70 ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್ ಲಿಂಗಾಯತ ನಾಯಕರ ಬೇಡಿಕೆ
ಕಾಂಗ್ರೆಸ್‌ನ ಲಿಂಗಾಯತ ಸಮುದಾಯದ ಮುಖಂಡರು ಎಐಸಿಸಿ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರನ್ನು ಭೇಟಿ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯಕ್ಕೆ 70 ಸೀಟು ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು (ಫೆ.16): ಕಾಂಗ್ರೆಸ್‌ನ ಲಿಂಗಾಯತ ಸಮುದಾಯದ ಮುಖಂಡರು ಎಐಸಿಸಿ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರನ್ನು ಭೇಟಿ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯಕ್ಕೆ 70 ಸೀಟು ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಮಂಗಳವಾರ ರಾತ್ರಿ ಮೋಹನ್ ಪ್ರಕಾಶ್ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನೇತೃತ್ವದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನೊಳಗೊಂಡ ನಿಯೋಗವು ಸಮುದಾಯದ ಬೇಡಿಕೆಗಳನ್ನು ಮುಂದಿಟ್ಟಿತು.
ರಾಜ್ಯದಲ್ಲಿ ಸಮುದಾಯದ ಮತಗಳು ಹೆಚ್ಚಿರುವುದರಿಂದ 70 ಮಂದಿಗೆ ಅವಕಾಶ ನೀಡಬೇಕು. ಜತೆಗೆ ಬೆಂಗಳೂರಿನಲ್ಲಿ ಕಳೆದ ಬಾರಿಯೂ ಯಾರೊಬ್ಬರಿಗೂ ಟಿಕೆಟ್ ನೀಡಿಲ್ಲ. ಹೀಗಾಗಿ ಕನಿಷ್ಠ ಇಬ್ಬರಿಗೆ ಬೆಂಗಳೂರಿನಲ್ಲಿ ಅವಕಾಶ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟರು ಎಂದು ಮೂಲಗಳು ತಿಳಿಸಿವೆ.
ಕೋಲಾರದಿಂದ ಸ್ಪರ್ಧೆ, ಸಿದ್ದು ಕೈಗೊಂಡ ತಪ್ಪು ನಿರ್ಧಾರ: ಸಿ.ಎಂ.ಇಬ್ರಾಹಿಂ
ಕಳೆದ ಚುನಾವಣೆಯಲ್ಲಿ 36 ಸೀಟು, ಗೆದ್ದಿದ್ದು 14 ಸೀಟು: ಕಳೆದ ಎರಡು ದಿನಗಳಿಂದ ಸರಣಿ ಸಭೆ ನಡೆಸಿದ್ದ ಲಿಂಗಾಯತ ನಾಯಕರು ಈ ಬಾರಿ ಹೆಚ್ಚಿನ ಸೀಟುಗಳಲ್ಲಿ ಟಿಕೆಟ್ ಪಡೆಯಲು ಪ್ರಯತ್ನಿಸಬೇಕು ಎಂದು ತೀರ್ಮಾನಿಸಿದ್ದರು. ವಾಸ್ತವವಾಗಿ ಕಳೆದ ಬಾರಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ನಿಂದ 36 ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿತ್ತು. ಅದರಲ್ಲಿ 14ರಲ್ಲಿ ಗೆಲುವು ಸಾಧಿಸಿದ್ದರು. ರೆಡ್ಡಿ ಲಿಂಗಾಯರಿಗೆ ಏಳು ಕ್ಷೇತ್ರ ನೀಡಲಾಗಿತ್ತು. ಅದರಲ್ಲಿ ಎರಡರಲ್ಲಿ ಗೆದ್ದಿದ್ದರು. ಇನ್ನು ನಾಮಧಾರಿ ರೆಡ್ಡಿ ಸಮುದಾಯ (ಎಚ್.ಕೆ. ಪಾಟೀಲ್) ನಾಲ್ಕು ಕ್ಷೇತ್ರಗಳಲ್ಲಿ ಟಿಕೆಟ್ ಪಡೆದು, ಒಂದರಲ್ಲಿ ಗೆಲುವು ಸಾಧಿಸಿತ್ತು.
ಸಿದ್ದು ಜತೆ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆ: ಕಾಂಗ್ರೆಸ್ ಹಿರಿಯ ನಾಯಕ ಮೋಹನ್ ಪ್ರಕಾಶ್ ನೇತೃತ್ವದ ಎಐಸಿಸಿ ಸ್ಕ್ರೀನಿಂಗ್ ಸಮಿತಿಯು ಮಂಗಳವಾರ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ. ಫೆ.13 ಸೋಮವಾರ ರಂದು ನಿಗದಿಯಾಗಿದ್ದ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಮೋಹನ್ ಪ್ರಕಾಶ್ ನೇತೃತ್ವದ ಸಮಿತಿಯನ್ನು ಭೇಟಿ ಮಾಡಿ ಸಿದ್ದರಾಮಯ್ಯ ಚರ್ಚಿಸಿದರು. ಈ ವೇಳೆ ಕೋಲಾರ, ಬಾದಾಮಿ, ವರುಣ ಕ್ಷೇತ್ರಗಳ ಸ್ಪರ್ಧೆ ಬಗ್ಗೆಯೂ ಚರ್ಚಿಸಲಾಗಿದೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ಸಿನದು ಟಿಪ್ಪು ಸಂತಾನ: ನಳಿನ್‌ಕುಮಾರ್ ಕಟೀಲ್ ವಾಗ್ದಾಳಿ
ಫೆ.11 ರಂದು ಬೆಂಗಳೂರಿಗೆ ಆಗಮಿಸಿದ ಅವರು ಫೆ.12 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಕಾರ್ಯದರ್ಶಿಗಳು, ಫೆ.13 ರಂದು ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿದ್ದರು. ಇನ್ನು ಇದೇ ವೇಳೆ ಮಧ್ಯಾಹ್ನದವರೆಗೆ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮಧ್ಯಾಹ್ನದ ಬಳಿಕ ಆಕಾಂಕ್ಷಿಗಳೊಂದಿಗೆ ಮೋಹನ್ ಪ್ರಕಾಶ್ ಅವರು ಸಭೆ ನಡೆಸಿದರು. ಬಳಿಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.