Asianet Suvarna News Asianet Suvarna News

ದ್ವೇಷದ ರಾಜಕೀಯಕ್ಕೆ ಜನರಿಂದಲೇ ಪಾಠ: ಸತೀಶ್‌ ಜಾರಕಿಹೊಳಿ

ಅಭಿವೃದ್ಧಿಯ ರಾಜಕೀಯ ಮಾಡಿ, ದ್ವೇಷದ ರಾಜಕೀಯ ಮಾಡಿದರೆ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Congress MLA Satish Jarkiholi Slams On BJP Govt At Belagavi gvd
Author
First Published Jan 12, 2023, 2:00 AM IST

ಯಮಕನಮರಡಿ (ಜ.12): ಅಭಿವೃದ್ಧಿಯ ರಾಜಕೀಯ ಮಾಡಿ, ದ್ವೇಷದ ರಾಜಕೀಯ ಮಾಡಿದರೆ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಶಹಾಬಂದರ ಮತ್ತು ಇಸ್ಲಾಂಪೂರ ಗ್ರಾಮಗಳ ವಾಲ್ಮೀಕಿ ವೃತ್ತದಲ್ಲಿ ಶ್ರೀ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆಗೆ ಅಡ್ಡಿಪಡಿಸುವವರ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣಾ ಪ್ರಚಾರಕ್ಕೆ ಹೋಗದೆ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಮುಖ್ಯವಾಗಿ ಬಿಲ್ಲು, ಬಾಣ ಬಿಡದೆ ಚುನಾವಣೆಯಲ್ಲಿ ಜಯಗಳಿಸಿದ್ದೇವೆ. 

ಆದರೆ ಈ ಸಲ ಒಂದು ವರ್ಷದ ಹಿಂದೆಯೇ ಬಿಲ್ಲು, ಬಾಣ ಇಟ್ಟುಕೊಂಡು ಕುಳಿತಿದ್ದೇವೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ಕ್ಷೇತ್ರದಲ್ಲಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಅವರು, ಮೂರು ಬಸ್‌ ಶೆಲ್ಟರ್‌ ನಿರ್ಮಿಸಲು ಮುಂದಾಗಿದ್ದಾರೆ. ಆದರೆ ಈ ಭಾಗದ ಅಧಿಕಾರಿಗಳ ಗಮನಕ್ಕೂ ತಂದಿಲ್ಲ. ಇಸ್ಲಾಂಪೂರ ಸರ್ಕಲ್‌ನಲ್ಲಿ ಬುದ್ಧ, ಬಸವ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೂರ್ತಿಗಳನ್ನು ನಿರ್ಮಿಸಬೇಕಾಗಿದೆ. ವಾಲ್ಮೀಕಿ ಮೂರ್ತಿಯನ್ನು ವಾಲ್ಮೀಕಿ ವೃತ್ತದ ನಡುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇಲ್ಲಿ ಬಸ್‌ ಶೆಲ್ಟರ್‌ ಕಟ್ಟಲು ನಮ್ಮ ವಿರೋಧವಿದೆ. 

ಬರದ ನಾಡನ್ನು ಮಲೆನಾಡು ಮಾಡಿದ ಸುಧಾಕರ್‌: ಸಚಿವ ಸೋಮಣ್ಣ

ತಾವು ಬಸ್‌ ಶೆಲ್ಟರ್‌ ನಿರ್ಮಾಣ ಮಾಡುವುದಾದರೆ ಬೇರೆ ಸ್ಥಳದಲ್ಲಿ ನಿರ್ಮಾಣ ಮಾಡಿಕೊಳ್ಳಿ. ನಮ್ಮ ಅಭ್ಯಂತರವಿಲ್ಲ. ಕ್ಷೇತ್ರದಲ್ಲಿ ಸಣ್ಣ ಹಳ್ಳಿಗಳಿಗೆ . 5 ರಿಂದ 6 ಕೋಟಿ ಅನುದಾನ ನೀಡಿದ್ದು, ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು. ಮನುವಾದಿಗಳ ವ್ಯವಸ್ಥೆಯನ್ನು ಟಿಪ್ಪು ಸುಲ್ತಾನ್‌ ವಿರೋಧಿಸಿದ್ದರು. ಆದರೆ ಇಂದು ಟಿಪ್ಪು ಸುಲ್ತಾನ್‌ ಹೆಸರು ಹೇಳಿದರೆ ಸಾಕು ವಿವಾದ ಆಗುತ್ತಿದೆ. ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸಬಾರದು. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ದ್ವೇಷ ಹರಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಯ ಅಜ್ಜ ಮನುವಾದ: ಬಿಜೆಪಿಯ ಈ ಮನುವಾದದ ವ್ಯವಸ್ಥೆಯಿಂದ ಹಿಂದುಳಿದ, ದೀನ ದಲಿತರು ಬಹಳಷ್ಟುಶೋಷಣೆಗೆ ಒಳಗಾಗಿದ್ದಾರೆ. ಇಂತಹ ಅನೇಕ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ನೀಡಿದ ಮಹಾತ್ಮ ಗಾಂಧೀಜಿ ಅವರನ್ನು ಬಿಜೆಪಿಯವರು ಮರೆತಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲುತ್ತಿಲ್ಲ. ಅದಕ್ಕೆ ಪೆರಿಯಾರ್‌ ಹೋರಾಟ ಕಾರಣ. ಅಂತಹ ಮಹಾನ್‌ ನಾಯಕರ ಜೀವನ ಚರಿತ್ರೆ ಓದಿ ತಿಳಿದುಕೊಳ್ಳಬೇಕು. ಬಿಜೆಪಿ, ಆರ್‌ಎಸ್‌ಎಸ್‌ ಕಚೇರಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌, ಬಸವಣ್ಣವರ ಫೋಟೋ ಹಾಕಲ್ಲ. ಏಕೆ ಹಾಕಲ್ಲ ಎಂದರೆ ಬಸವಣ್ಣ, ಅಂಬೇಡ್ಕರ್‌ ಅವರಿಗೆ ಹೆಚ್ಚು ಕಾಟ ಕೊಟ್ಟವರೆ ಮನುವಾದಿಗಳು ಎಂದು ಹೇಳಿದರು.

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, 20 ವರ್ಷಗಳ ಹಿಂದೆ ಈ ಭಾಗದಲ್ಲಿ ವಾಲ್ಮೀಕಿ ಸಮಾಜದ ಮೇಲೆ ಸಾಕಷ್ಟುಅನ್ಯಾಯಗಳು ನಡೆದಿವೆ. ಈಗಲಾದರೂ ಸಮಾಜದವರು ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು. ವಾಲ್ಮೀಕಿ ಸಮಾಜದವರು ಸ್ವಾಭಿಮಾನದಿಂದ ಬದುಕಬೇಕು ಎಂದರು. ಯಾರೋ ನಾಲ್ಕು ಜನ ಬಂದು ಯಮಕನಮರಡಿ ಕ್ಷೇತ್ರದಲ್ಲಿ ಭಾಷಣ ಮಾಡಿ ಹೋದರೆ ಕ್ಷೇತ್ರ ಅಭಿವೃದ್ಧಿ ಹೊಂದಲ್ಲ. ಹೀಗಾಗಿ ಅಂತಹ ವ್ಯಕ್ತಿಗಳನ್ನು ದೂರವಿಟ್ಟು, ಶಾಸಕ ಸತೀಶ ಜಾರಕಿಹೊಳಿ ಅವರನ್ನು ಬೆಂಬಲಿಸಿ ಎಂದು ವಿನಂತಿಸಿದರು.

ರಾಯಚೂರು ತಾಲೂಕು ಸಿಂದನೂರು ವಾಲ್ಮೀಕಿ ಪೀಠದ ವರದನಾರೇಶ್ವರ ಸ್ವಾಮೀಜಿ ಮಾತನಾಡಿ, ಸರ್ವಧರ್ಮದ ಅಭಿವೃದ್ದಿಯೇ ಶಾಸಕ ಸತೀಶ ಜಾರಕಿಹೊಳಿ ಅವರ ಕನಸಾಗಿದೆ. ಆದರೆ ಇಲ್ಲಿಯ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಿ ಪಡಿಸುತ್ತಿರುವ ಬಿಜೆಪಿಯವರ ನಡೆ ನಮಗೆ ಬೇಸರ ತರಿಸಿದೆ. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್‌ ಅವರ ವಿಚಾರಗಳನ್ನು ರಾಜ್ಯದ ಜನತೆಗೆ ತಿಳಿಸುತ್ತಿರುವ ಸತೀಶ್‌ ಜಾರಕಿಹೊಳಿ ಅವರನ್ನು ಮತ್ತೊಮ್ಮೆ ಆರ್ಶೀವದಿಸಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ದಲಿತ ಮುಖಂಡ ಸಂತೋಷ ದೊಡ್ಡಮನಿ ಮಾತನಾಡಿ, ದುಡ್ಡ ಕೊಟ್ಟರು ಬಿಜೆಪಿಯವರಿಗೆ ಜನ ಸೇರಿಸಲು ಕಷ್ಟವಾಗುತ್ತಿರುವಂತಹ ವಾತಾವರಣದಲ್ಲಿ ಸತೀಶ ಅಣ್ಣಾ ಕರೆ ಕೊಟ್ಟರೆ ಕೋಟಿ ಜನರು ಸೇರುತ್ತಾರೆ. 

ಪ್ರಧಾನಿ ಮೋದಿಗಾಗಿ ವಿಶೇಷ ಕಲಾಕೃತಿ ತಯಾರಿಸಿದ ಧಾರವಾಡದ ಯುವ ಕಲಾವಿದ

ಇದೇ ಸತೀಶ ಅಣ್ಣಾ ಜಾರಕಿಹೊಳಿ ಅವರ ತಾಕತ್ತು. ಅವರ ಹೆಸರಿಗೆ ಧಕ್ಕೆ ತರುವ ಕೆಲಸವನ್ನು ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ ಜಾರಕಿಹೊಳಿ, ಕಾಂಗ್ರೆಸ್‌ ಮುಖಂಡರಾದ ಮಕ್ತುಮಸಾಬ್‌ ಅಪ್ಪುಬಾಯಿ, ಶಹಾಬಂದರ ಗ್ರಾಪಂ ಅಧ್ಯಕ್ಷ ಶಂಕರ ಡೊಂಬಾರ, ಮಾಜಿ ಜಿಪಂ ಸದಸ್ಯಯಲ್ಲಪ್ಪಾ ಹಂಚಿನಮನಿ, ಮಂಜುನಾಥ್‌ ಪಾಟೀಲ, ಮಹಾಂತೇಶ ಮಗದುಮ, ಸಿದ್ದು ಸುಣಗಾರ, ವಿಜಯ ತಳವಾರ, ಕರೆಪ್ಪಾ ಗುಡೆಣ್ಣವರ, ಶಮಸುದ್ದೀನ ಖೋತವಾಲ, ರವೀಂದ್ರ ಜಿಂಡ್ರಾಳಿ, ಜಂಗ್ಲಿಸಾಹೇಬ್‌ ನಾಯಕ, ಕಿರಣ ರಜಪೂತ ಸೇರಿದಂತೆ ಶಹಾಬಂದರ ಹಾಗೂ ಇಸ್ಲಾಂಪೂರ ಗ್ರಾಮದ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Follow Us:
Download App:
  • android
  • ios