ಬೆಂಗಳೂರು (ಸೆ.22): ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರಗಳಿಗೆ ಮೂಗು ತೂರಿಸುವ ಚಾಳಿಯನ್ನು ಬಿಟ್ಟು ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ತಿರುಗೇಟು ನೀಡಿದ್ದಾರೆ.

 ಕೆ.ಎನ್‌. ರಾಜಣ್ಣ ಹಾಗೂ ಟಿ.ಬಿ. ಜಯಚಂದ್ರ ಅವರ ನಡುವೆ ಮುನಿಸಿದೆ ಎಂದಿರುವ ರವಿಕುಮಾರ್‌ ಹೇಳಿಕೆಯನ್ನು ಖಂಡಿಸಿರುವ ಸಲೀಂ, ‘ಅವರು ಮೊದಲು ಬಿಜೆಪಿ ಪಕ್ಷದ ಒಳಗಿನ ಅಸಮಾಧಾನ ಮತ್ತು ಯಡಿಯೂರಪ್ಪ ಸರ್ಕಾರದ ಹಗರಣಗಳು, ಕೊರೋನಾ ಅವ್ಯವಹಾರ, ನೆರೆ ಹಾವಳಿಯಿಂದ ಜನರಿಗೆ ಆಗಿರುವ ತೊಂದರೆ, ಕೇಂದ್ರಕ್ಕೆ ರಾಜ್ಯದ ಬಗ್ಗೆ ಇರುವ ಮಲತಾಯಿ ಧೋರಣೆ ಬಗ್ಗೆ ಧ್ವನಿ ಎತ್ತಲಿ’ ಎಂದು ಒತ್ತಾಯಿಸಿದಿದ್ದಾರೆ

'ಕೆ.ಆರ್‌.ಪೇಟೆ ಗೆದ್ದಂತೆ ಶಿರಾದಲ್ಲಿಯೂ ಬಿಜೆಪಿಗೆ ಗೆಲುವು ಖಚಿತ' .

ರವಿಕುಮಾರ್‌ ಮಾತು ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತಿದೆ. ಮೊದಲು ಅಧಿವೇಶನದಲ್ಲಿ ಕಿತ್ತಾಡಿದ ನಿಮ್ಮ ಶಾಸಕರು, ಸಚಿವರಿಗೆ ಬುದ್ದಿ ಹೇಳಿ. ಜನರ ಸಮಸ್ಯೆಗಳ ಬಗ್ಗೆ ಗಮನ ಕೊಡಲು ವಿಫಲವಾಗಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅದರ ಬಗ್ಗೆ ಮಾತನಾಡಿ’ ಎಂದು ಪ್ರಕಟಣೆ ಮೂಲಕ ಸವಾಲು ಎಸೆದಿದ್ದಾರೆ.