ಟಗರುಗಳ ಸಮಾಗಮ: ಒಂದು ಗ್ರಾಮದ ವೇದಿಕೆಯಲ್ಲಿ ಈ ಅಪೂರ್ವ ಸಂಗಮ..!
ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳಾಗಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಎಚ್. ವಿಶ್ವನಾಥ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹಾವು ಮುಂಗುಸಿಯಂತೆ ಕಿತ್ತಾಡುವ ಸಿದ್ದು-ಈಶ್ವರಪ್ಪ ಒಂದೇ ಕಾರಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮೈಸೂರು, [ಜ.19]: ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎನ್ನುವುದನ್ನು ಈಶ್ವರಪ್ಪ, ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದೇ ಸಾಕ್ಷಿ.
ಇವತ್ತು ಆಸ್ಪತ್ರೆಗೆ ಬಂದವರೆಲ್ಲ ರಾಜಕೀಯ ವೈರಿಗಳೇ ಹೆಚ್ಚು: ರಾಜಕಾರಣದಾಚೆಗೆ ಸಿದ್ದು ಅಚ್ಚುಮೆಚ್ಚು
ಹೌದು... ಮೈಸೂರಿನ ಕೆ.ಆರ್ ನಗರ ತಾಲೂಕಿನ ದೊಡ್ಡ ಕೊಪ್ಪಲು ಗ್ರಾಮದಲ್ಲಿ. ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈ ಮೂವರು ನಾಯಕರು ಭಾಗಿಯಾಗಿದ್ದರು. ಸಿದ್ದರಾಮಯ್ಯ ಮಧ್ಯದಲ್ಲಿದ್ದರೆ ಎಡ ಹಾಗೂ ಬಲ ಭಾಗದಲ್ಲಿ ಈಶ್ವರಪ್ಪ ಮತ್ತು ಎಚ್. ವಿಶ್ವನಾಥ್ ಕೂತು ನಗು ನಗುತ್ತಾ ಸಮಯ ಕಳೆದರು.
ಅಷ್ಟೇ ಅಲ್ಲದೇ ಜೊತೆಯಾಗಿ ಒಂದೇ ಕಾರಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು. ಸಿದ್ದರಾಮಯ್ಯ ಕಾರಿನ ಮುಂದಿನ ಸೀಟಲ್ಲಿ ಕುಳಿತುಕೊಂಡಿದ್ದರೆ ಈಶ್ವರಪ್ಪ ಹಿಂದಿನ ಸೀಟಿನಲ್ಲಿ ಕುಳಿತುಕೊಂಡರು.
ಇತ್ತೀಚೆಗೆ ಸಿದ್ದರಾಮಯ್ಯ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾಗ ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗೆ ಈಶ್ವರಪ್ಪ ಕೂಡಾ ತೆರಳಿ ಆರೋಗ್ಯ ವಿಚಾರಿಸಿದ್ದರು.
ಆಸ್ಪತ್ರೆಯಲ್ಲಿ ಸಿದ್ದರಾಮಯ್ಯನವರ ಹೃದಯ ಬಗ್ಗೆ ನಗೆ ಚಟಾಕಿ ಹಾರಿಸಿದ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.