ಬೆಂಗಳೂರು, (ಮೇ 25): ಲಾಕ್‌ಡೌನ್ ಜಾರಿಯಲ್ಲಿರುವಾಗಲೇ ರೈತರ ಸಾಲ ವಸೂಲಿ ಕುರಿತು ಸರ್ಕಾರ ಹೊರಡಿಸಿರುವ ಆದೇಶ ಹಿಂದಕ್ಕೆ ಪಡೆಯುವಂತೆ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು ಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

 ಶೂನ್ಯ ಬಡ್ಡಿ ದರದ ಸಾಲ ಮರುಪಾವತಿಗೆ, ಸಾಲ ಪಡೆಯಲು ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‌ನ್ನು ಆಧಾರವಾಗಿಟ್ಟು ಕೊಳ್ಳಬಾರದು. ಹಿಂದಿನ ನಿಯಮಾವಯಂತೆ ಸಾಲ ಮರುಪಾವತಿ ಹಾಗೂ ಸಾಲ ನೀಡಿಕೆಗೆ ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರೈತ ಸರ್ಕಾರಿ ನೌಕರನಾಗಿದ್ದರೂ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಕೃಷಿ ಸಾಲ

ಕೃಷಿ ಭೂಮಿ ಇದ್ದ ಕ್ಷೇತ್ರದಲ್ಲಿ ವಾಸವಾಗಿರದೆ ಇರುವವರಿಂದ ಶೇ. 7ರಷ್ಟು ಬಡ್ಡಿ ವಸೂಲಿ ಮಾಡುವಂತೆ ಹಾಗೂ ಆ ಕ್ಷೇತ್ರದಲ್ಲಿ ವಾಸವಾಗಿರದೇ ಇರುವವರಿಗೆ ಹೊಸ ಸಾಲ ನೀಡದಂತೆ ಸರ್ಕಾರಿ ಆದೇಶ ನೀಡಲಾಗಿದೆ. ತಕ್ಷಣ ಸರ್ಕಾರದ ಆದೇಶಕ್ಕೆ ತಿದ್ದುಪಡಿ ತರಬೇಕೆಂದು ದೇಶಪಾಂಡೆ ಅವರು ಒತ್ತಾಯಿಸಿದ್ದಾರೆ.

ಕೃಷಿ ಸಾಲವನ್ನು ಕೃಷಿ ಚಟುವಟಿಕೆಗೆ ನೀಡಲಾಗುತ್ತದೆಯೇ ಹೊರತು ಅವರ ಮನೆಯನ್ನು ಆಧಾರವಾಗಿಟ್ಟುಕೊಂಡು ಸಾಲ ನೀಡುವುದಿಲ್ಲ. ಆದರೆ ಹೊಸ ಆದೇಶದಲ್ಲಿ ಸಾಲ ನೀಡುವಾಗ ಸಹಕಾರ ಸಂಘಗಳು ಆಧಾರ್ ಕಾರ್ಡ್ ವಿಳಾಸವನ್ನು ಪರಿಗಣಿಸಿ ಸಾಲ ನೀಡಬೇಕೆಂದು ಆದೇಶಿಸಲಾಗಿದೆ, ಇದು ರೈತರು ಹಾಗೂ ಸಹಕಾರ ಸಂಘಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತದೆ.

ಕೂಡಲೇ ಸರ್ಕಾರ ಇದಕ್ಕೆ ತಿದ್ದುಪಡಿ ತಂದು ಕೃಷಿ ಚಟುವಟಿಕೆ ನಡೆಸುವ ಪ್ರತಿಯೊಬ್ಬರಿಗೂ ಸಾಲ ನೀಡಲು ಸೂಚಿಸಬೇಕಾಗಿ ಮನವಿ ಮಾಡುತ್ತೇನೆ. ಅಲ್ಲದೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವಾಗ ಪಡಿತರ ಚೀಟಿಯಲ್ಲಿನ ವಿಳಾಸ ಹಾಗೂ ಆಧಾರ್ ಕಾರ್ಡ್ ವಿಳಾಸವನ್ನೇ ಸಾಲ ನೀಡಲು, ಸಾಲ ಮರುಪಾತಿಗೆ ಪ್ರಮುಖ ಆಧಾರವನ್ನಾಗಿ ಪರಿಗಣಿಸಬಾರದು. ಇದನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.