ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯ ಬಳಿ ರಾಜೀನಾಮೆ ಕೇಳ್ತಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿ[ಡಿ.4]: ಉಪಚುನಾವಣೆ ಫಲಿತಾಂಶದ ಬಳಿಕ ನಾನು ರಾಜೀನಾಮೆ ಕೊಡುವ ಪರಿಸ್ಥಿತಿ ಬರಲ್ಲ. ಬದಲಿಗೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವಂತೆ ಕಾಂಗ್ರೆಸ್ ಕೇಳಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಈ ಮೂಲಕ ಈ ಸರ್ಕಾರಕ್ಕೆ ಬಹುಮತ ಸಿಗಲಿದೆ ಎಂದು ಸೂಚ್ಯವಾಗಿ ಹೇಳಿದರು.
ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತೆ. ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ ಎಂಬ ಮಾತುಗಳೆಲ್ಲ ಸತ್ಯಕ್ಕೆ ದೂರವಾದವು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ. ಹೀಗಾಗಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರನ್ನು ಕೇಳಬಹುದು ಎಂದರು.
ಉಪಚುನಾವಣೆ ನಡೆಯುತ್ತಿರುವ ಎಲ್ಲ 15 ಕ್ಷೇತ್ರದಲ್ಲಿ ಈಗಾಗಲೇ 2 ಬಾರಿ ಪ್ರಚಾರ ಮಾಡಿದ್ದೇನೆ. ಎಲ್ಲೆಡೆ ಬಿಜೆಪಿ ಪರ ಅಲೆಯಿದೆ. ನಿರೀಕ್ಷೆ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ನಾವು ಎಲ್ಲ ಕ್ಷೇತ್ರದಲ್ಲಿ ಗೆಲ್ಲುವುದು ಶತಸಿದ್ಧ. ಈ ಚುನಾವಣೆ ಬಳಿಕ ಸರ್ಕಾರ ಇನ್ನಷ್ಟುಸ್ಥಿರವಾಗಲಿದೆ. ಸಿದ್ದರಾಮಯ್ಯ ಆಧಾರವಿಲ್ಲದೆ ಉಪಚುನಾವಣೆ ಬಳಿಕ ಸಿಎಂ ರಾಜೀನಾಮೆ ನೀಡುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮೈತ್ರಿಯೆಂದು ಮಾತನಾಡುವ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ಯಾಕೆ ಈವರೆಗೂ ರಾಜ್ಯಸಭೆಗೆ ತಮ್ಮ ಅಭ್ಯರ್ಥಿ ಯಾರೆಂದು ಪ್ರಕಟಿಸಿಲ್ಲ ಎಂದು ಪ್ರಶ್ನಿಸಿದ ಬಿಎಸ್‌ವೈ, ಬಿಜೆಪಿ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಬಹುತೇಕ ಅವಿರೋಧ ಆಯ್ಕೆಯಾದಂತಾಗಿದೆ. ಅಧಿಕೃತ ಗೆಲುವಿನ ಘೋಷಣೆ ಮಾತ್ರ ಬಾಕಿಯಿದೆ. ಡಾ. ಕೆ. ಪದ್ಮರಾಜ್, ವೆಂಕಟೇಶ್ವರ ಸ್ವಾಮಿ ಈ ಇಬ್ಬರು ಅನುಮೋದಕರಿಲ್ಲದೇ ನಾಮಪತ್ರ ಸಲ್ಲಿಸಿದ್ದಾರೆ. ಇವರಿಬ್ಬರ ನಾಮಪತ್ರಗಳು ತಿರಸ್ಕಾರವಾಗಲಿದೆ. ಆದರೆ, ಕಾಂಗ್ರೆಸ್- ಜೆಡಿಎಸ್‌ನವರಿಗೆ ಈವರೆಗೂ ತಮ್ಮ ಅಭ್ಯರ್ಥಿಯನ್ನು ಘೋಷಿಸಲು ಸಾಧ್ಯವಾಗಿಲ್ಲವೆಂದರೆ ಇವರ ಮೈತ್ರಿ ಎಲ್ಲಿಗೆ ಬಂದಿದೆ ಎಂದು ತಿಳಿಯುತ್ತಿದೆ. ರಾಮಮೂರ್ತಿ ಈಗಾಗಲೇ ಗೆಲವು ಸಾಧಿಸಿದಂತೆ ತೋರುತ್ತಿದೆ ಎಂದು ಹೇಳಿದರು.
BSY, ಸಿದ್ದು, ರಾಮುಲು ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ...
ನಮ್ಮ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವ ನಾಯಕರು ಪ್ರಚಾರಕ್ಕೆ ಬಂದಿಲ್ಲ ಎಂಬ ಬಗ್ಗೆ ಒಂದು ಉದಾಹರಣೆ ಕೊಡಿ ಎಂದು ಪ್ರಶ್ನಿಸಿದರು. ಅಲ್ಲದೇ, ಜೆಡಿಎಸ್- ಕಾಂಗ್ರೆಸ್ ನಿನ್ನೆಯಿಂದ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎನ್ನುತ್ತಿದ್ದಾರೆ. ಆದರೆ, ವಾಸ್ತವತೆಯಲ್ಲಿ ಒಗ್ಗಟ್ಟು ಕಾಣುತ್ತಿಲ್ಲ. ಕುಮಾರಸ್ವಾಮಿ- ದೇವೇಗೌಡರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಜನ ಯಡಿಯೂರಪ್ಪ ಉತ್ತಮ ಆಡಳಿತ ನೀಡುವ ಭರವಸೆ ಇಟ್ಟುಕೊಂಡಿದ್ದು, ಮುಂದಿನ ದಿನದಲ್ಲಿ ಸರ್ಕಾರ ಸ್ಥಿರವಾಗಿ ಉತ್ತಮ ಆಡಳಿತ ನೀಡಲಿದೆ ಎಂದರು.
ರೈತಪರ ಬಜೆಟ್:
ಕಳೆದ ನಾಲ್ಕು ತಿಂಗಳಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲಿದ್ದೇನೆ. ಈ ಸಲ ರೈತ ಪರ ಬಜೆಟ್ ಆಗಲಿದೆ. ರಾಜ್ಯದ ರೈತರು ನೆಮ್ಮದಿಯಿಂದ ಬದುಕಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
