ಬೆಂಗಳೂರು [ಡಿ.02]:  ಉಪ ಚುನಾವಣೆ ಪ್ರಚಾರಕ್ಕೆ ತೆರೆಬೀಳಲು ಇನ್ನು ಕೆಲವೇ ದಿನಗಳಿವೆ ಎನ್ನುವಾಗ ಕಾಂಗ್ರೆಸ್ ನಾಯಕರು ಜೆಡಿಎಸ್ ಜತೆಗಿನ ‘ಮೈತಿ ಜಪ’ ಪ್ರಾರಂಭಿಸಿದ್ದಾರೆ. ಶನಿವಾರ ವಷ್ಟೇ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ, ಬಿ.ಕೆ.ಹರಿಪ್ರಸಾದ್ ‘ಮೈತ್ರಿ ದಾಳ’ ಉರುಳಿಸಿದ್ದರು. 

ಇದರ ಬೆನ್ನಲ್ಲೇ ಈಗ ವೀರಪ್ಪ ಮೊಯ್ಲಿ, ಸತೀಶ್ ಜಾರಕಿಹೊಳಿ ಕೂಡ ಡಿ.9 ರ ಬಳಿಕ ಬಿಜೆಪಿ ಸರ್ಕಾರ ಪತನಗೊಂಡರೆ ರಾಜ್ಯದಲ್ಲಿ ಮತ್ತೆ ದೋಸ್ತಿ ಸರ್ಕಾರ ರಚನೆಯ ಸುಳಿವು ನೀಡಿದ್ದಾರೆ.

ಉಪ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡೋಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿದ್ದ ಮೈತ್ರಿ ಕುರಿತು ಇತ್ತೀಚೆಗಷ್ಟೇ ಗ್ರೀನ್ ಸಿಗ್ನಲ್ ನೀಡಿದ್ದರು. ಇದಾದ ಬಳಿಕ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ‘ದೋಸ್ತಿ ಮಂತ್ರ’ ಪಠಿಸಲಾರಂಭಿಸಿದ್ದರು.

ಈ ಮಧ್ಯೆ ಮೈಸೂರಲ್ಲಿ ಭಾನುವಾರ ಮಾತನಾಡಿದ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಕೂಡ ಡಿ. 9 ರ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿ ಕಾರಕ್ಕೇರುವ ಸಾಧ್ಯತೆ ಬಿಚ್ಚಿಟ್ಟರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 12 ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಯಾರಾಗ ಬೇಕು ಎಂಬ ಪರ-ವಿರೋಧದ ಚರ್ಚೆಯಲ್ಲಿ ಮುಳುಗುವ ಬದಲು, ಚುನಾವಣೆಯಲ್ಲಿ ಗೆಲ್ಲುವ ಕುರಿತು ಆದ್ಯತೆ ನೀಡೋಣ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡೋಣ ಎಂದು ಕಾರ್ಯಕರ್ತರು, ಮುಖಂಡರಿಗೆ ಅವರು ಸಲಹೆ ನೀಡಿದ್ದಾರೆ.

ಇದಕ್ಕೂ ಮೊದಲು ಗೋಕಾಕದಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಎಲ್ಲೋ ಒಂದು ಕಡೆ ಮೈತ್ರಿ ಕುರಿತು ಜೆಡಿಎಸ್-ಕಾಂಗ್ರೆಸ್ ನಾಯಕರ ಮಧ್ಯೆ ಮಾತುಕತೆ ನಡೆದಿದೆಯೇನೋ ಅನಿಸುತ್ತಿದೆ. ಉಪ ಚುನಾವಣೆ ಫಲಿತಾಂಶ ಬಳಿಕ ದೋಸ್ತಿ ವಿಚಾರ ಅಂತಿಮ ರೂಪ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ೮ಕ್ಕಿಂತ ಕಡಿಮೆ ಸ್ಥಾನ ಗೆದ್ದರೆ ಮತ್ತೆ ಮೈತ್ರಿ ಸರ್ಕಾರವೇ ಅಧಿಕಾರಕ್ಕೆ ಬರಬಹುದು. ಯಾಕೆಂದರೆ ಅಧಿಕಾರ ಬಿಟ್ಟು ಕೂರಲು ಯಾರೂ ಸಿದ್ಧರಿಲ್ಲ. ಬಹುಶಃ ಹಿಂದೆ ಅಧಿಕಾರ ಬಿಟ್ಟುಕೊಟ್ಟಿದ್ದೇ ತಪ್ಪುಎಂದು ಈಗ ಎಲ್ಲರಿಗೂ ಅನಿಸಿರಲೂಬಹುದು ಎಂದು ಜಾರಕಿಹೊಳಿ ಹೇಳಿಕೊಂಡಿದ್ದಾರೆ.