* ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಬಿಜೆಪಿ ಸೇರ್ಪಡೆ* ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ಸೇರ್ಪಡೆ* ಸುಬ್ರಹ್ಮಣ್ಯನಗರ ವಾರ್ಡ್ ನ ಪಾಲಿಕೆ ಮಾಜಿ ಸದಸ್ಯರಾಗಿದ್ದ ಮಂಜುನಾಥ್

ಬೆಂಗಳೂರು, (ಫೆ.19): ಮಲ್ಲೇಶ್ವರಂನ ಸುಬ್ರಹ್ಮಣ್ಯನಗರ ವಾರ್ಡ್ ನ ಪಾಲಿಕೆ ಮಾಜಿ ಸದಸ್ಯ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ(Siddaramaiah) ಕಟ್ಟಾ ಬೆಂಬಲಿಗ ಮಂಜುನಾಥ್ ಬಿಜೆಪಿಗೆ (BJP) ಸೇರ್ಪಡೆಯಾದರು.

ಬೆಂಗಳೂರು ನಗರ ಘಟಕದ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ (Dr CN Ashwath Narayan) ಅವರು ಪಕ್ಷದ ಬಾವುಟವನ್ನು ನೀಡಿ ಬರಮಾಡಿಕೊಂಡರು. 

Karnataka Politics ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್, ಪ್ರಭಾವಿ ಮುಖಂಡರು ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧ

ಈ ಸಂದರ್ಭದಲ್ಲಿ ಬಿಜೆಪಿ‌ ನಗರ ಜಿಲ್ಲಾಧ್ಯಕ್ಷ ನಾರಾಯಣಗೌಡ, ಉತ್ತರ ಜಿಲ್ಲೆ ಕಾರ್ಯದರ್ಶಿ ಗಂಗಹನುಮಯ್ಯ, ಮಲ್ಲೇಶ್ವರ ಮಂಡಲ ಅಧ್ಯಕ್ಷ ಕಾವೇರಿ ಕೇದಾರನಾಥ ಸೇರಿದಂತೆ ಇತರ ಪ್ರಮುಖರು ಇದ್ದರು.

ಈ ವೇಳೆ ಮಾತನಾಡಿದ ಅಶ್ವತ್ಥ್ ನಾರಾಯಣ, ದೇಶದ ಅತ್ಯಂತ ದೊಡ್ಡ ಪಕ್ಷವಾಗಿರುವ ಬಿಜೆಪಿ ವಂಶಪಾರಂಪರ್ಯ ರಾಜಕಾರಣದ ವಿರೋಧಿಯಾಗಿದ್ದು, ಜನರೇ ಇದರ ಮಾಲೀಕರಾಗಿದ್ದಾರೆ. ಪ್ರಜಾಸತ್ತೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ನಮ್ಮ ಪಕ್ಷವು ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಮುನ್ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು. ಇದರ ಅಂಗವಾಗಿ ಬಿಜೆಪಿ ಸೈದ್ಧಾಂತಿಕ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡಿದೆಯೇ ವಿನಾ ವೈಯಕ್ತಿಕ ತೇಜೋವಧೆಯಲ್ಲಲ್ಲ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೂಡ ಒಂದು ಸಂಸ್ಕೃತಿ ಇದೆ ಎನ್ನುವುದನ್ನು ಯಾರೂ ಮರೆಯಬಾರದು. ಪಕ್ಷದ ತತ್ತ್ವ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಬರುವವರು ಇದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ರಾಷ್ಟ್ರೀಯ ಮಟ್ಟದಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರಂಥವರು ಪಕ್ಷವನ್ನು ವಿಸ್ತೃತವಾಗಿ ಬೆಳೆಸುತ್ತಿದ್ದಾರೆ. ಇವರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವಿದ್ದು, ಸದೃಢ ಸಮಾಜವನ್ನು ನಿರ್ಮಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರು ನಮ್ಮ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ಬಿಜೆಪಿಗೆ ಬರುತ್ತಿರುವುದೇ ಇದರ ಸಂಕೇತವಾಗಿದೆ ಎಂದು ತಿಳಿಸಿದರು.

ಪಕ್ಷವು ಮೊದಲಿನಿಂದಲೂ ಸಾಮಾಜಿಕ ಸಮತೆಯನ್ನು ಪ್ರತಿಪಾದಿಸಿಕೊಂಡು ಬಂದಿದೆ. ಇಲ್ಲಿ ಯಾವುದೇ ಜಾತೀಯ ತಾರತಮ್ಯವಿಲ್ಲ. ಪಕ್ಷವನ್ನು ರಾಜ್ಯ ಮತ್ತು ದೇಶದ ಮೂಲೆಮೂಲೆಗಳಿಗೂ ಕೊಂಡೊಯ್ಯಬೇಕು ಎನ್ನುವುದೇ ಪಕ್ಷದೊಳಗಿನ ತುಡಿತವಾಗಿದೆ. ಇಲ್ಲಿ ಎಲ್ಲರಿಗೂ ತಕ್ಕ ಮನ್ನಣೆ ಕೊಡುವ ವ್ಯವಸ್ಥೆ ಇದೆ ಎಂದರು.

ರಾಮನಗರದಲ್ಲಿ ಬಿಜೆಪಿ ಬಿಗ್ ಆಪರೇಷನ್
ಚನ್ನಪಟ್ಟಣದ ಜೆಡಿಎಸ್, ಕಾಂಗ್ರೆಸ್‌ನ ಹಲವು ಪ್ರಮುಖ ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಸ್ವತಃ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ತಿಳಿಸಿದ್ದಾರೆ.

ಇದೇ ಫೆ. 21ರಂದು ಸಂಜೆ 6ಕ್ಕೆ ಬೆಂಗಳೂರಿನಲ್ಲಿರುವ ಮಲ್ಲೇಶ್ವರ ಕಚೇರಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅಧ್ಯಕ್ಷತೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು, ಜೆಡಿಎಸ್‌ನ ಇನ್ನಷ್ಟು ಸ್ಥಳೀಯ ಮುಖಂಡರೂ ಅವರೊಟ್ಟಿಗೆ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ..

ಚನ್ನಪಟ್ಟಣದ ಜೆಡಿಎಸ್ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಲಿಂಗೇಶ್‌ಕುಮಾರ್ ಬಿಜೆಪಿ ಸೇರುವುದು ಖಚಿತವಾಗಿದೆ. ಹತ್ತಾರು ವರ್ಷದಿಂದ ಅವರು ಜೆಡಿಎಸ್‌ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಬಮುಲ್‌ ನಿರ್ದೇಶಕ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರೂ ಆಗಿದ್ದರು. ಈಚೆಗೆ ತಾಲ್ಲೂಕು ಜೆಡಿಎಸ್ ಘಟಕದಲ್ಲಿ ಜಯಮುತ್ತು ಹಾಗೂ ಲಿಂಗೇಶ್‌ಕುಮಾರ್ ಬಣಗಳ ನಡುವೆ ಸಾಕಷ್ಟು ಜಟಾಪಟಿ ನಡೆಯುತ್ತಲೇ ಇತ್ತು. 

ಕಳೆದ ಬಮೂಲ್ ಆಡಳಿತ ಮಂಡಳಿ ಚುನಾವಣೆಯಲ್ಲೂ ಇದು ಬಹಿರಂಗವಾಗಿದ್ದು, ಇಬ್ಬರು ನಾಯಕರೇ ನೇರ ಸ್ಪರ್ಧೆಗೆ ನಿಂತಿದ್ದರು. ಬಳಿಕ ಲಿಂಗೇಶ್‌ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು.

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ಆದರೆ ಈಗಿನಿಂದಲೇ ಚುನಾವಣೆಗೆ ಬೇಕಾದ ತಯಾರಿಗಳು ನಡೆಯುತ್ತಿರುವುದನ್ನು ಗಮನಿಸಿದರೆ ಚುನಾವಣೆ ವೇಳೆಗೆ ಇನ್ನು ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆಯೋ? ಎಂಬ ಕುತೂಹಲ ಮೂಡಿಸಿದೆ.