ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಕಾಂಗ್ರೆಸ್ ಮ್ಯಾನಿಫೆಸ್ಟೋ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಸುಳ್ಳಿನ ಕಂತೆ, ಅದರಲ್ಲಿ ಆಕಾಶ ಮತ್ತು ಪಾತಾಳವನ್ನು ಒಂದು ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿ (ಮೇ.03): ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಸುಳ್ಳಿನ ಕಂತೆ, ಅದರಲ್ಲಿ ಆಕಾಶ ಮತ್ತು ಪಾತಾಳವನ್ನು ಒಂದು ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನೋಡಿದರೆ ಇವರು 40 ವರ್ಷ ಅಧಿಕಾರ ಮಾಡಿದ್ದಾರೆ. ಆದರೆ ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ ಎನ್ನುವುದು ಅರಿವಾಗುತ್ತದೆ. ದುರಾಡಳಿತ ಮಾಡಿ ಚುನಾವಣೆ ಹತ್ತಿರ ಬಂದಾಗ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರೈತರು, ದಲಿತರ ಹೆಸರಿನಲ್ಲಿ ಪುಂಕಾನುಪುಂಕವಾಗಿ ಸುಳ್ಳು ಹೇಳುತ್ತಿದೆ ಎಂದು ಹರಿಹಾಯ್ದರು.
ಈ ಹಿಂದೆ ಉತ್ತರಖಂಡದಲ್ಲಿ ಸಹ ಇದೇ ತರಹ ಕಾಂಗ್ರೆಸ್ ಸುಳ್ಳು ಭರವಸೆ ನೀಡಿತ್ತು. ಅದರೆ ಅಲ್ಲಿನ ಜನರು ಸೊಪ್ಪು ಹಾಕದೇ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕೂಡಾ ಜನರು ಕಾಂಗ್ರೆಸ್‌ನ ಸುಳ್ಳು ಭರವಸೆಯನ್ನು ನಂಬಲ್ಲ ಎಂದು ಲೇವಡಿ ಮಾಡಿದರು. ಇದೀಗ ಮುಸ್ಲಿಂ ಮೀಸಲಾತಿ ವಾಪಸ್ ತರುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಮುಸ್ಲಿಂ ಮೀಸಲಾತಿ ಜಾರಿಗೆ ತರುವುದು ಸಂವಿಧಾನ ವಿರೋಧಿಯಾಗಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ ಕೂಡಾ ಕಾಂಗ್ರೆಸ್ ಮತಬ್ಯಾಂಕ್‌ಗಾಗಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಒಂದು ವೇಳೆ ಬಂದಲ್ಲಿ ಮುಸ್ಲಿಂ ಮೀಸಲಾತಿ ಜಾರಿಗೆ ನಾವು ತೀವ್ರವಾಗಿ ವಿರೋಧ ಮಾಡುತ್ತೇವೆ ಎಂದರು.
ಕೋಟಿ ಸಂಪಾದನೆ ಬಿಟ್ಟು ಚುನಾವಣೆಗೆ ಇಳಿದ ರೈತ: ವಿದೇಶದಿಂದ ತವರಿಗೆ ಮರಳಿ ರಾಜಕೀಯಕ್ಕೆ
ಮುಸ್ಲಿಂ ಮೀಸಲಾತಿ ಜಾರಿ ಮಾಡೋದು ಹಿಂದೂಗಳಿಗೆ ಅಪಮಾನ ಮಾಡಿದಂತೆ. ಇದೀಗ ಕಾಂಗ್ರೆಸ್ ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದೆ. ಈ ಹಿಂದೆ ನಾವು ಪಿಎಫ್ಐ ಅನ್ನು ಬ್ಯಾನ್ ಮಾಡಿದಕ್ಕಾಗಿ ಇದೀಗ ಕಾಂಗ್ರೆಸ್ ತುಷ್ಟಿಕರಣ ಕಾಜಕಾರಣದ ಭಾಗವಾಗಿ ಆರ್.ಎಸ್.ಎಸ್, ಭಜರಂಗದಳವನ್ನು ನಿಷೇಧ ಮಾಡುವುದಾಗಿ ಘೋಷಣೆ ಮಾಡಿದೆ. ದೇಶವನ್ನು ಏನೂ ಮಾಡಲು ಹೊರಟ್ಟೀದೀರಿ ಎಂದು ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಕೇಳಲು ಇಚ್ಛೆ ಪಡುತ್ತೇನೆ ಎಂದರು.
ಇದು ತುಷ್ಟೀಕರಣದ ಪರಾಕಾಷ್ಠೆ, ಕಾಂಗ್ರೆಸ್ ಪಕ್ಷದ ಧೋರಣೆ ನೋಡಿದರೆ ಅವರ ಪಕ್ಷ ಭಯೋತ್ಪಾದನೆ ಪರವಾಗಿ ಇದೆ ಎನ್ನುವುದು ಸಾಬೀತಾಗಿದೆ. ಸದ್ಯ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಮ್ಯಾನಿಫ್ಯಾಸ್ಟೋ ಇರಬಹುದು ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಈ ಹಿಂದೆ ಲೋಕಾಯುಕ್ತವನ್ನು ನಿಶಕ್ತಿ ಮಾಡಿದ್ದ ಕಾಂಗ್ರೆಸ್ ಇದೀಗ ಲೋಕಾಯುಕ್ತವನ್ನು ಬಲಿಷ್ಠಗೊಳಿಸಲು ತಿಳಿಸಿದೆ. ಕಾಂಗ್ರೆಸ್ ಪಕ್ಷದ ನಾಯಕರೇ ಭ್ರಷ್ಟಾಚಾರ ಪ್ರಕರಣದಲ್ಲಿ ಬೇಲ್ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಅವರು ಅಧಿಕಾರಕ್ಕೆ ಬರುವುದು ತಿರುಕನ ಕನಸು ಎಂದು ಹೇಳಿದರು.
ಗುಮ್ಮಟನಗರಿ ವಿಜಯಪುರದಲ್ಲಿ ಕಮಲ ಅರಳುತ್ತಾ, ಕೈ ಮೇಲಾಗುತ್ತಾ?: ಕುತೂಹಲ
ಇನ್ನು ರಾಜಕೀಯದಲ್ಲಿ ಒಳಹೊಡೆತ, ಹೊರ ಒಡೆತ ಇದೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಶಿ, ಮೇ.13 ರಂದು ಒಳಹೊಡೆತ, ಹೊರ ಹೊಡೆತ ಗೊತ್ತಾಗುತ್ತದೆ. ಈ ಬಾರಿ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಜಗದೀಶ್ ಶೆಟ್ಟರ್‌ಗೆ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.