ಬೆಂಗಳೂರು(ಮೇ.13): ಕೇಂದ್ರ ಸರ್ಕಾರವು ಕೊರೋನಾ ಬಿಕ್ಕಟ್ಟು ನಿರ್ವಹಣೆಗೆ 13 ರಾಜ್ಯಗಳಿಗೆ ಕೇಂದ್ರ ಸರ್ಕಾರ 6,195 ಕೋಟಿ ರು. ಅನುದಾನ ನೀಡಿದೆ. ಆದರೆ, ರಾಜ್ಯಕ್ಕೆ ನಯಾಪೈಸೆಯನ್ನೂ ನೀಡಿಲ್ಲ. ಇಂತಹ ಸಂಕಷ್ಟದ ಕಾಲದಲ್ಲೂ ರಾಜ್ಯದ ಬಗ್ಗೆ ಮಲತಾಯಿ ಧೋರಣೆಯನ್ನು ಕೇಂದ್ರ ಸರ್ಕಾರ ತೋರುತ್ತಿದ್ದರೂ, ಬಿಜೆಪಿಯ 25 ಸಂಸದರು ಚಕಾರವೆತ್ತುತ್ತಿಲ್ಲ.

ಹೀಗಂತ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸಂಸದರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತರಾಟೆಗೆ ತೆಗೆದುಕೊಂಡರು.

ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಈ ನಾಯಕರು ನೆರೆ ಪರಿಹಾರ, ಜಿಎಸ್‌ಟಿ ಬಾಕಿ, ಕಾರ್ಮಿಕರಿಗೆ ನೆರವಾಗಲು ರೈಲು ಸೇವೆವರೆಗೂ ಪ್ರತಿ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಿದ ಕೇಂದ್ರ ಸರ್ಕಾರ ಕೊರೋನಾದಂತಹ ದುಸ್ಥಿತಿಯಲ್ಲೂ ಕರುನಾಡಿನ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. ಇದರ ವಿರುದ್ಧ ದ್ವನಿಯೆತ್ತುವ ಧೈರ್ಯವೂ ಬಿಜೆಪಿಯ 25 ಸಂಸದರಿಗೆ ಇಲ್ಲ ಎಂದು ಟೀಕಿಸಿದರು.

ಅಲ್ಲದೆ, ರಾಜ್ಯಕ್ಕೆ 5,465 ಕೋಟಿ ರು. ನೀಡಲು ಹಣಕಾಸು ಆಯೋಗ ಶಿಫಾರಸು ಮಾಡಲಾಗಿತ್ತು. ಈ ಶಿಫಾರಸನ್ನು ರಾಜ್ಯದಿಂದ ರಾಜ್ಯಸಭೆಗೆ ಹೋಗಿರುವ ನಿರ್ಮಲಾ ಸೀತಾರಾಮನ್‌ ರದ್ದುಪಡಿಸಿದ್ದಾರೆ. ಇನ್ನು ಪ್ರಧಾನಮಂತ್ರಿಗಳ ಪಿಎಂ ಕೇರ್‌ ನಿಧಿಗೆ 35 ಸಾವಿರ ಕೋಟಿ ರು. ದೇಣಿಗೆ ಬಂದಿದ್ದರೂ ರಾಜ್ಯಕ್ಕೆ ಬಿಡಿಗಾಸು ನೀಡಿಲ್ಲ. ಇದರಲ್ಲಿ ರಾಜ್ಯದಿಂದಲೇ 3 ಸಾವಿರ ಕೋಟಿ ರು. ದೇಣಿಗೆ ಹೋಗಿದೆ. ಈ ಹಣದಲ್ಲಾದರೂ ರಾಜ್ಯದ ಕೆಲಸ ಮಾಡಲು ಏನು ರೋಗ? ಎಂದು ಕಟುವಾಗಿ ಪ್ರಶ್ನಿಸಿದರು.

ಕೊರೋನಾ ನಿಭಾಯಿಸಲು ಸರ್ಕಾರ ವಿಫಲ:

ಇದೇ ವೇಳೆ ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತೀವ್ರವಾಗಿ ವಿಫಲವಾಗಿದೆ. ಪ್ರತಿ ಹಂತದಲ್ಲೂ ಗೊಂದಲಮಯ ನಿರ್ಧಾರಗಳ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿದೆ. ಆದರೂ ಕಠಿಣ ಶಬ್ದಗಳಲ್ಲಿ ಟೀಕಿಸದೆ ಬೆಂಬಲ ನೀಡುತ್ತಾ ಬಂದಿದ್ದೇವೆ.

ಆದರೆ, ವಿವಿಧ ರಾಜ್ಯ, ಜಿಲ್ಲೆಗಳಿಗೆ ಹೋಗು ಕಾರ್ಮಿಕರ ಬಳಿಯೂ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದರು. ಹೀಗಾಗಿ ಕಾಂಗ್ರೆಸ್‌ನಿಂದಲೇ 1 ಕೋಟಿ ರು. ನೀಡಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲು ಕೇಳಿದ್ದೆವು. ಬಳಿಕ ಉಚಿತ ಸಾರಿಗೆ ವ್ಯವಸ್ಥೆ ಮಾಡಿದರು. ನಮ್ಮ ನಿಯೋಗದ ಭೇಟಿಯಿಂದ 1,610 ಕೋಟಿ ಸಣ್ಣ ಪ್ಯಾಕೇಜ್, ಅದರಲ್ಲಿ 400 ಕೋಟಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಹಣವನ್ನೇ ನೀಡಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರ ಶೇ.10 ರಷ್ಟುಆಹಾರ ಕಿಟ್‌ ನೀಡಿದ್ದರೆ ನಮ್ಮ ಶಾಸಕರು, ಸಂಘ-ಸಂಸ್ಥೆಗಳು, ಎನ್‌ಜಿಒಗಳು ಶೇ.90 ರಷ್ಟುಜನರಿಗೆ ನೀಡಿದ್ದಾರೆ. ಸರ್ಕಾರ ಸರಿಯಾಗಿ ಪರಿಸ್ಥಿತಿ ನಿಭಾಯಿಸಿದ್ದರೆ ರೈತರು, ಕಾರ್ಮಿಕರು ಏಕೆ ಪರದಾಡಬೇಕಿತ್ತು ಎಂದು ಪ್ರಶ್ನಿಸಿದರು.

ಕೇಂದ್ರದಿಂದ ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ: ಮಾಜಿ ಸಿಎಂ ಸಿದ್ದು ಕಿಡಿ

‘ತಬ್ಲೀಘಿ ಸೋಂಕು: ಆರ್‌ಎಸ್‌ಎಸ್‌ ಹುನ್ನಾರ’

 ‘ತಬ್ಲೀಘಿಗಳಿಂದ ಸೋಂಕು ಹೆಚ್ಚಾಯಿತು ಎಂಬ ಪ್ರಚಾರ ಕೋಮುವಾದಿ ಆರ್‌ಎಸ್‌ಎಸ್‌ ಹುನ್ನಾರ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದರು.

ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ ಮರೆಮಾಚಲು ತಬ್ಲೀಘಿಗಳಿಂದ ಕೊರೋನಾ ಸೋಂಕು ಹರಡಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಇಂತಹದೊಂದು ಸಮಾವೇಶ ನಡೆಸಲು ತಬ್ಲೀಘಿಗಳಿಗೆ ಅವಕಾಶ ಕೊಟ್ಟಿದ್ದು ಯಾರು? ಕೇಂದ್ರ ಸರ್ಕಾರವೇ ಅಲ್ಲವೇ? ಮುನ್ನೆಚ್ಚರಿಕೆ ವಹಿಸಿ ಇಂತಹ ಸಮಾವೇಶಗಳಿಗೆ ಅವಕಾಶ ನೀಡದೆ ಸಮಸ್ಯೆ ತಪ್ಪಿಸಬೇಕಿತ್ತು ಎಂದರು.

ಇನ್ನು ದೇಶದಲ್ಲಿ ಕೊರೋನಾ ಸೋಂಕಿಗೆ ತಬ್ಲೀಘಿಗಳೇ ಕಾರಣ ಎನ್ನುತ್ತಾರೆ. ಇಟಲಿ, ಅಮೆರಿಕದಲ್ಲಿ ಈ ಸೋಂಕು ವಿಪರೀತವಾಗಿ ಹಬ್ಬಿಲ್ಲವೇ? ಅಲ್ಲಿ ಯಾವ ತಬ್ಲೀಘಿಗಳಿದ್ದಾರೆ? ಎಂದು ಪ್ರಶ್ನಿಸಿದರು.