Grama Vastavya: ಚಿಕ್ಕಬಳ್ಳಾಪುರ ಜಿಲ್ಲೆಯ 3976 ರೈತರಿಗೆ 5.38 ಕೋಟಿ ಬೆಳೆಹಾನಿ ಪರಿಹಾರ: ಸಚಿವ ಅಶೋಕ್
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿರುವ 3,976 ಮಂದಿ ರೈತರಿಗೆ 5.38 ಕೋಟಿ ರು, ಬೆಳೆ ನಷ್ಠ ಪರಿಹಾರ ನೀಡಲಾಗಿದೆಯೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಚಿಕ್ಕಬಳ್ಳಾಪುರ (ನ.28): ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿರುವ 3,976 ಮಂದಿ ರೈತರಿಗೆ 5.38 ಕೋಟಿ ರು, ಬೆಳೆ ನಷ್ಠ ಪರಿಹಾರ ನೀಡಲಾಗಿದೆಯೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಜಿಲ್ಲೆಯ ಜರಬಂಡಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮ ವಾಸ್ತವ್ಯ ಮುಗಿದ ಬಳಿಕ ಗ್ರಾಮದಲ್ಲಿ 216 ಮಂದಿ ರೈತರಿಗೆ ಫೌತಿ ಖಾತೆಯ ಪಹಣಿಗಳನ್ನು ಖುದ್ದು ರೈತರಿಗೆ ವಿತರಿಸಿ ಮಾತನಾಡಿದ ಅವರು, ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಕಷ್ಟು ಹಣ ಅವರ ಪಿಡಿ ಖಾತೆಗಳಲ್ಲಿ ಜಮೆ ಆಗಿದೆಯೆಂದರು.
ಸರ್ಕಾರದ ಖಜಾನೆ ಬರಿದಾಗಿಲ್ಲ: ವಿರೋಧ ಪಕ್ಷಗಳು ಸರ್ಕಾರ ದಿವಾಳಿ ಆಗಿದೆ. ಖಜಾನೆಯಲ್ಲಿ ಹಣ ಇಲ್ಲದಂದು ಹೇಳುತ್ತಿದ್ದಾರೆ. ಆದರೆ ಸರ್ಕಾರ ಆರ್ಥಿಕವಾಗಿ ಸಾಕಷ್ಟುಸದೃಢವಾಗಿದೆ. ವಿರೋಧ ಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜಿಲ್ಲೆಯಲ್ಲಿ ಮಳೆಗೆ 435 ಮನೆಗಳಿಗೆ ಹಾನಿ ಆಗಿದ್ದು, ಆ ಕುಟುಂಬಸ್ಥರಿಗೆ ಪರಿಹಾರಕ್ಕಾಗಿ 3.69 ಕೋಟಿ ರು. ಅನುದಾನ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 1225 ಜನ ಮೃತಪಟ್ಟಿದ್ದು ಅವರ ಕುಟುಂಬಗಳಿಗೆ 9.9 ಕೋಟಿ ರು. ಪರಿಹಾರ ವಿತರಿಸಲಾಗಿದೆ. ತಂದೆ ತಾಯಿರನ್ನು ಕಳೆದುಕೊಂಡು ಮಕ್ಕಳನ್ನು ಕೂಡ ಸರ್ಕಾರ ದತ್ತು ತೆಗೆದುಕೊಂಡು ಶಿಕ್ಷಣದಿಂದ ಹಿಡಿದು ಅವರಿಗೆ ಎಲ್ಲವನ್ನು ಸರ್ಕಾರ ನೀಡುತ್ತಿದೆಯೆಂದರು.
ಮಂಚೇನಹಳ್ಳಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಸಚಿವ ಅಶೋಕ್ ಘೋಷಣೆ
ಈ ಹಿಂದೆ ಬೆಳೆ ಹಾನಿ ಪರಿಹಾರ ವರ್ಷ ಆದರೂ ಬರುತ್ತಿರಲಿಲ್ಲ. ಆದರೆ ಈಗ ಒಂದು ತಿಂಗಳಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವ ವ್ಯವಸ್ಥೆಯನ್ನು ಪಾರದರ್ಶಕವಾಗಿಸಿ ಸರ್ಕಾರ ನೇರವಾಗಿ ರೈತರ ಖಾತೆಗೆ ಜಮೆ ಮಾಡಿದೆ. ರೈತರಿಗೆ ಬಹಳ ವರ್ಷಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ಪೌತಿ ಖಾತೆಯನ್ನು ನಾವು ಒಂದು ಆಂದೋಲನವಾಗಿ ಮಾಡಿ ರೈತರಿಗೆ ಪೌತಿ ಖಾತೆ ಮಾಡಿಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಪಿಂಚಣಿಗೆ 290 ಕೋಟಿ ಕೊಡುತ್ತಿದೆ. ಡಾ.ಕೆ ಸುಧಾಕರ್, ಈ ಭಾಗದಲ್ಲಿ ಒಳ್ಳೆಯ ಕಾರ್ಯ ಮಾಡಿ ಮನೆ ಮಾತಾಗಿದ್ದಾರೆ. ಪ್ರತಿ ಮನೆಗೂ ಆರೋಗ್ಯ ಕಾರ್ಡ್ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಜಮೀನು ಮಾರಬೇಡಿ: ರೈತರು ಪೌತಿ ಖಾತೆ ಆಂದೋಲನದ ಲಾಭ ಪಡೆದುಕೊಂಡು ಮುಂದಿನ ದಿನಗಳಲ್ಲಿ ಯಾರಿಗೂ ಜಮೀನು ಮಾರಾಟ ಮಾಡದೇ ದಾಖಲೆಗಳನ್ನು ಮುಂದಿನ ನಿಮ್ಮ ಮಕ್ಕಳಿಗೆ ಭದ್ರಪಡಿಸಬೇಕೆಂದು ರೈತರಿಗೆ ಸಲಹೆ ನೀಡಿದರು. ಪೌತಿ ಖಾತೆ ಆಂದೋಲನವನ್ನು ಇನ್ನಷ್ಟುಚುರುಕುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಗೊಲ್ಲಹಳ್ಳಿ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ: ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಕಂದಾಯ ಸಚಿವ ಆರ್.ಅಶೋಕ್‌ಗೆ ಗೊಲ್ಲಹಳ್ಳಿ ಗ್ರಾಮಸ್ಥರು, ನಮ್ಮೂರಲ್ಲಿ ನ್ಯಾಯ ಬೆಲೆ ಅಂಗಡಿ ಇಲ್ಲ. ಪಡಿತರಕ್ಕೆ ಬೇರೆ ಊರಿಗೆ ಹೋಗಬೇಕು.
ನಮ್ಮೂರಲ್ಲಿಯೆ ನ್ಯಾಯ ಬೆಲೆ ಅಂಗಡಿ ತೆರೆದರೆ ನಮಗೆ ಅನುಕೂಲವಾಗುತ್ತದೆಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಕಂದಾಯ ಸಚಿವ ಆರ್.ಅಶೋಕ್, ಗ್ರಾಮದಲ್ಲಿಯೆ ನ್ಯಾಯಬೆಲೆ ಅಂಗಡಿ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ದ್ರಾಕ್ಷಿ ಬೋರ್ಡ್‌ನ ಅಧ್ಯಕ್ಷ ರವಿನಾರಾಯಣರೆಡ್ಡಿ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಡಿ.ಎಲ್.ನಾಗೇಶ್, ಉಪ ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗೊಲ್ಲಹಳ್ಳಿಯಲ್ಲಿ ಉಪಹಾರ ಸವಿದ ಸಚಿವರು: ಚಿಕ್ಕಬಳ್ಳಾಪುರದ ಜರಬಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದ ಮುನಿರಾಜು ಮತ್ತು ಪೂಜಮ್ಮ ದಂಪತಿಗಳ ಮನೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಬೆಳಗಿನ ಉಪಹಾರವಾಗಿ ಉಪ್ಪಿಟ್ಟು ಸೇವಿಸಿದರು. ಈ ವೇಳೆ ಆ ಕುಟುಂಬದ ಕುಂದು ಕೊರತೆಗಳನ್ನು ಆಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್ ರವರು ಸಹ ಸಚಿವರುಗಳ ಜೊತೆ ಉಪಹಾರ ಸವಿದರು. ಈ ಸಂದರ್ಭದಲ್ಲಿ ಜರಬಂಡಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಾಥ್ ಬಾಬು, ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
Chikkaballapur: ಎತ್ತಿನಹೊಳೆ ಯೋಜನೆಗೆ 23 ಸಾವಿರ ಕೋಟಿ: ಸಚಿವ ಸುಧಾಕರ್
ಕರಾಟೆ ಕುರಿತು ಸಲಹೆ ನೀಡಿದ ಸಚಿವ: ಜರಬಂಡಹಳ್ಳಿಯ ಗ್ರಾಮ ವಾಸ್ತವ್ಯ ಅಂಗವಾಗಿ ಗ್ರಾಮದ ಹೊರ ವಲಯದ ಹನುಮಂತಪುರ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವರಾದ ಆರ್.ಅಶೋಕ್ ಬೆಳಿಗ್ಗೆ ಎದ್ದು ಕೆಲಕಾಲ ವಾಯು ವಿಹಾರ ನಡೆಸಿದರು. ನಂತರ ಶಾಲೆಯ ಆವರಣದಲ್ಲಿ ಗಿಡ ನಟ್ಟಿದರು. ನಂತರ ವಿದ್ಯಾರ್ಥಿಗಳು ಕರಾಟೆ ತರಬೇತಿ ಪಡೆಯುವುದನ್ನು ವೀಕ್ಷಿಸಿ ವಿದ್ಯಾರ್ಥಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಗೌರಿಬಿದನೂರು ತಾಲ್ಲೂಕಿನ ತಹಸೀಲ್ದಾರ್ ಶ್ರೀನಿವಾಸ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಹರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.