ಬೆಂಗಳೂರು (ಜ.17):  ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತಮ್ಮ ಹೆಸರು ಘೋಷಣೆಯಾಗುವ ನಿರೀಕ್ಷೆಯಲ್ಲಿರುವ ಡಿ.ಕೆ. ಶಿವಕುಮಾರ್‌, ಒಂದು ವೇಳೆ ತಾವು ಅಧ್ಯಕ್ಷರಾದರೆ ಪಕ್ಷ ಸಂಘಟನೆಗೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಒಂದು ತಿಂಗಳ ಹಿಂದೆಯೇ ಕಾರ್ಯಯೋಜನೆ ಸಿದ್ಧಪಡಿಸಿಕೊಂಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ಈ ಕಾರ್ಯ ಯೋಜನೆ ಪ್ರಕಾರ ತಾವು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರೆ ಮೊದಲು ದೊಡ್ಡ ಮಟ್ಟದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸುವುದು. ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಆಹ್ವಾನಿಸಬೇಕು. ಈ ಕಾರ್ಯಕ್ರಮಕ್ಕೆ ಸಾವಿರಾರು ಕಾರ್ಯಕರ್ತರನ್ನು ಆರಂಭಿಸಿ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಹುಟ್ಟುಹಾಕುವುದು ಉದ್ದೇಶ.

ಇದಾದ ನಂತರ ನಾಲ್ಕು ವಿಭಾಗಗಳಲ್ಲೂ ಒಂದೊಂದು ಸಮಾವೇಶ ಆಯೋಜಿಸುವುದು. ಈ ಸಮಾರಂಭಗಳ ನಂತರ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ನಡೆಸಿದ ಪಾದಯಾತ್ರೆ ಮಾದರಿಯಲ್ಲಿ ರಾಜ್ಯದ ಮೂಲೆ ಮೂಲೆಯಲ್ಲೂ ಪಾದಯಾತ್ರೆ ನಡೆಸುವುದು. ಬಿಜೆಪಿ ಸರ್ಕಾರದ ವೈಫಲ್ಯಗಳ ಬಿಂಬಿಸುವ ನೆಪದಲ್ಲಿ ಈ ಪಾದಯಾತ್ರೆಯನ್ನು ಆಯೋಜಿಸುವುದು ಉದ್ದೇಶ.

ಉಳುಮೆ ಮಾಡಿಕೊಂಡಿರ್ತೀನಿ, ರೇಸಲ್ಲಿ ನಾನಿಲ್ಲ!: ಕಣದಿಂದ ಹಿಂದೆ ಸರಿದ್ರಾ ಡಿಕೆಶಿ?..

ಇದಲ್ಲದೆ, ಮುಂಬುರುವ ಬಿಬಿಎಂಪಿ, ಜಿ.ಪಂ. ತಾ.ಪಂ ಹಾಗೂ ಗ್ರಾ.ಪಂ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಲು ಅನುಕೂಲವಾಗುವಂತೆ ತಂತ್ರಗಾರಿಕೆ ರೂಪಿಸಲು ಹಿರಿಯ ನಾಯಕರು (ಎಚ್‌.ಕೆ. ಪಾಟೀಲ್‌, ಬಿ.ಕೆ. ಹರಿಪ್ರಸಾದ್‌, ಮುನಿಯಪ್ಪ) ಮೊದಲಾದ ನಾಯಕರ ಸಲಹಾ ಸಮಿತಿಯೊಂದನ್ನು ರಚಿಸುವುದು.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಸ್ಥಳೀಯ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು. ಸಾಧ್ಯವಾದರೆ ಹಾಲಿ ಶಾಸಕರನ್ನು ಸಹ ಸೆಳೆಯುವುದು. ತನ್ಮೂಲಕ ಒಕ್ಕಲಿಗ ಪ್ರಾಬಲ್ಯದ ಪ್ರದೇಶದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸುವುದು. ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ಲಿಂಗಾಯತ ಸಮುದಾಯ ಹಾಗೂ ನಾಯಕ ಸಮುದಾಯದ ತಲಾ ಒಬ್ಬೊಬ್ಬ ನಾಯಕರನ್ನು ತಮ್ಮೊಂದಿಗೆ ಸೇರಿಸಿಕೊಂಡು ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡುವುದು.