ದೇವೇಗೌಡರನ್ನು ಪ್ರಧಾನಿಯಾಗಿ ಮಾಡಿದ್ದೇ ಕಾಂಗ್ರೆಸ್: ಮಾಜಿ ಸಚಿವ ಶಿವರಾಂ
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ೪೦ ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದೆವು. ಆದರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಶಿವರಾಂ ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಹಾಸನ (ಫೆ.02): ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ೪೦ ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದೆವು. ಆದರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಶಿವರಾಂ ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಹಾಸನ ಜಿ ಪಂಗೆ ೧೩ ಕೋಟಿ ರು. ಅನುದಾನ ಬಂದಿದೆ. ಈ ಅನುದಾನ ಹಂಚಿಕೆಯಲ್ಲಿ ದೊಡ್ಡ ತಾರತಮ್ಯ ಆಗಿದೆ.
ಈ ಅನುದಾನ ಉಸ್ತುವಾರಿ ಸಚಿವರ ವಿವೇಚನಾಧಿಕಾರದ ಕೋಟಾ ಎನ್ನಲಾಗಿದೆ. ಕೇವಲ ೫೦ ಸಾವಿರ ಇರುವ ಸಚಿವರ ಸಮುದಾಯಕ್ಕೆ ಎರಡೂವರೆ ಕೋಟಿ ರು. ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿರುವ ಪರಿಶಿಷ್ಟ ಸಮುದಾಯಕ್ಕೆ ಒಂದು ರುಪಾಯಿ ಅನುದಾನ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ೪೦ ಪರ್ಸೆಂಟ್ ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಈಗ ಅದಕ್ಕಿಂತ ನಮ್ಮ ಸರ್ಕಾರದ್ದು ಜಾಸ್ತಿ ಆಗಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ನೇರವಾಗೇ ಹೇಳಿದ್ದೇನೆ. ಸಿಎಂ ಅವರಿಗೇ ನೇರವಾಗಿ ಹೇಳಿ ನಾನು ನಿಷ್ಠುರವಾಗಿದ್ದೇನೆ’ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಸರ್ಕಾರದ ಯೋಜನೆ ನೋಡಿ ಬಿಜೆಪಿ ಕಲಿಯಬಹುದಿತ್ತು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಗೌಡರ ಜಾಣ ಮರೆವು: ಎಚ್.ಡಿ.ದೇವೇಗೌಡರು ಈ ಹಿಂದಿನಿಂದಲೂ ತಮ್ಮನ್ನು 11 ತಿಂಗಳಿಗೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದು ಕಾಂಗ್ರೆಸ್ ಎಂದು ಪಕ್ಷದತ್ತ ಬೆರಳು ಮಾಡುತ್ತಿದ್ದರು. ಈಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಂತರ ಇಂತಹ ಆರೋಪಗಳನ್ನು ಹೆಚ್ಚು ಮಾಡಿದ್ದಾರೆ. ಆದರೆ, ಅವರನ್ನು ಪ್ರಧಾನಿ ಮಾಡಿದ್ದೇ ಕಾಂಗ್ರೆಸ್ ಎನ್ನುವುದನ್ನು ದೇವೇಗೌಡರು ಮರೆತಂತಿದೆ ಎಂದು ಮಾಜಿ ಸಚಿವ ಬಿ. ಶಿವರಾಮ್ ತಿರುಗೇಟು ನೀಡಿದರು.
ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡ ಮೇಲೆ ಜೆಡಿಎಸ್ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿಯೇ ತೊಡಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದು, ಕಾಡಾನೆ ಸಮಸ್ಯೆ, ಕಾಫಿ ಬೆಳೆಗಾರರ ಭೂ ಒತ್ತುವರಿ ಸಮಸ್ಯೆ, ಕಾವೇರಿ ನೀರಿನ ವಿಚಾರ ನಡೆದಿದೆ. ೧೯೯೬ ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ಭೂ ಒತ್ತುವರಿ ಬಗ್ಗೆ ಪ್ರಸ್ತಾಪ ನಡೆಸಿದ್ದರು. ಆದರೆ ಅವಧಿಗೆ ಮುನ್ನ ತಮ್ಮನ್ನು ಕೆಳಗೆ ಇಳಿಸಿದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ಪ್ರಧಾನಿಯಾಗಲು ಬೆಂಬಲ ನೀಡಿದರು ಎಂಬುದು ಅವರಿಗೆ ನೆನಪಿಗೆ ಬರುತ್ತಿಲ್ಲ ಎಂದು ಅಣಕವಾಡಿದರು.
ಪ್ರಧಾನಿಯಾಗಿದ್ದ ೧೧ ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಬಹುದಿತ್ತು. ಇದಾದ ನಂತರವೂ ಅವಕಾಶ ಇತ್ತು. ಈ ವೇಳೆ ಯಾವ ಸಮಸ್ಯೆಗೂ ಪರಿಹಾರ ಕಂಡು ಹಿಡಿಯಲಿಲ್ಲ. ಚುನಾವಣೆ ಬಂದಾಗ ಜನರಿಗೆ ನೆನಪಿಸುವುದು ದೇವೇಗೌಡರ ಕೆಲಸ. ಮತ ಬ್ಯಾಂಕ್‌ಗಾಗಿ ಈ ಪ್ರಚಾರ ಮಾಡುತ್ತಿದ್ದಾರೆ. ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ‘ನಾನು ಈ ಹಿಂದೆ ಯಾರ ವಿರುದ್ದವೂ ವೈಯಕ್ತಿಕ ಟೀಕೆ ಮಾಡಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಎಲ್ಲಿಯು ಮಾತನಾಡಿರಲಿಲ್ಲ. ಜಿಲ್ಲೆಯ ಏಕೈಕ ಶಾಸಕರು ಜಿಲ್ಲೆ ಸಂಚಾರ ಮಾಡಲಿ, ಸಚಿವರ ಜೊತೆ ಓಡಾಡಲಿ ಎಂದು ಹೇಳಿದ್ದು ನಿಜ.
ನುಡಿದಂತೆ ನಡೆಯದ ಬಜೆಟ್ ಘೋಷಣೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ: ಸಚಿವ ಮಹದೇವಪ್ಪ
ಸಚಿವರು ನನ್ನ ಬಗ್ಗೆ ಏಕವಚನ ಬಳಸಿದ್ದು ನಮ್ಮ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಸಚಿವ ರಾಜಣ್ಣ ಅವರು ನಾನು ಹೈಕಮಾಂಡ್ ಗುಲಾಮನಲ್ಲ ಎಂದು ಹೇಳಿದ್ದಾರೆ. ಇಂತಹವರ ಬಗ್ಗೆ ನಾವು ಏನು ಹೇಳಲಾಗುತ್ತದೆ’ ಎಂದು ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಬಿ. ಶಿವರಾಮ್ ಹರಿಹಾಯ್ದರು. ‘ನಾನು ಏನೇ ಆದರೂ ಈ ಕಾಂಗ್ರೆಸ್ ಬಿಟ್ಟು ಹೋಗುವನಲ್ಲ ಎಂದು ಕಾರ್ಯಕರ್ತರಲ್ಲಿ ಇರುವ ಗೊಂದಲದ ಬಗ್ಗೆ ಸ್ಪಷ್ಟನೆ ಕೊಡುತ್ತೇನೆ’ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರಾದ ಬಸವರಾಜು, ಆದೀಲ್, ಕೀರ್ತಿಕುಮಾರ್, ಮಹೇಶ್ ಇದ್ದರು.