ಬೆಂಗಳೂರು, (ಡಿ.24): ಅಕ್ರಮ ಡಿನೋಟಿಫಿಕೇಶನ್ ಪ್ರಕರಣದ ರದ್ಧತಿಗೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್​​ನಲ್ಲಿ ವಜಾಗೊಂಡಿದೆ. ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇಂದು (ಗುರುವಾರ) ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

'ಯಡಿಯೂರಪ್ಪ ತಡ ಮಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು'

ಬಿಎಸ್ ವೈ ಅವರು ರಾಜೀನಾಮೆ ಕೊಟ್ಟು ಸುಪ್ರೀಂ ಕೋರ್ಟ್ ಗೆ ಹೋಗಿ ಕ್ಲೀನ್ ಚಿಟ್ ಪಡೆದು ಮತ್ತೆ ಮುಖ್ಯಮಂತ್ರಿ ಆಗಲಿ. ಇಲ್ಲದಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ "ನಾ ಖಾವುಂಗ ನಾ ಖಾನೆ ದೂಂಗಾ" ಎನ್ನುವುದಕ್ಕೆ ಅರ್ಥ ಎಲ್ಲಿದೆ. ಬಿಎಸ್ ವೈ ರಾಜೀನಾಮೆ ಕೊಡದಿದ್ದರೆ ಮೋದಿಯವರೇ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ ಸುರ್ಜೇವಾಲ ಅವರು ಸಹ ಪ್ರತಿಕ್ರಿಯಿಸಿ, ತಡ ಮಾಡದೇ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೈಕೋರ್ಟ್ ಬಿಗ್ ಶಾಕ್: ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ