ವಿಜಯಪುರ, (ಜೂನ್.26): ಕಳೆದ 25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಧುರೀಣರಾದ ಎಸ್.ಟಿ.ಸೋಮಶೇಖರ್ ಅವರು ಸಚಿವರಾಗಿ ಬಂದಿರುವುದು ಸಹಕಾರಿ ವಲಯಕ್ಕೆ ಬಲ ಬಂದಂತಾಗಿದೆ ಎಂದು ಮಾಜಿ ಸಚಿವ, ಶಾಸಕರು ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಶಿವಾನಂದ ಪಾಟೀಲ್ ಗುಣಗಾನ ಮಾಡಿದ್ದಾರೆ.

ಇಂದು (ಶುಕ್ರವಾರ) ವಿಜಯಪುರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಸಹಕಾರಿಗಳಲ್ಲದವರೂ ಸಹಕಾರ ಇಲಾಖೆ ಸಚಿವರಾದಾಗ ಈ ಕ್ಷೇತ್ರದ ಬಗ್ಗೆ ಅರಿವಿಲ್ಲದೆ, ಇಲಾಖೆಯನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಆದರೆ, ಇಂದು ಸ್ವತಃ ಸಹಕಾರಿಗಳಾದ ಸೋಮಶೇಖರ್ ಅವರು ಸಹಕಾರ ಸಚಿವರಾಗಿರುವುದರಿಂದ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿಯ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಇಲಾಖೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.

ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ! 

ಸಹಕಾರಿ ರಂಗದಲ್ಲಿ ಅನೇಕ ಮಂತ್ರಿಗಳು ಬಂದು ಹೋಗಿರುತ್ತಾರೆ. ಆದರೆ, ಸಹಕಾರಿಗಳ ಬೆನ್ನಿಗೆ ನಿಲ್ಲುವಂತಹ ಹಾಗೂ ಬದಲಾವಣೆಯ ಹಾದಿಯಲ್ಲಿ ಇಲಾಖೆಯನ್ನು ಮುನ್ನಡೆಸುವಂತಹ ಸಚಿವರು ಈಗ ಸಿಕ್ಕಿದ್ದಾರೆಂದು ಎಂದು ಬಣ್ಣಿಸಿದರು,

ವಿಜಯಪುರ ಜಿಲ್ಲಾ ಸಹಕಾರ ಬ್ಯಾಂಕ್ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 1 ಕೋಟಿ ರುಪಾಯಿ ದೇಣಿಗೆಯನ್ನು ನೀಡಿದೆ. ಇನ್ನು ರೈತರು ಸಾಲ ಪಡೆಯಲು ಅನೇಕ ಅಡೆತಡೆಗಳಿದ್ದು, ಅವುಗಳನ್ನು ನಿವಾರಣೆ ಮಾಡಬೇಕು ಎಂದು ಇದೇ ವೇಳೆ ಸಚಿವರಲ್ಲಿ ಮನವಿ ಮಾಡಿದರು.

ವಿಜಯಪುರ ಡಿಸಿಸಿ ಬ್ಯಾಂಕ್ ವೈಖರಿಗೆ ಸಂತಸ

ಸಹಕಾರ ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಕೊಡಮಾಡುವ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ಚೆಕ್ ವಿತರಣೆ ಮಾಡಿ ಮಾತನಾಡಿದ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ವಿಜಯಪುರ ಜಿಲ್ಲಾ ಸಹಕಾರಿ ಬ್ಯಾಂಕ್ ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಪರವಾಗಿ ಸ್ತ್ರೀಶಕ್ತಿ, ಮಹಿಳೆಯರು, ಬಡವರ ಬಂಧು, ಕಾಯಕ ಯೋಜನೆ ಅಡಿಯಲ್ಲಿ ಎಲ್ಲ ವರ್ಗಕ್ಕೂ ಪ್ರಾತಿನಿಧ್ಯವಾಗಿ ಸಾಲವನ್ನು ನೀಡಿದ್ದು, ಶಿವಾನಂದ ಪಾಟೀಲ್ ಅವರ ರೈತಪರ ನಿಲುವಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಾಲ ಪಡೆದು ಮರುಪಾವತಿಸಿ
ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಬ್ಯಾಂಕ್ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ. ಸಹಕಾರಿ ಬ್ಯಾಂಕುಗಳ ಆಡಳಿತ ಮಂಡಳಿಗಳು ಗ್ರಾಹಕರ ಮತ್ತು ರೈತರ ಪರವಾಗಿ ಕಾರ್ಯನಿರ್ವಹಣೆ ಮಾಡಬೇಕೆಂದು ಸಚಿವರು ಕಿವಿಮಾತು ಹೇಳಿದರಲ್ಲದೆ, ಸಾಲ ಪಡೆದ ಗ್ರಾಹಕರು ಸಹ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಅವರು ಕಾಲಕಾಲಕ್ಕೆ ಮರುಪಾವತಿಯನ್ನು ಮಾಡಬೇಕು ಎಂದರು.

ಜೂನ್ 6ರಂದು ಸಹಕಾರಿಗಳ ಸಭೆ
ಬರುವ ಜೂನ್ 6ರಂದು ರಾಜ್ಯದ ಎಲ್ಲ ಸಹಕಾರಿ ಬ್ಯಾಂಕ್ ಗಳ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದು ರೈತರಿಗೆ ನೀಡಲಾಗಿರುವ ಯೋಜನೆಯ ಪ್ರಗತಿ ಪರಿಶೀಲನೆ ಮಾಡಲಾಗುತ್ತದೆ. ಈವರೆಗೆ ರೈತರಿಗೆ ನೀಡಿರುವ ಸಾಲಗಳು ಎಷ್ಟು? ಬಡವರ ಬಂಧು, ಕಾಯಕ, ಸ್ತ್ರಿಶಕ್ತಿ ಸಂಘಗಳು, ಎಸ್ಸಿಎಸ್ಟಿಗಳು ಸೇರಿದಂತೆ ಯಾವ ಯಾವ ವರ್ಗದವರಿಗೆ ಎಷ್ಟು ಸಾಲಗಳನ್ನು ವಿತರಣೆ ಮಾಡಲಾಗಿದೆ? ಎಷ್ಟು ಹೊಸ ರೈತರಿಗೆ ಸಾಲವನ್ನು ಕೊಟ್ಟಿದ್ದಾರೆ? ಸಮಸ್ಯೆಗಳಿದ್ದರೆ ಏನು? ಅವುಗಳಿಗೆ ಯಾವ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬಿತ್ಯಾದಿ ವಿಚಾರಗಳನ್ನು ಈ ವೇಳೆ ಚರ್ಚಿಸಲಾಗುವುದು ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.