ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ ತಾರಕ್ಕೇರಿದ್ದು, ಅಧಿಕಾರಿಗಳು ಹಾಗೂ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ. ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಿ ಮನೆಗೆ ಕಳುಹಿಸುವುದು ಶತಸಿದ್ಧ ಎಂದು ಕಾಂಗ್ರೆಸ್‌ ವಕ್ತಾರ ವಿ.ಎಸ್‌.ಉಗ್ರಪ್ಪ ಟೀಕಿಸಿದರು.

ಚಿಕ್ಕಬಳ್ಳಾಪುರ (ನ.28): ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ ತಾರಕ್ಕೇರಿದ್ದು, ಅಧಿಕಾರಿಗಳು ಹಾಗೂ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ. ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಿ ಮನೆಗೆ ಕಳುಹಿಸುವುದು ಶತಸಿದ್ಧ ಎಂದು ಕಾಂಗ್ರೆಸ್‌ ವಕ್ತಾರ ವಿ.ಎಸ್‌.ಉಗ್ರಪ್ಪ ಟೀಕಿಸಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಿಟ್ಲರ್‌ ರೀತಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ರಾಷ್ಟ್ರವ್ಯಾಪಿ ಸೇಡಿನ ರಾಜಕಾರಣ ಮಾಡುತ್ತಿದ್ದು ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿ ಜನರ ವಿಶ್ವಾಸ ಕಳೆದುಕೊಂಡಿದೆಯೆಂದು ವಾಗ್ದಾಳಿ ನಡೆಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ವ್ಯಾಪಕ ಭ್ರಷ್ಟಾಚಾರದ ಪರಿಣಾಮ ಬಿಜೆಪಿ ಆಡಳಿತದ ಬಗ್ಗೆ ಜನ ಭ್ರಮನಿರಸನವಾಗಿದ್ದಾರೆ. ಮೋದಿ ಒಬ್ಬ ಆಧುನಿಕ ದುರ್ಯೋಧ, ವಾಮ ಮಾರ್ಗದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಕೆಲಸ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದಾರೆಂದರು. ರಾಜ್ಯದ ನೆಲ,ಜಲ ಗಡಿ, ಸಂಸ್ಕೃತಿ, ಪರಂಪರೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಬದ್ಧತೆ ಹೊಂದಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಅಧಿಕಾರದಲ್ಲಿದ್ದರೂ ಮಹಾರಾಷ್ಟ್ರ-ಕರ್ನಾಟಕದ ನಡುವಿನ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೆ ಸರ್ಕಾರ ಹೋಗುತ್ತಿಲ್ಲ. 

ಚಿಕ್ಕಬಳ್ಳಾಪುರ ಜಿಲ್ಲೆಯ 3976 ರೈತರಿಗೆ 5.38 ಕೋಟಿ ಬೆಳೆಹಾನಿ ಪರಿಹಾರ: ಸಚಿವ ಅಶೋಕ್‌

ರಾಜ್ಯದ ಒಕ್ಕೂಟ ವ್ಯವಸ್ಥೆಯನ್ನು ಧಕ್ಕೆ ತರುವ ಮೂಲಕ ಕನ್ನಡಿಗರನ್ನು ಕೆರಳಿಸುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು. ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಕಾರಣ ಎಂಬ ಎಚ್ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಪತನವಾಗಲು ಆಪರೇಷನ್‌ ಕಮಲ ಕಾರಣವೆಂದು ಹೇಳಿರುವುದು ಸದನದಲ್ಲಿ ನಮೂದಾಗಿದೆ. ಆದರೆ ಚುನಾವಣೆಯ ವೇಳೆ ಜನಬೆಂಬಲ ಪಡೆಯುವ ಉದ್ದೇಶಕ್ಕೆ ಮತ್ತೊಬ್ಬರ ತೇಜೋವಧೆ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

ಸುಧಾಕರ್‌ ರಾಜೀನಾಮೆ ಕೊಡಲಿ: ರಾಜ್ಯದಲ್ಲಿ ಜಿಎನ್‌ಎಂ, ನರ್ಸಿಂಗ್‌ ಪರೀಕ್ಷೆ ರದ್ದುಗೊಳಿಸಿದ ವಿಚಾರದಲ್ಲಿ ನೈತಿಕ ಹೊಣೆಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಕೂಡಲೇ ರಾಜಿನಾಮೆ ನೀಡಬೇಕು. ಜಿಎನ್‌ಎಂ, ನರ್ಸಿಂಗ್‌ ಪರೀಕ್ಷೆಯಲ್ಲಿ ಮಾಸ್‌ ಕಾಫಿಗೆ ಅವಕಾಶ ಮಾಡಿಕೊಟ್ಟಿರುವ ಮಾಹಿತಿ ಹೊರ ಬರುತ್ತಿದ್ದಂತೆ ಪರೀಕ್ಷೆಯನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳೇ ಅಲ್ಲದವರು ಪರೀಕ್ಷೆ ಬರೆಯುತ್ತಿರುವುದು ಬಯಲಿಗೆ ಬಂದಿದ್ದು, ಇದರಿಂದ ಅರ್ಹರಲ್ಲದವರು ಆಯ್ಕೆಯಾಗುವ ಮೂಲಕ ಗ್ರಾಮೀಣ ಭಾಗದ ಜೀವನದೊಂದಿಗೆ ಚೆಲ್ಲಾಟವಾಡುವ ಕೃತ್ಯಕ್ಕೆ ಕುಮ್ಮಕ್ಕು ನೀಡಿದಂತಾಗಿದೆ. 

Chikkaballapur: ಎತ್ತಿನಹೊಳೆ ಯೋಜನೆಗೆ 23 ಸಾವಿರ ಕೋಟಿ: ಸಚಿವ ಸುಧಾಕರ್‌

ಪರೀಕ್ಷೆ ರದ್ದುಗೊಳಿಸಿರುವುದು ರಾಜ್ಯದ 860 ಕಾಲೇಜುಗಳಲ್ಲಿ ಜಿಎನ್ಎಂ, ನರ್ಸಿಂಗ್‌ ವ್ಯಾಸಂಗ ಮಾಡುತ್ತಿರುವ 1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದೆಯೆಂದು ಕಳವಳ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ, ಎಂ.ಶಿವಾನಂದ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯಶಂಕರ್‌, ನಂದಿ ಅಂಜಿನಪ್ಪ, ಯಲುವಹಳ್ಳಿ ರಮೇಶ್‌, ವಿನಯ್‌ ಶ್ಯಾಮ್‌, ಎಂ.ವಿ.ಕೃಷ್ಣಪ್ಪ, ಗಂಗರೇಕಾಲುವೆ ನಾರಾಯಣಸ್ವಾಮಿ, ಪ್ರಕಾಶ್‌, ಭರಣಿ ವೆಂಕಟೇಶ್‌, ವಕೀಲ ನಾರಾಯಣಸ್ವಾಮಿ, ಹನುಮಂತಪ್ಪ, ಅಡ್ಡಗಲ್‌ ಶ್ರೀಧರ್‌ ಸೇರಿದಂತೆ ಮತ್ತಿತರರು ಇದ್ದರು.