ಕೆ.ಎನ್.ರಾಜಣ್ಣಗೆ ಸಚಿವ ಸ್ಥಾನ ನೀಡಿ: ಸೈಯದ್ ಮನವಿ
ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜಿಲ್ಲೆಯಲ್ಲಿಯೇ ಅತ್ಯಧಿಕ ಮತಗಳಿಸಿ ಗೆಲುವು ಸಾಧಿಸಿರುವ ಕೆ.ಎನ್.ರಾಜಣ್ಣ ಅವರನ್ನು ಸಹಕಾರ ಸಚಿವರನ್ನಾಗಿ ಮಾಡಬೇಕು ಎಂದು ಜಾಮೀಯಾ ಮಸೀದಿ ನಿರ್ದೇಶಕ ಎಸ್.ಕೆ.ಸೈಯದ್ ಕರೀಂ ಒತ್ತಾಯಿಸಿದರು.
ಮಧುಗಿರಿ : ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜಿಲ್ಲೆಯಲ್ಲಿಯೇ ಅತ್ಯಧಿಕ ಮತಗಳಿಸಿ ಗೆಲುವು ಸಾಧಿಸಿರುವ ಕೆ.ಎನ್.ರಾಜಣ್ಣ ಅವರನ್ನು ಸಹಕಾರ ಸಚಿವರನ್ನಾಗಿ ಮಾಡಬೇಕು ಎಂದು ಜಾಮೀಯಾ ಮಸೀದಿ ನಿರ್ದೇಶಕ ಎಸ್.ಕೆ.ಸೈಯದ್ ಕರೀಂ ಒತ್ತಾಯಿಸಿದರು.
ಸೋಮವಾರ ಇಲ್ಲಿನ ಜಾಮೀಯಾ ಮಸೀದಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಧುಗಿರಿ ಕ್ಷೇತ್ರ ಜನರಲ್ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನರ ಪ್ರೀತಿ, ವಿಶ್ವಾಸಗಳಿಸಿ ಅಭಿವೃದ್ಧಿಗೆ ಆದ್ಯತೆ ನೀಡಿ ಸೆಕ್ಯೂಲರ್ ವ್ಯಕ್ತಿಯಾಗಿ ರಾಜಣ್ಣ ಹೊರ ಹೊಮ್ಮಿದ್ದಾರೆ. ಈ ಬಾರಿ ನಡೆದ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಿಂದ ಅತ್ಯಧಿಕ ಮತಗಳಿಸಿ ಜಯಶೀಲರಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೆ.ಎನ್.ರಾಜಣ್ಣ ಇದು ಸೇರಿ ಮೂರನೇ ಬಾರಿ ಶಾಸಕರಾಗಿದ್ದು ಈ ಹಿಂದೆ ಅರ್ಹತೆಯಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು
ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಈ ಸಲ ರಾಜಣ್ಣನವರನ್ನು ಕ್ಯಾಬಿನೆಟ್ ದರ್ಜೆ ಸಹಕಾರ ಖಾತೆ ನೀಡಿ ಸಚಿವರನ್ನಾಗಿ ಮಾಡಬೇಕು ಎಂದು ಮಧುಗಿರಿ ಕ್ಷೇತ್ರದ ಮುಸಲ್ಮಾನ ಬಂಧುಗಳ ಪರವಾಗಿ ಸೈಯದ್ ಕರೀಂ ಮನವಿ ಮಾಡಿದರು.
ಉಪಾಧ್ಯಕ್ಷ ಮಹಮದ್ ಜಾಫರ್ ಸಾಧಿಕ್ ಮಾತನಾಡಿ, ಶಾಸಕ ಜಮೀರ್ ಅಹಮದ್ ಅವರನ್ನು ಡಿಸಿಎಂ ಮಾಡಿ ಕೆ.ಎನ್.ರಾಜಣ್ಣ ಅವರನ್ನು ಕ್ಯಾಬಿನೇಟ್ ದರ್ಜೆ ಸಚಿವರನ್ನಾಗಿ ಮಾಡಿದರೆ ರಾಜ್ಯದ ಬಡವರ ಏಳಿಗೆ ಆಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾಮೀಯಾ ಮಸೀದ್ ಅಧ್ಯಕ್ಷ ಅಬ್ದಲ್ ಅಲಿಂ ಪಾಷ, ನಿರ್ದೇಶಕರಾದ ಯೂಸೆಫ್ ಶರೀಫ್, ಫಯಾಜ್ ಆಹಮ್ಮದ್, ಇಲಿಯಾಸ್, ಕಲೀಂಮ್ ಉಲ್ಲಾ, ಇನಾಯಿತ್ ಉಲ್ಲಾ, ಅತೀಮ್ ಭೈಜು, ಭಕ್ಷಿಸಾಬ್, ತಬ್ರೇಜ್, ನಯಾಜ್, ಅಪ್ರೋಜ್, ಇರ್ಫಾನ್ ಇತರರಿದ್ದರು.
ಕೆ.ಎನ್.ರಾಜಣ್ಣ ಜಾತ್ಯತೀತ ವ್ಯಕ್ತಿ. ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯುವ ಸಾಮರ್ಥ್ಯ ಹೊಂದಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವರು. ಕಾಂಗ್ರೆಸ್ ಪಕ್ಷ ನೀಡಿರುವ 5 ಪ್ರಣಾಳಿಕೆಗಳ ಜೊತೆಗೆ ಮಧುಗಿರಿ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಏಕಶಿಲಾ ಬೆಟ್ಟಕ್ಕೆ ರೋಪ್‌ವೇ, ರೈಲ್ವೆ ಕಾಮಗಾರಿಗೆ ಚಾಲನೆ, ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಮಾಡುವುದು ಸೇರಿದಂತೆ ಹತ್ತಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಕ್ಷೇತ್ರದ ಅಭಿವೃದ್ಧಿ ಮಾಡುವರು.
ಎಸ್.ಕೆ.ಸೈಯದ್ ಕರೀಂ ಜಾಮೀಯಾ ಮಸೀದಿ ನಿರ್ದೇಶಕ