ಖರ್ಗೆ, ಸಿದ್ದು, ಡಿಕೆಶಿ ಮನೆಗೆ ಆಕಾಂಕ್ಷಿಗಳ ಪರೇಡ್, ಮಂತ್ರಿಗಿರಿ ನೀಡುವಂತೆ ದುಂಬಾಲು, ಡಿಕೆಶಿಗೆ ಜನ್ಮದಿನ ಶುಭ ಕೋರುವ ನೆಪದಲ್ಲಿ ಹಲವರ ಭೇಟಿ.
ಬೆಂಗಳೂರು(ಮೇ.16): ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿನ ನಡುವೆ 10ಕ್ಕೂ ಹೆಚ್ಚು ಸಚಿವ ಸ್ಥಾನದ ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಗಳಿಗೆ ಪರೇಡ್ ನಡೆಸಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಶುಭಾಶಯ ಕೋರುವ ನೆಪದಲ್ಲಿ ಹಲವು ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ಮಾಡಿದರು. ಈ ವೇಳೆ ತಮಗೆ ಸಚಿವ ಸ್ಥಾನ ನೀಡುವಂತೆ ಲಾಬಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಕೆ.ಎನ್.ರಾಜಣ್ಣಗೆ ಸಚಿವ ಸ್ಥಾನ ನೀಡಿ: ಸೈಯದ್ ಮನವಿ
ಇನ್ನು ಸೋಮವಾರ ಬೆಳಗ್ಗೆ ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಟಿ.ಬಿ. ಜಯಚಂದ್ರ, ವಿಜಯಾನಂದ ಕಾಶಪ್ಪನವರ್, ಶಿವಲಿಂಗೇಗೌಡ, ವಿನಯ ಕುಲಕರ್ಣಿ ಸೇರಿ ಹಲವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇವರಲ್ಲಿ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್ ಸೇರಿ ಹಲವರು ಶಿವಕುಮಾರ್ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಇನ್ನು ಹಲವು ನಾಯಕರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲೂ ಲಾಬಿ ನಡೆಸಿದ್ದು, ಹಲವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಈಗಾಗಲೇ ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಪುತ್ರ ಗಣೇಶ್ ಹುಕ್ಕೇರಿ ಅಥವಾ ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಿಲ್ಲಿಯಲ್ಲೂ ಮಂತ್ರಿ ಸರ್ಕಸ್ ಯಾರ ಬಳಿಗೆ ಯಾರು?
ಖರ್ಗೆ: ಪುತ್ರ ಗಣೇಶ್ ಹುಕ್ಕೇರಿ ಅಥವಾ ತಮಗೆ ಸಚಿವ ಸ್ಥಾನ ಬೇಕೆಂದು ಪ್ರಕಾಶ್ ಹುಕ್ಕೇರಿ
ಸಿದ್ದು: ಜಾರ್ಜ್, ಜಮೀರ್, ಜಯಚಂದ್ರ, ಕಾಶಪ್ಪನವರ್, ಶಿವಲಿಂಗೇಗೌಡ ಸೇರಿ ಹಲವರು
ಡಿಕೆಶಿ: ವಿನಯ್ ಕುಲಕರ್ಣಿ, ಕಾಶಪ್ಪನವರ್ ಸೇರಿದಂತೆ ಹಲವರು
