ಮಹಾನಗರ ಪಾಲಿಕೆ ಎಲೆಕ್ಷನ್ ರಿಸಲ್ಟ್: ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
* ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ
* ಬೆಳಗಾವಿಯಲ್ಲಿ ಅಧಿಕಾರಕ್ಕೇರಿದ ಬಿಜೆಪಿ
* ಕಲಬುರಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಅಂತಂತ್ರ
* ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಬೆಂಗಳೂರು, (ಸೆ.06): ರಾಜ್ಯದ 3 ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಇಂದು (ಸೆ.06) ಪ್ರಕಟವಾಗಿದ್ದು, ಒಂದರಲ್ಲಿ (ಬೆಳಗಾವಿ) ಬಿಜೆಪಿ ಬಹುಮತ ಸಾಧಿಸಿದ್ರೆ, ಕಲಬುರಗಿ ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಇದರಿಂದ ಮೂರಲ್ಲಿ ಒಂದು ಸ್ವತಂತ್ರವಾಗಿದ್ರೆ, ಇನ್ನುಳಿದ ಎರಡು ಪಾಲಿಕೆಗಳು ಅತಂತ್ರವಾಗಿವೆ.
ಇನ್ನು ಕೆಲ ಪುರಸಭೆ, ನಗರಸಭೆ ಹಾಗೂ ಉಪಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಇನ್ನು ಈ ಬಗ್ಗೆ ಮಾಜಿ ಸಿಎಂ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕಲಬುರಗಿ ಅತಂತ್ರ : 4 ಸ್ಥಾನದಲ್ಲಿ ಗೆದ್ದ ಜೆಡಿಎಸ್ ಕಿಂಗ್ ಮೇಕರ್
ಬೆಂಗಳೂರಿನಲ್ಲಿ ಇಂದು (ಸೆ.06) ಮಾತನಾಡಿದ ಸಿದ್ದರಾಮಯ್ಯ, ಬೆಳಗಾವಿಯಲ್ಲಿ ಬಿಜೆಪಿ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಅಂದುಕೊಂಡಿದ್ದೇವೆ. ಆದರೆ ಹುಬ್ಬಳ್ಳಿ-ಧಾರವಾಡದಲ್ಲಿ ಅತಂತ್ರ ಪರಿಸ್ಥಿತಿ ಇದೆ. ಕಲಬುರಗಿಯಲ್ಲಿಯೂ ಯಾರಿಗೂ ಬಹುಮತ ಬಂದಿಲ್ಲ ಎಂದರು.
ತರೀಕೆರೆಯಲ್ಲಿ ಕಾಂಗ್ರೆಸ್ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ದೊಡ್ಡಬಳ್ಳಾಪುರದಲ್ಲಿಯೂ ಅತಂತ್ರ ಪರಿಸ್ಥಿತಿ ಇದೆ. ಮೈಸೂರು ಪಾಲಿಕೆ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಾರೆ. ಅಲ್ಲಿ ಮೊದಲು ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು ಎಂದು ಹೇಳಿದರು.
ಬೆಳಗಾವಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿ ಇತಿಹಾಸ ಸೃಷ್ಟಿ : MESಗೆ ಭಾರೀ ಮುಖಭಂಗ
ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವರು ಇದ್ದಾರೆ. ಮೂರು ಜನ ಬಿಜೆಪಿ ಶಾಸಕರಿದ್ದಾರೆ, ನಮ್ಮ ಶಾಸಕರಿಲ್ಲ. ರಾಜ್ಯದಲ್ಲಿಯೂ ಅವರದೇ ಸರ್ಕಾರ ಇದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳು ಅವರಿಗೆ ಇದೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪ ಇದೆ. ಕಲಬುರಗಿಯಲ್ಲಿ ನಮ್ಮವರನ್ನು ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪಾಲಿಕೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಬೆಳಗಾವಿ ಪಾಲಿಕೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ನಮಗೆ ಬೆಂಬಲ ಕೊಟ್ಟ ಎಲ್ಲ ಮತದಾರರಿಗೆ ಅಭಿನಂದನೆ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಏನಾದರೂ ಹೇಳಬಹುದು. ರಾಜ್ಯದಲ್ಲಿ ಬಿಜೆಪಿ ಪರವಾದ ಒಲವು ಎಲ್ಲಿದೆ ಎಂದು ಪ್ರಶ್ನೆ ಇದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಅಂದುಕೊಂಡಿರಲಿಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಏಕೆ ಗೆದ್ದಿಲ್ಲ. ಏಕೆ ಅಲ್ಲಿ ಅವರ ಪರವಾಗಿ ಮತದಾರರು ಇಲ್ಲವಾ? ಬಿಜೆಪಿಯವರು ಹಣ, ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಪಾಲಿಕೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರಷ್ಟೇ. ಸ್ಥಳೀಯ ವಿಚಾರಗಳ ಮೇಲೆ ಚುನಾವಣೆ ನಡೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ
3 ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ. ಜನರು ಬಿಜೆಪಿಯನ್ನು ಒಂದು ರೀತಿ ತಿರಸ್ಕಾರ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ ತಿರಸ್ಕಾರ ಮಾಡಿದ್ದಾರೆ. ನಾನು ಯಾವತ್ತೂ ಪಾಲಿಕೆ ಚುನಾವಣೆಗೆ ಪ್ರಚಾರ ಮಾಡಿಲ್ಲ. ರಾಜಕಾರಣಕ್ಕಾಗಿ ನೀಡುವ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಮೂರ್ಖತನದ ಹೇಳಿಕೆಗೆ ಪ್ರತಿಕ್ರಿಯೆ ಕೊಡಬಾರದು ಎಂದು ಹೇಳಿದರು.