೆ ಯಾವುದೇ ಒಂದು ಜಾತಿಗೆ ಮಾತ್ರ ಪ್ರಾಶಸ್ತ್ಯ ಕೊಡುತ್ತಿರಲಿಲ್ಲ. ಐದು ಸಾವಿರ ಜನಸಂಖ್ಯೆ ತುಂಬಾ ಸಣ್ಣ ಸಮುದಾಯಕ್ಕೂ ಒತ್ತು ನೀಡಿ ನಾಯಕರನ್ನು ಕರೆದು ಮಂಡಳಿಯ ಅಧ್ಯಕ್ಷ ಸ್ಥಾನ ನೀಡುತ್ತಿದ್ದರು. ಎಲ್ಲರನ್ನೂ ಸೇರಿಸಿ ನಾವು ರಾಜಕಾರಣ ಮಾಡಬೇಕು. ನಾವು ಬಲಾಢÜ್ಯರು, ನಮ್ಮ ಬಳಿ ಜನಸಂಖ್ಯೆ ಇದೆ, ನಾವು ಮಾತ್ರ ಅಧಿಕಾರ ಹಂಚಿಕೊಳ್ಳುತ್ತೇವೆ ಎಂದರೆ ಆಗುವುದಿಲ್ಲ. ಜನ ಮತ್ತೆ ಮನೆಗೆ ಕಳಿಸಿಬಿಡುತ್ತಾರೆ’ ಎಂದು ಹೇಳಿದರು.
‘ಕೆಲವು ಭಾಗದಲ್ಲಿ ಸಣ್ಣಸಣ್ಣ ಸಮುದಾಯಗಳು ಇರುತ್ತವೆ. ಅವರನ್ನ ಕರೆದು ನಿಗಮ, ಮಂಡಳಿ ಸ್ಥಾನ ನೀಡುವ ಕೆಲಸವನ್ನು ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಮಾಡಬೇಕು ಎಂದು ಹೇಳಿದರು. ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬರುವ ಮೊದಲು ಮಾತು ಕೊಟ್ಟಂತೆ ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಗಳನ್ನು ನಡೆಸಬೇಕು. ಚುನಾವಣೆಗಳು ನಡೆದಾಗ ಮಾತ್ರ ನಿಜವಾದ ನಾಯಕರು ಬರುತ್ತಾರೆ. ಇಲ್ಲದಿದ್ದರೆ ನಾಯಕರ ಬಳಿ ಬ್ಯಾಗ್ ಹಿಡಿದು ಓಡಾಡುವರು ನಾಯಕರಾಗುತ್ತಾರೆ’ ಎಂದರು.