ಶಿರಾ (ಸೆ.22): ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಕ್ಷೇತ್ರವನ್ನು ಯಾವ ರೀತಿಯಲ್ಲಿ ಬಿಜೆಪಿ ಪಕ್ಷವು ತನ್ನ ತೆಕ್ಕೆಗೆ ತೆಗೆದುಕೊಂಡಿತೋ, ಅದೇ ರೀತಿ ಶಿರಾ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ತನ್ನ ಕೈವಶ ಮಾಡಿಕೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿರಾ ನಗರದ ಕೋಟೆ ಬಡಾವಣೆಯಲ್ಲಿ ಸೋಮವಾರ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಬೂತ್‌ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮತದಿಂದ ಬಿಜೆಪಿ ಗೆಲ್ಲಿಸಿದ್ದೇವೆ. ಅಲ್ಲಿಯೂ ಸಹ ಒಂದು ಬಾರಿಯೂ ಬಿಜೆಪಿ ಗೆದ್ದಿರಲಿಲ್ಲ. ಅದೇ ರೀತಿ ಶಿರಾ ಕ್ಷೇತ್ರದಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಎಂದೂ ಗೆದ್ದಿಲ್ಲ ಎಂಬ ಮಾತನ್ನು ಅಳಿಸಿ ಹಾಕುವ ಮೂಲಕ ಕಮಲವನ್ನು ಅರಳಿಸುತ್ತೇವೆ ಎಂದು ತಿಳಿಸಿದರು.

ಕೊರೋನಾ ಭೀತಿ: 6 ದಿನಕ್ಕೆ ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಲು ತೀರ್ಮಾನ ...

ಶಿರಾದಲ್ಲಿ ಕಳೆದ ಎಲ್ಲ ವಿಧಾನಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಗೆದ್ದವರೆಲ್ಲ ಅಧಿಕಾರ ಅನುಭವಿಸಿದ್ದಾರೆ. ಆದರೆ, ತಾಲೂಕಿಗೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಶಿರಾ ಕ್ಷೇತ್ರದ ಜನತೆ ಒಮ್ಮೆ ಬಿಜೆಪಿ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ನೀಡಿ ಗೆಲ್ಲಿಸಿ. ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಕೈಜೋಡಿಸಿ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಒಂದೆಡೆ ಭೀಕರ ಬರ, ಮತ್ತೊಂದೆಡೆ ನೆರೆ ಹಾವಳಿ ಇತ್ತು, ಇತ್ತೀಚೆಗೆ ಕೊರೋನಾ ವೈರಸ್‌ ಕಂಟಕದ ಸಮಸ್ಯೆ ಇದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ದಿಟ್ಟತನದಿಂದ ಆಡಳಿತ ನಡೆಸುತ್ತ, ರೈತರ, ಬಡವರ, ದೀನ ದಲಿತರ ಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.