'ಮುಸ್ಲಿಂ ಗಣವೇಷ, ಖಡ್ಗ ಹಿಡಿದು ಕುಣಿದ ಬಿಎಸ್‌ವೈ, ಅಶೋಕ್ ಹಿಂದುಕುಲ ತಿಲಕರೇ?'
* ರಂಗೇರಿದ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ
* ಉಪಚುನಾವಣೆಯಲ್ಲಿ ಜಾತಿವಾರು ಸಭೆ
* ಈ ವಿಚಾರಕ್ಕೆ ಸಿದ್ದರಾಮಯ್ಯ-ಬಿಜೆಪಿ ನಡುವೆ ಟ್ವೀಟ್ ವಾರ್
ಬೆಂಗಳೂರು, (ಅ.25): ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ (By Election) ಕಾವು ರಂಗೇರಿದ್ದು, ರಾಜಕೀಯ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ವೈಯಕ್ತಿಕ ಟೀಕೆಗಳಿಗೆ ಇಳಿದಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಜಾತಿ ಜಗಳಕ್ಕೆ ಇಳಿದಿದ್ದಾರೆ.
ಹೌದು...ಸಿದ್ದರಾಮಯ್ಯ (Siddaramaiah) ಅವರನ್ನು ಜಾತಿವಿಭಜಕ ಎಂದು ಕರೆದ ಬಿಜೆಪಿಗೆ (BJP) ಸ್ವತಃ ಸಿದ್ದರಾಮಯ್ಯ ಅವರು ಟಾಂಗ್ ತಿರುಗೇಟು ಕೊಟ್ಟಿದ್ದು, ನಾನು ಜಾತಿವಾದಿ ಏನೀಗ ಎಂದು ಪ್ರಶ್ನಿಸಿದ್ದಾರೆ.
ಉಪಚುನಾವಣೆ ಬಳಿಕ ಕಾಂಗ್ರೆಸ್ ಇಬ್ಭಾಗ: ಹೀಗೊಂದು ಭವಿಷ್ಯ!
ಬಿಜೆಪಿ ಟ್ವೀಟ್‌ಗೆ ಸರಣಿ ಟ್ವೀಟ್ (Tweet) ಮಾಡುವ ಮೂಲಕ ತಿರುಗೇಟು ಕೊಟ್ಟಿರುವ ಸಿದ್ದಿ, ಶೋಷಿತ ಜಾತಿಗಳು ತಮಗಾಗಿರುವ ಅನ್ಯಾಯವನ್ನು ಹೇಳಿಕೊಳ್ಳಲು ಸಂಘಟಿತರಾಗಿವುದು ತಪ್ಪಲ್ಲ, ಅದು ಜಾತಿವಾದವೂ ಅಲ್ಲ. ಅಂತಹ ಜಾತಿ ಸಮಾವೇಶಗಳಲ್ಲಿ ಭಾಗವಹಿಸುವುದು ಜಾತಿವಾದವಾದರೆ.. ಹೌದು, ನಾನು ಜಾತಿವಾದಿ.. ಏನೀಗ..?
ನಾನು ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲವನ್ನು ಮನ್ನಾ ಮಾಡಿದ್ದೆ. ಇದು ಜಾತಿವಾದವೇ..? ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಜಾತಿವಾರು ಸಮಾವೇಶ ಮಾಡಿದ್ದ ಮತ್ತು ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳ ಮೊರೆ ಹೋಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರ ವಿರುದ್ಧ "ನೀವೇ ಜಾತಿವಾದಿಗಳು" ಎಂದು ಆರೋಪ ಮಾಡಿರುವ ಸಿದ್ದರಾಮಯ್ಯ, "ಕುರುಬ ಸಮಾವೇಶ ನಡೆಸಿದ್ದ ಈಶ್ವರಪ್ಪ, ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿದ ಯತ್ನಾಳ್, ಬ್ರಾಹ್ಮಣ ಸಮಾವೇಶದಲ್ಲಿ ಪಾಲ್ಗೊಂಡ ಜೋಶಿ, ಕಾಗೇರಿ, ಸುರೇಶ್ ಕುಮಾರ್, ಒಕ್ಕಲಿಗನೆಂಬ ಕಾರಣಕ್ಕೆ ಸಚಿವನಾದೆ ಎನ್ನುವ ಆರ್.ಅಶೋಕ್ ಜಾತಿವಾದಿಗಳಾ? ಜಾತ್ಯತೀತರಾ? ಎಂದು ಪ್ರಶ್ನಿಸುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ನಾನು ಭಾಗವಹಿಸಿದರೆ ಹಿಂದು ವಿರೋಧಿ. ಟಿಪ್ಪು ಬಗ್ಗೆ ಸರ್ಕಾರದಿಂದಲೇ ಪುಸ್ತಕ ಪ್ರಕಟಿಸಿ ಹಾಡಿ ಹೊಗಳಿದ ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಸ್ಲಿಮ್ ಗಣವೇಷ ಹಾಕಿ ಖಡ್ಗ ಹಿಡಿದು ಕುಣಿದ ಯಡಿಯೂರಪ್ಪ, ಅಶೋಕ್ ಹಿಂದುಕುಲ ತಿಲಕರೇ? ಎಂದು ತಿವಿದಿದ್ದಾರೆ.