ಬಿಎಸ್‌ವೈ ಸರ್ಕಾರಕ್ಕೆ ಮತ್ತೆ ಸಂಕಷ್ಟ ತಂದಿಟ್ಟ ಸಿದ್ದರಾಮಯ್ಯ...!
ಕೋವಿಡ್19 ಉಪಕರಣ ಖರೀದಿಯಲ್ಲಿ ಭ್ರಷ್ಟಚಾರವಾಗಿದೆ ಎಂದು ಆರೋಪಿಸಿ ಲೆಕ್ಕ ಕೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಂದು ಲೆಕ್ಕ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು, (ಆ.09): ಕೋವಿಡ್19 ಉಪಕರಣ ಖರೀದಿಯ ಲೆಕ್ಕ ಕೇಳಿ ಸರ್ಕಾರವನ್ನ ಒತ್ತಡಕ್ಕೆ ಸಿಲುಕಿಸಿದ್ದ ಸಿದ್ದರಾಮಯ್ಯ, ಇದೀಗ ಮತ್ತೊಂದು ಲೆಕ್ಕ ಕೇಳುವ ಮೂಲಕ ಸರ್ಕಾರಕ್ಕೆ ಸಂಕಷ್ಟಕ್ಕೆ ದೊಡ್ಡ ತಲೆನೋವು ತಂದಿಟ್ಟಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಗೆ ಸರ್ಕಾರದ ಖರ್ಚು ವೆಚ್ಚ, ಪರಿಹಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಲೆಕ್ಕ ಕೇಳಿದ್ದಾರೆ.
ನಾನೇನು ಹೆದರಿಕೊಳ್ತಿನಾ? ನೋಟಿಸ್ ಬಂಡವಾಳ ಏನು ನನಗೆ ಗೊತ್ತಿಲ್ವಾ..? ಗುಡುಗಿದ ಸಿದ್ದು
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದು, ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಕಾರಣದಿಂದಾಗಿಯೇ ಈ ಬಾರಿಯ ಅತಿವೃಷ್ಟಿಗೆ ರಾಜ್ಯಸರ್ಕಾರ ಕೈಕಾಲು ಬಡಿಯುತ್ತಿದೆ. ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದೆ, ಎಂದಿನಂತೆ ಸರ್ಕಾರದಿಂದ ಉತ್ತರ ಇಲ್ಲ. ಈಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷದ ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳೆಷ್ಟು? ಅವುಗಳನ್ನು ಪುನರ್ ನಿರ್ಮಿಸಲು ಖರ್ಚು ಮಾಡಿದ ಹಣ ಏಷ್ಟು? ಇನ್ನು ಎಷ್ಟು ಕಾಮಗಾರಿಗಳು ಬಾಕಿ ಇವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು? ಎಷ್ಟು ಕಟ್ಟಡಗಳನ್ನು ದುರಸ್ತಿ ಪಡಿಸಲಾಗಿದೆ ಮತ್ತು ಪುನರ್ ನಿರ್ಮಿಸಿಗೊಳ್ಳಲಾಗಿದೆ? ದುರಸ್ತಿಗೆ ಬಾಕಿ ಉಳಿದಿರುವುದು ಎಷ್ಟು? ಇದಕ್ಕಾಗಿ ಖರ್ಚಾದ ಹಣ ಎಷ್ಟು? ಈಗಲಾದರೂ ವಿವರ ನೀಡಬಹುದೇ ಎಂದು ಸರ್ಕಾರಕ್ಕೆ ಕೇಳಿದ್ದಾರೆ.