ಆರ್ ಅಶೋಕ್ ಡಿಎನ್ಎ ಬಗ್ಗೆ ಮಾತನಾಡಲು ಮೆಡಿಕಲ್ ಓದಿದ್ದಾರೆಯೇ? ಶಾಸಕ ಮಂತರ್ ಗೌಡ ಪ್ರಶ್ನೆ
ರಾಜ್ಯದಲ್ಲಿ ಬಿಜೆಪಿ ಭಾರೀ ಪ್ರಮಾಣದಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಸಹಿಸಲಾಗದೆ ಮಾಜಿ ಸಚಿವ ಆರ್. ಅಶೋಕ್ ಅವರು ಹೀಗೆಲ್ಲಾ ಮಾತನಾಡಿದ್ದಾರೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ತಿರುಗೇಟು ನೀಡಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜೂ.30): ರಾಜ್ಯದಲ್ಲಿ ಬಿಜೆಪಿ ಭಾರೀ ಪ್ರಮಾಣದಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಸಹಿಸಲಾಗದೆ ಮಾಜಿ ಸಚಿವ ಆರ್. ಅಶೋಕ್ ಅವರು ಹೀಗೆಲ್ಲಾ ಮಾತನಾಡಿದ್ದಾರೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ತಿರುಗೇಟು ನೀಡಿದ್ದಾರೆ. ಗುರುವಾರ ಮಡಿಕೇರಿಗೆ ಆಗಮಿಸಿದ್ದ ಆರ್ ಅಶೋಕ್ ಅವರು ಕಾಂಗ್ರೆಸ್ ನವರ ಡಿಎನ್ಎ ನಲ್ಲಿಯೇ ಸುಳ್ಳು, ಮೋಸ ಸೇರಿಕೊಂಡಿದೆ. ಅವರು ಮಹಾನ್ ಛತ್ರಿಗಳು ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮಡಿಕೇರಿಯಲ್ಲಿ ಮಾತನಾಡಿದ ಮಂತರ್ ಗೌಡ, ಆರ್ ಅಶೋಕ್ ಅವರು ಡಿಎನ್ಎ ಬಗ್ಗೆ ಮೆಡಿಕಲ್ ಓದಿದ್ದಾರೆಯೇ ಎಂದು ಪ್ರಶ್ನಿಸಿದರು. ಅವರು ಡಿಎನ್ಎ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಮತ್ತೆ ಬಿಜೆಪಿಯೇ ಗೆಲ್ಲುತ್ತದೆ ಎನ್ನುವ ಭಾರೀ ವಿಶ್ವಾಸದಲ್ಲಿ ಇದ್ದರು. ಆದರೆ ಕಾಂಗ್ರೆಸ್‌ನ ಇಬ್ಬರು ಎರಡು ಕ್ಷೇತ್ರಗಳಲ್ಲೂ ಗೆಲುವು ಪಡೆದಿದ್ದೇವೆ. 2013 ರ ಚುನಾವಣೆ ಸಂದರ್ಭದಲ್ಲೂ ನಾವು ನೀಡಿದ್ದ ಆಶ್ವಾಸನೆಗಳನ್ನು ಶೇ 90 ರಷ್ಟು ಈಡೇರಿಸಿದ್ದೆವು. ಈಗ ನಾವು ಹೆಚ್ಚಿನ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದೇವೆ. ಈಗಲೂ ನಾವು ನೀಡಿರುವ ಐದು ಗ್ಯಾರೆಂಟಿಗಳನ್ನು ಈಡೇರಿಸಿಯೇ ತೀರುತ್ತೇವೆ. ಆ ವಿಶ್ವಾಸ ನಮ್ಮ ಸಿಎಂ, ಡಿಸಿಎಂ ಮತ್ತು ಎಲ್ಲಾ ಮಂತ್ರಿಗಳ ಮೇಲೆ ಇದೆ. ಯಾವ ಕಾರಣಕ್ಕೂ ನಾವು ಗ್ಯಾರೆಂಟಿಗಳನ್ನು ಈಡೇರಿಸುವುದರಿಂದ ತಪ್ಪಲ್ಲ ಎಂದಿದ್ದಾರೆ.
ವಿಜಯಪುರದಲ್ಲೊಂದು ಅಚ್ಚರಿ, ಮಳೆಗಾಗಿ ತಾಮ್ರದ ಬಿಂದಿಗೆ ಬಳಿ ಭವಿಷ್ಯ ಕೇಳಿದ ಜನ, ಕಾರ್ಣಿಕ
ಕೊಡಗು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಡೆದಿರುವುದರಿಂದ ಈ ಬಾರಿಯ ಬಜೆಟ್ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಸಿಗಲಿದೆ. ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಜಿಲ್ಲೆಗೆ 75 ರಿಂದ 80 ಕೋಟಿ ಸಿಗುವ ನಿರೀಕ್ಷೆ ಇದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜುಲೈ 3 ರಂದು ಅಧಿವೇಶನ ಆರಂಭವಾಗಲಿದ್ದು 7 ರಂದು ಮಾನ್ಯ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಜಿಲ್ಲೆಗೆ ಮೂಲಸೌಕರ್ಯ, ಆರೋಗ್ಯ ಮತ್ತು ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಆಗ್ರಹಿಸಿದ್ದೇವೆ. ಇದಕ್ಕೆ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನಕ್ಕಾಗಿ ಆರೋಗ್ಯ ಸಚಿವ ಶರಣ ಪ್ರಕಾಶ್ಪಾಟೀಲ್ ಅವರಿಗೆ ಮನವಿ ಮಾಡಿದ್ದೇವೆ. ಜೊತೆಗೆ ಸಣ್ಣ ನೀರಾವರಿ ಇಲಾಖೆ ಸಚಿವ ಇಬ್ಬರನ್ನು ಹೆಚ್ಚಿನ ಅನುದಾನಕ್ಕೆ ಕೇಳಿದ್ದೇವೆ. ಇಬ್ಬರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ. ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇರುವುದಕ್ಕೆ ಸ್ಪಂದನೆ ದೊರೆಯುವುದೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಮೆಡಿಕಲ್ ಕಾಲೇಜು ಇದ್ದು ಅದಕ್ಕೆ 350 ರಿಂದ 400 ಬೆಡ್ಗಳು ಇರಬೇಕೆಂಬ ನಿಯಮವಿದೆ. ಆದ್ದರಿಂದ ನೂತನ ಆಸ್ಪತ್ರೆಗಳ ಕಟ್ಟಡಗಳು ಸಿದ್ಧವಾಗಿದ್ದು, ಜುಲೈ ತಿಂಗಳಲ್ಲಿ ಆಸ್ಪತ್ರೆಗಳನ್ನು ಉದ್ಘಾಟಿಸಲಾಗುವುದು ಎಂದಿದ್ದಾರೆ.
ದೆಹಲಿ ಸುಗ್ರೀವಾಜ್ಞೆಗೆ ಆಪ್ ಕೆಂಡಾಮಂಡಲ, ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್
ಇದಕ್ಕೂ ಮೊದಲು ಮಡಿಕೇರಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ನಗರಸಭೆ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಜೊತೆಗೆ ನಗರಸಭೆ ವ್ಯಾಪ್ತಿಗೆ ಅಮೃತ್ 2 ಯೋಜನೆ ಅಡಿಯ್ಲಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ನೀಲ ನಕ್ಷೆ ತಯಾರಿಸಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಮಂತರ್ ಗೌಡ ಅವರಿಗೆ ಶಾಲು, ಏಲಕ್ಕಿ ಮಾಲೆ ಹಾಕಿ ನಗರಸಭೆಯಿಂದ ಸನ್ಮಾನಿಸಲಾಯಿತು.