ನನಗೆ ಸೋಮಣ್ಣ ಕಾಂಗ್ರೆಸ್‌ ಸೇರುವ ಬಗ್ಗೆ ಸಮಾಧಾನ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಸಚಿವರಾಗಿ ಸೋಮಣ್ಣ ವಿಫಲರಾಗಿದ್ದಾರೆ. ಅವರಿಂದ ಕಾಂಗ್ರೆಸ್ಸಿಗೆ ಯಾವುದೇ ಲಾಭ ಆಗುವುದಿಲ್ಲ ಎಂದ ಈಶ್ವರ್‌ ಖಂಡ್ರೆ. 

ಬೆಂಗಳೂರು(ಮಾ.10): ಸಚಿವ ವಿ.ಸೋಮಣ್ಣ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಗುಸುಗುಸು ಎದ್ದಿರುವ ಬೆನ್ನಲ್ಲೇ ಇದಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧ ವ್ಯಕ್ತವಾಗಲಾರಂಭಿಸಿದೆ. ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನಗೆ ಸೋಮಣ್ಣ ಕಾಂಗ್ರೆಸ್‌ ಸೇರುವ ಬಗ್ಗೆ ಸಮಾಧಾನ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಸಚಿವರಾಗಿ ಸೋಮಣ್ಣ ವಿಫಲರಾಗಿದ್ದಾರೆ. ಅವರಿಂದ ಕಾಂಗ್ರೆಸ್ಸಿಗೆ ಯಾವುದೇ ಲಾಭ ಆಗುವುದಿಲ್ಲ ಎಂದು ಹೇಳಿದ್ದಾರೆ.

ಸಚಿವ ಸೋಮಣ್ಣ ಕಾಂಗ್ರೆಸ್‌ ಸೇರ್ಪಡೆ: ಯಡಿಯೂರಪ್ಪ ಪ್ರತಿಕ್ರಿಯೆ

ವಸತಿ ಸಚಿವರಾಗಿ ಸೋಮಣ್ಣ ಬಡವರಿಗೆ ಸಾವಿರಾರು ಮನೆ ಕಟ್ಟಿಸುತ್ತೇನೆ ಎಂದು ಸದನದಲ್ಲಿ ಹೇಳಿದ್ದರು. ಆದರೆ, ಮನೆ ಕಟ್ಟಲು ಹೋದ ಜನರಿಗೆ ಅನ್ಯಾಯ, ಕಿರುಕುಳ ನೀಡಿದ್ದಾರೆ. ಅಂತಹವರು ಕಾಂಗ್ರೆಸ್‌ಗೆ ಹೇಗೆ ಬರುತ್ತಾರೆ? ರಾಜ್ಯ ನಾಯಕರೇನಾದರೂ ಸೋಮಣ್ಣ ಅವರನ್ನು ಸೇರಿಸಿಕೊಳ್ಳುವ ತೀರ್ಮಾನ ಮಾಡಿದ್ದಲ್ಲಿ ಅದು ಯಾವ ಕಾರಣಕ್ಕೆ ಎಂದು ಗೊತ್ತಿಲ್ಲ. ಈ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ. ಅವರಿಂದ ಪಕ್ಷಕ್ಕೆ ಯಾವ ರೀತಿಯ ಪ್ರಯೋಜನವೂ ಇಲ್ಲ. ನಮ್ಮ ಅಸಮಾಧಾನವನ್ನು ಪಕ್ಷದ ನಾಯಕರಿಗೆ ತಿಳಿಸುತ್ತೇನೆ ಎಂದರು.