ಯಾವ ಹಣದ ಬೇಡಿಕೆ ಬಗ್ಗೆಯೂ ಪಾಟೀಲ್‌ ಅವರು ಪತ್ರ ಬರೆದಿಲ್ಲ. ಅದು ನಕಲಿ ಪತ್ರ ಎಂದು ಅವರೇ ಹೇಳಿದ್ದಾರೆ. ಶಾಸಕರ ಸಮಸ್ಯೆಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯಲು ಹೇಳಿದ್ದರು. ಇಂದು ಕರೆದಿದ್ದೇನೆ: ಸಿದ್ದರಾಮಯ್ಯ 

ಬೆಂಗಳೂರು(ಜು.27): ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಪ್ರಮುಖ ವಿದ್ಯಮಾನಗಳು ನಡೆಯುತ್ತಿರುವುದು ಹಾಗೂ ಮತ್ತೊಂದೆಡೆ ಸರ್ಕಾರ ಪತನಕ್ಕೆ ಬಿಜೆಪಿ-ಜೆಡಿಎಸ್‌ ಪಿತೂರಿ ನಡೆಸುತ್ತಿವೆ ಎಂಬ ಆರೋಪಗಳ ನಡುವೆಯೇ ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ವಿಧಾನಪರಿಷತ್‌ ಮಾಜಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಅವರ ‘ಸಿಎಂ ಕೆಳಗಿಳಿಸುವ ಹೇಳಿಕೆ’ ಹಾಗೂ ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳಿಂದ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಕೊಂಡಿತ್ತು. ಇದರ ಬೆನ್ನಲ್ಲೇ ಸಚಿವರ ಅಸಹಕಾರ ಹಾಗೂ ಕೆಲಸಗಳಿಗೆ ಮೂರನೇ ವ್ಯಕ್ತಿಯಿಂದ ಹಣ ಬೇಡಿಕೆ ಇಡುತ್ತಿರುವ ಬಗ್ಗೆ ಪಕ್ಷದ ಶಾಸಕ ಬಿ.ಆರ್‌.ಪಾಟೀಲ್‌ ಹೆಸರಿನಲ್ಲಿ ಹರಿದಾಡಿದ್ದ ಪತ್ರ ತೀವ್ರ ವಿವಾದ ಸೃಷ್ಟಿಸಿತ್ತು. ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದವು.

ಸಿಎಂಗೆ ಲೆಟರ್‌: ಸಚಿವರ ವಿರುದ್ಧ ಶಾಸಕರ ನಕಲಿ ಪತ್ರ ವೈರಲ್‌..!

ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ, ಯಾವ ಹಣದ ಬೇಡಿಕೆ ಬಗ್ಗೆಯೂ ಪಾಟೀಲ್‌ ಅವರು ಪತ್ರ ಬರೆದಿಲ್ಲ. ಅದು ನಕಲಿ ಪತ್ರ ಎಂದು ಅವರೇ ಹೇಳಿದ್ದಾರೆ. ಶಾಸಕರ ಸಮಸ್ಯೆಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯಲು ಹೇಳಿದ್ದರು. ಗುರುವಾರ ಕರೆದಿದ್ದೇನೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ತಮ್ಮ ಸಚಿವರ ಬಗ್ಗೆ ಅಸಮಾಧಾನ ಹಾಗೂ ಕ್ಷೇತ್ರಕ್ಕೆ ಅನುದಾನ ಕೊರತೆ ಬಗ್ಗೆ ಅಸಮಾಧಾನ ತೋಡಿಕೊಳ್ಳುವ ಸಾಧ್ಯತೆಯಿದೆ.

ಜತೆಗೆ ಸಭೆಯಲ್ಲಿ ಮುಖ್ಯವಾಗಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳು ಹಾಗೂ ವಿರೋಧಪಕ್ಷಗಳಿಗೆ ಯಾವ ರೀತಿ ತಿರುಗೇಟು ನೀಡಬೇಕು? ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಜನರಲ್ಲಿ ಸರ್ಕಾರದ ಬಗ್ಗೆ ಹೇಗೆ ಉತ್ತಮ ಅಭಿಪ್ರಾಯ ಮೂಡಿಸಬೇಕು? ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಗೆಲ್ಲಾ ಕೆಲಸ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುವವರಿಗೂ ಎಚ್ಚರಿಕೆ ಸಂದೇಶ ರವಾನಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಪರಿಷತ್‌ ಸಭಾ ನಾಯಕರಾದ ಎನ್‌.ಎಸ್‌. ಬೋಸರಾಜು ಸೇರಿ ಎಲ್ಲಾ ಶಾಸಕರು, ಪರಿಷತ್‌ ಸದಸ್ಯರು ಹಾಗೂ ಸಂಸದರು ಭಾಗವಹಿಸಲಿದ್ದಾರೆ.