‘ಪಕ್ಷದ ಕೆಲಸ ಮಾಡದವರಿಗೆ ಟಿಕೆಟ್‌ ಇಲ್ಲ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷರುಗಳಾದ ಆರ್‌.ವಿ.ದೇಶಪಾಂಡೆ ಮತ್ತು ದಿನೇಶ್‌ ಗುಂಡೂರಾವ್‌ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಸೆ.19): ‘ಪಕ್ಷದ ಕೆಲಸ ಮಾಡದವರಿಗೆ ಟಿಕೆಟ್‌ ಇಲ್ಲ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷರುಗಳಾದ ಆರ್‌.ವಿ.ದೇಶಪಾಂಡೆ ಮತ್ತು ದಿನೇಶ್‌ ಗುಂಡೂರಾವ್‌ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಈ ಮೂವರೂ ನಾಯಕರು ವಿವಿಧೆಡೆ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ಕಾಂಗ್ರೆಸ್‌ನಲ್ಲಿ ಯಾರೊ ಒಬ್ಬರು ಟಿಕೆಟ್‌ ಹಂಚಿಕೆ ನಿರ್ಧರಿಸಲು ಸಾಧ್ಯವಿಲ್ಲ. ಟಿಕೆಟ್‌ ನೀಡಲು ವಿವಿಧ ಸಮಿತಿಗಳಿರುತ್ತವೆ. ನಂತರ ಕೆಪಿಸಿಸಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರ ಅಭಿಪ್ರಾಯ ಪಡೆದು ಹೈಕಮಾಂಡ್‌ ಟಿಕೆಟ್‌ ಹಂಚಿಕೆಯನ್ನು ಅಂತಿಮಗೊಳಿಸುತ್ತದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Mandya: ಡಿ.ಕೆ.ಶಿವಕುಮಾರ್‌​-ನಿಖಿಲ್‌ ಕುಮಾರಸ್ವಾಮಿ ಪರಸ್ಪರ ಮುಖಾಮುಖಿ

ಬೆಂಗಳೂರಿನಲ್ಲಿ ಮಾತನಾಡಿದ ದೇಶಪಾಂಡೆ ಅವರು, ಶಿವಕುಮಾರ್‌ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಪಕ್ಷದಲ್ಲಿ ಯಾರೊ ಒಬ್ಬರು ಟಿಕೆಟ್‌ ನಿರ್ಧರಿಸುವುದಿಲ್ಲ. ಟಿಕೆಟ್‌ ಹಂಚಿಕೆಗೂ ಮೊದಲು ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಟಿಕೆಟ್‌ ಅಂತಿಮ ಮಾಡುವುದು ಪಕ್ಷದ ಹೈಕಮಾಂಡ್‌ ಎಂದು ಹೇಳಿದರು.

ನಾನು ಮತ್ತು ಕೆಪಿಸಿಸಿ ಅಧ್ಯಕ್ಷರು ಬಹಳ, ಪ್ರೀತಿ ವಿಶ್ವಾಸದಲ್ಲಿದ್ದೇವೆ. ಭಾರತ್‌ ಜೋಡೋ ಯಾತ್ರೆ ಯಶಸ್ವಿಯಾಗಬೇಕು ಎಂಬುದು ಅವರ ಉದ್ದೇಶ. ಪಕ್ಷದಿಂದ ಎಲ್ಲರೂ ಯಾತ್ರೆಯಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ. ಅವರ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಇದರಲ್ಲಿ ವ್ಯಕ್ತಿಗತ ಪ್ರತಿಷ್ಠೆ ಏನೂ ಇಲ್ಲ. ನಾನು ನನ್ನ ಕ್ಷೇತ್ರ ದೂರ ಇದೆ. ಯಾತ್ರೆಗೆ ಹೆಚ್ಚು ಜನ ಕರೆತರಲು ಆಗಲ್ಲ ಎಂದಿದ್ದೆ. ಅದಕ್ಕೆ ಅವರು ಒಪ್ಪಿದ್ದರು. ಒಂದು ಮನೆ ಎಂದ ಮೇಲೆ ನಾಲ್ಕು ಮಕ್ಕಳಿರುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಸಣ್ಣ ಪುಟ್ಟವಿಚಾರಗಳನ್ನು ದೊಡ್ಡದು ಮಾಡೋದು ಬೇಡ. ಎಲ್ಲರೂ ಒಟ್ಟಾಗಿ ಚುನಾವಣೆಗೆ ಹೋಗಬೇಕು. ಪಕ್ಷವನ್ನು ಅಧಿಕಾರಕ್ಕೆ ತರುವುದು ಎಲ್ಲರ ಗುರಿಯಾಗಬೇಕು ಎಂದು ಸಲಹೆ ನೀಡಿದರು.

ಟಿಕೆಟ್‌ ಹೈಕಮಾಂಡ್‌ ಅಂತಿಮಗೊಳಿಸುತ್ತೆ: ದಿನೇಶ್‌ ಗುಂಡೂರಾವ್‌ ಮಾತನಾಡಿ, ಟಿಕೆಟ್‌ ವಿಚಾರದಲ್ಲಿ ಒಬ್ಬರು ತೀರ್ಮಾನಿಸಲು ಸಾಧ್ಯವಿಲ್ಲ. ಎಲ್ಲರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಸ್ಥಳೀಯ ಮಟ್ಟದಲ್ಲೂ ಅಭ್ಯರ್ಥಿಗಳ ವಿಚಾರವಾಗಿ ಮಾಹಿತಿ ಪಡೆಯಬೇಕಾಗುತ್ತದೆ. ರಾಜ್ಯ, ಕೇಂದ್ರ ಮಟ್ಟದ ಚುನಾವಣೆ ಸಮಿತಿ, ಸ್ಕ್ರೀನಿಂಗ್‌ ಕಮಿಟಿ ಇರುತ್ತದೆ. ಮೊದಲು ಇಲ್ಲಿ ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಆ ಬಳಿಕ ಹೈಕಮಾಂಡ್‌ ಟಿಕೆಟ್‌ ಅಂತಿಮಗೊಳಿಸುತ್ತದೆ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದನ್ನೂ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕೆಂದು ಶಾಸಕರ ಅಭಿಪ್ರಾಯ ಪಡೆಯಲಾಗುತ್ತದೆ. ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಇರುತ್ತದೆ. ಎಲ್ಲವನ್ನೂ ಹೈಕಮಾಂಡ್‌ ಮಾಡುತ್ತದೆ. ಯಾರೋ ಒಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ನಾವು ಎಲ್ಲ ನಾಯಕರೂ ಒಟ್ಟಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಿ ಮೊದಲು ಪಕ್ಷದವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ: ಮತ್ತೊಮ್ಮೆ ಶಾಸಕರಿಗೆ ಎಚ್ಚರಿಕೆ ನೀಡಿದ ಡಿಕೆಶಿ

ಎಲ್ಲರೂ ಸೇರಿ ಟಿಕೆಟ್‌ ನಿರ್ಧಾರ: ಮತ್ತೊಂದೆಡೆ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ರಾಯರೆಡ್ಡಿ, ಪಕ್ಷದ ಕೆಲಸ ಮಾಡದವರಿಗೆ ಟಿಕೆಟ್‌ ಇಲ್ಲ ಎಂದು ಶಿವಕುಮಾರ್‌ ಅವರು ನೀಡಿರುವ ಹೇಳಿಕೆಯಲ್ಲಿ ತಪ್ಪೇನಿಲ್ಲ. ಆದರೆ, ಪಕ್ಷದಲ್ಲಿ ಚುನಾವಣೆಗೆ ಟಿಕೆಟ್‌ ನೀಡುವಾಗ ಎಲ್ಲರೂ ಸೇರಿಕೊಂಡೇ ನಿರ್ಧಾರ ಮಾಡುತ್ತಾರೆ, ಚುನಾವಣಾ ಸಮಿತಿ ಇರುತ್ತದೆ. ಒಬ್ಬರ ನಿರ್ಧಾರ ಅಂತಿಮವಾಗುವುದಿಲ್ಲ ಎಂದು ಹೇಳಿದರು.