* ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಡಿಕೆಶಿ-ಜಮೀರ್ ಮಧ್ಯೆ ಮುಸುಕಿನ ಗುದ್ದಾಟ* ಡಿಕೆ ಶಿವಕುಮಾರ್‌ಗೆ ಡಿಚ್ಚಿ ಕೊಟ್ಟ ಜಮೀರ್ ಅಹಮ್ಮದ್ ಖಾನ್* ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ಜಮೀರ್

ಹುಬ್ಬಳ್ಳಿ, (ಫೆ.14): ಹಿಜಾಬ್​ ವಿವಾದಕ್ಕೆ (Hija Row) ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ಶಾಸಕ ಜಮೀರ್ ಅಹಮ್ಮದ್ ಖಾನ್ (BZ Zameer Ahmed Khan)ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಹಿಜಾಬ್‌ ಬಗ್ಗೆ ನಾನು ಮಾತನಾಡುತ್ತೇನೆ. ನಾನು ಕ್ಷಮೆ ಕೇಳುವಂತಹ ಯಾವುದೇ ಹೇಳಿಕೆ ನೀಡಿಲ್ಲ. ನಾನು ಯಾಕೆ ಕ್ಷಮೆಯಾಚಿಸಬೇಕು ಎಂದು ಹೇಳುವ ಮೂಲಕ ಶಿವಕುಮಾರ್​ಗೆ ಡಿಚ್ಚಿ ಕೊಟ್ಟರು.

Hijab Row: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಜನರ ಕ್ಷಮೆ ಕೇಳಬೇಕು: ಡಿಕೆಶಿ

 ಹಿಜಾಬ್ (Hijab)​ ಹಾಕಬೇಕು ಎಂದು ನಾನು ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ. ಹೆಲ್ಮೆಟ್​ ರೀತಿ ಹಿಜಾಬ್​ ಹಾಕಬೇಕು ಎಂದು ಹೇಳಿದ್ದೆ. ಹೆಲ್ಮೆಟ್ ಹೇಗೆ ಸೇಫ್ಟಿ ಕೊಡುತ್ತೋ ಹಾಗೇ ಹಿಜಾಬ್​ ನೀಡುತ್ತೆ. ಹೆಲ್ಮೆಟ್​ ಕಡ್ಡಾಯವಿದ್ದರೂ ಕೆಲ ಬೈಕ್ ಸವಾರರು ಹಾಕಲ್ಲ. ಅದೇ ರೀತಿ ಬಹಳ ಜನ ಹಿಜಾಬ್​ ಕೂಡ ಹಾಕುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್​ ಹೇಳಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು. ಮೊದಲೇ ಹೇಳಿದ್ದೆ ಮಾತನಾಡಬಾರದು ಅಂತಾ. ಆದರೂ ಕೆಲವರು ಮಾತನಾಡಿದ್ದಾರೆ, ಜಮೀರ್ ತಮ್ಮ ಹೇಳಿಕೆಯನ್ನ ವಾಪಸ್ ಪಡೆಯಲು ಹೇಳುತ್ತೇನೆ ಎಂದು ಹೇಳಿದ್ದರು.

ಹುಬ್ಬಳ್ಳಿಯಲ್ಲಿ ನಿನ್ನೆ (ಫೆ. 13) ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಜಮೀರ್ ಅಹ್ಮದ್​ಖಾನ್​ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವಿವಿಧ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. 

ಹಿಜಾಬ್​ ಅಂದ್ರೆ ಮುಸಲ್ಮಾನರಲ್ಲಿ ಗೋಶಾಪರದ ಅಂತ ಹೇಳ್ತೇವೆ. ಅವರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಿದ್ದರೆ ಗೊತ್ತಾಗುತ್ತಿತ್ತು. ಹೆಣ್ಣುಮಕ್ಕಳು ತಮ್ಮ ರಕ್ಷಣೆಗಾಗಿ ಹಿಜಾಬ್​ ಧರಿಸುತ್ತಾರೆ. ಹೆಣ್ಣುಮಕ್ಕಳು ದೊಡ್ಡವರಾದ ಮೇಲೆ ದೇಹರಚನೆ ಕಾಣಿಸಬಾರದು. ದೇಹರಚನೆ ಹೊರಗೆ ಕಾಣಿಸಬಾರದು ಎಂದು ಹಿಜಾಬ್​ ಬಳಸ್ತಾರೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವುದು ಭಾರತದಲ್ಲಿ. ಹಿಜಾಬ್​ ಹಾಕದಿರುವ ಕಾರಣದಿಂದ ಇಂತಹ ಘಟನೆ ನಡೆದಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದರು.

ಸಮರ್ಥಿಸಿಕೊಂಡ ಜಮೀರ್
ಹಾವೇರಿ(Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಖಾದ್ರಿ ದರ್ಗಾ ಬಳಿ ಮಾತನಾಡಿರುವ ಜಮೀರ್ , ಸೌಂದರ್ಯ ಕಾಣದಿರಲು ಹಾಗೂ ತಮ್ಮ ರಕ್ಷಣೆಗಾಗಿ ಹಿಜಾಬ್‍ನ್ನು ಧರಿಸುತ್ತಾರೆ ಎಂದಿದ್ದೆ. ಈ ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ನಾನು ಹಿಜಾಬ್ ಹಾಕದೇ ಇದ್ದರೆ ರೆಪ್ ಆಗುತ್ತೆ ಎಂದು ಹೇಳಿಲ್ಲ. ಬೇರೆಯವರು ಗೊಂದಲ ಸೃಷ್ಟಿ ಮಾಡಿಕೊಂಡರೆ ನಾನು ಏನು ಮಾಡಲಿ? ಹಿಜಬ್ ಹಾಕಿದರೆ ಬ್ಯೂಟಿ ಕಾಣಲ್ಲ, ಸೇಫ್ಟಿಗಾಗಿ ಹಾಕ್ಕೊತಾರೆ ಎಂದು ಹೇಳಿದ್ದೆ. ಬೇರೆಯವರ ಕಣ್ಣು ಬೀಳಬಾರದು ಎಂದು ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳುತ್ತಾರೆ ಅಷ್ಟೇ ಎಂದು ಹೇಳಿದರು.

ನಮ್ಮಲ್ಲಿ ರೇಪ್ ರೆಟ್ ಜಾಸ್ತಿ ಇದೆ. ಈ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಿಕೊಳ್ಳಲಾಗಿದೆ. ಕೆಲವರು ಹಿಜಾಬ್ ಹಾಕುತ್ತಾರೆ, ಕೆಲವರು ಹಾಕಲ್ಲ. ಇಸ್ಲಾಂನಲ್ಲಿ ಹಿಜಾಬ್ ಹಾಕಬೇಕು ಎಂದು ಇದೆ ಎಂದು ತಿಳಿಸಿದರು

ಜಮೀರ್ ಅಹ್ಮದ್ ಹೇಳಿದ್ದೇನು?
ಹಿಜಾಬ್‌ ಎನ್ನುವುದು ಮುಸಲ್ಮಾನದಲ್ಲಿ ಪರದೆ ಎಂದರ್ಥ. ಇದನ್ನು ಯಾರು ವಿರೋಧ ಮಾಡುತ್ತಿದ್ದಾರೋ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲ ಎನ್ನಿಸುತ್ತದೆ. ಹೆಣ್ಣುಮಕ್ಕಳಿದ್ದರೆ ಅವರಿಗೆ ಇದರ ಬಗ್ಗೆ ಗೊತ್ತಿರುತ್ತಿತ್ತು. ಮಹಿಳೆಯರ ಸೌಂದರ್ಯವನ್ನು ಪರ ಪುರುಷರು ನೋಡಬಾರದು, ಅವರಿಂದ ಮುಚ್ಚಿಡಲು ಹಿಜಾಬ್‌, ಬುರ್ಕಾ ಬಳಸಲಾಗುತ್ತದೆ. ನನ್ನ ಪ್ರಕಾರ ಪ್ರಸ್ತುತ ಭಾರತದಲ್ಲೇ ಅತೀ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು? ಬುರ್ಕಾ, ಪರದೆಯಲ್ಲಿ ಇರದೇ ಇರುವುದೆ ಇದಕ್ಕೆ ಕಾರಣವಾಗಿದೆ. ಹಿಜಾಬ್‌ ಇವತ್ತು, ನಿನ್ನೆಯ ವಿಚಾರವಲ್ಲ. ಅನಾದಿ ಕಾಲದಿಂದ ನಡೆದುಬಂದ ಪದ್ಧತಿ. ಅಷ್ಟಕ್ಕೂ ಹಿಜಾಬ್‌ ಕಡ್ಡಾಯವಲ್ಲ. ಯಾರಿಗೆ ಇಷ್ಟವಿಲ್ಲವೋ ಅವರು ಧರಿಸದಿದ್ದರೂ ನಡೆಯುತ್ತದೆ. ಯಾರಿಗೆ ತಮ್ಮ ಸೌಂದರ್ಯ ಮುಚ್ಚಿಡಬೇಕು ಎಂದೆನಿಸುತ್ತದೊ ಅವರು ಹಿಜಾಬ್‌ ಧರಿಸುತ್ತಾರೆ ಎಂದಿದ್ದರು.