ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಭ್ರಷ್ಟಾಚಾರದ ಜನವಿರೋಧಿ ಸರ್ಕಾರದ ಆಡಳಿತ ನಡೆಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.
ಮಡಿಕೇರಿ (ಮಾ.03): ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಭ್ರಷ್ಟಾಚಾರದ ಜನವಿರೋಧಿ ಸರ್ಕಾರದ ಆಡಳಿತ ನಡೆಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ. ಸೋಲನ್ನೇ ಕಣ್ಣ ಮುಂದೆ ಕಾಣುತ್ತಿರುವ ಬಿಜೆಪಿ ಈಗ ದ್ವೇಷ ರಾಜಕೀಯಕ್ಕೆ ಮುಂದಾಗಿ ಕಾಂಗ್ರೆಸ್ ನಾಯಕರನ್ನು ಮುಗಿಸಿ ಎಂಬಂಥ ಕೀಳು ಹೇಳಿಕೆ ನೀಡುತ್ತಿದೆ ಎಂದೂ ಅವರು ಆರೋಪಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿ ಪಕ್ಷದ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸುರ್ಜೇವಾಲ, ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯವನ್ನೇ ಮಾರಾಟಕ್ಕಿಟ್ಟಿದೆ. ಪ್ರತಿಯೊಂದು ಇಲಾಖೆಯಲ್ಲಿಯೂ ಲಂಚಾವತಾರ ತಾಂಡವವಾಡುತ್ತಿದೆ. ವರ್ಗಾವಣೆಯಲ್ಲಿಯೂ ಲಂಚ ಕಾಡುತ್ತಿದ್ದು, ಕರ್ನಾಟಕದಲ್ಲಿ ಬದಲಾವಣೆಗಾಗಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ಬರಲು ಜನರು ಸಹಕಾರ ನೀಡಿ ಉತ್ತಮ ಆಡಳಿತಕ್ಕೆ ಅವಕಾಶ ಕಲ್ಪಿಸಬೇಕೆಂದೂ ಸುರ್ಜೇವಾಲ ಕರೆ ನೀಡಿದರು.
ಸಂತ ಶಿಶುನಾಳ ಶರೀಫರ ತತ್ವಪದ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ: ಸಿಎಂ ಬೊಮ್ಮಾಯಿ
ಪ್ರತಿ ಮನೆಗೆ 200 ವಾಟ್ಸ್ ಉಚಿತ ವಿದ್ಯುತ್, ಪ್ರತಿ ಗೃಹಿಣಿಗೂ ತಿಂಗಳಿಗೆ 2 ಸಾವಿರ ರು. ಆರ್ಥಿಕ ನೆರವು , ಪ್ರತಿ ಪಡಿತರದಾರರಿಗೆ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನ ಮಾಹಿತಿ ನೀಡಿದ ಸುರ್ಜೇವಾಲ, ಕಾಂಗ್ರೆಸ್ ಭರವಸೆಯನ್ನು ಪ್ರತಿ ಮನೆಮನೆಗೂ ಕಾರ್ಯಕರ್ತರ ತಂಡ ತಲುಪಿಸಬೇಕು ಎಂದರು.
ಲಂಚಮುಕ್ತ ಕರ್ನಾಟಕ ಗುರಿ: ಕಾಂಗ್ರೆಸ್ ನೀಡಿರುವ ಭರವಸೆಯನ್ನು ಹೇಗೆ ಈಡೇರಿಸಲಿದೆ. ಆರ್ಥಿಕ ಕ್ರೋಡೀಕರಣ ಹೇಗೆ ಮಾಡುತ್ತಾರೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ ಎಂದ ಸುರ್ಜೇವಾಲ, ಈಗ ಬಿಜೆಪಿ ಸರ್ಕಾರ ಶೇ.40ರ ಕಮಿಷನ್ ದಂಧೆಯಲ್ಲಿ ನಿರತವಾಗಿದೆ. ರಾಜ್ಯ ಸರ್ಕಾದರ ಬಜೆಟ್ 3.10 ಲಕ್ಷ ಕೋಟಿಗಳಾಗಿದೆ. ಶೇ.40 ಕಮಿಷನ್ ಎಂದಾದರೆ 1.12 ಲಕ್ಷ ಕೋಟಿ ರು. ಲಂಚಕ್ಕೆ ವಿನಿಯೋಗವಾಗುತ್ತಿದೆ. ಈ ಕಮಿಷನ್‌ನಿಂದ ಉಳಿಯುವ ಹಣವನ್ನೇ ರಾಜ್ಯದ ಜನತೆಗೆ ಸೌಲಭ್ಯಗಳ ಮೂಲಕ ನೀಡಲು ಬಳಸುವುದಾಗಿ ಹೇಳಿದ ಸುರ್ಜೇವಾಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೇ ಲಂಚಮುಕ್ತ ಕರ್ನಾಟಕದ ಗುರಿ ಹೊಂದಿದ್ದು, ಕಾಂಗ್ರೆಸ್ ನ ಯಾವುದೇ ನಾಯಕರು ಲಂಚ ಪಡೆದದ್ದು ಗೊತ್ತಾದಲ್ಲಿ ಅಂಥವರನ್ನು ಪಕ್ಷದಿಂದಲೇ ಹೊರದಬ್ಬುವುದಾಗಿ ಘೋಷಿಸಿದರು.
ಶೇ.40 ಕಮಿಷನ್ ದಂಧೆಯಿಂದ ಜನರ ನಂಬಿಕೆ ಕಳೆದುಕೊಂಡಿರುವ ರಾಜ್ಯ ಬಿಜೆಪಿ ಹೀಗಾಗಿಯೇ ಮೋದಿ, ಅಮಿತ್ ಶಾ ಅವರನ್ನು ಪದೇ ಪದೇ ರಾಜ್ಯಕ್ಕೆ ಕರೆಯಿಸಿಕೊಂಡು ಸುಳ್ಳು ಪ್ರಚಾರದ ಮೂಲಕ ಜನರ ವಿಶ್ವಾಸ ಗಿಟ್ಟಿಸಲು ಹೆಣಗಾಡುತ್ತಿದೆ. ಆದರೆ ರಾಜ್ಯದ ಜನತೆಗೆ ಬಿಜೆಪಿಯ ಬಗ್ಗೆ ನಂಬಿಕೆ, ವಿಶ್ವಾಸವೇ ಹೊರಟು ಹೋಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ, ಕೊಡಗು ಉಸ್ತುವಾರಿ ರೋಜಿ ಜಾನ, ಮಾಜಿ ಸಂಸದ ಧ್ರುವನಾರಾಯಣ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕೊಡಗು ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಎಚ್.ಎಸ್. ಚಂದ್ರಮೌಳಿ, ಎ.ಎಸ್. ಪೊನ್ನಣ್ಣ, ವೀಣಾ ಅಚ್ಚಯ್ಯ, ಬಿ.ಎ. ಜೀವಿಜಯ, ಡಾ. ಮಂಥರ್ ಗೌಡ, ಕೆ.ಕೆ. ಮಂಜುನಾಥ್ ಕುಮಾರ್, ಕೆ.ಪಿ. ಚಂದ್ರಕಲಾ, ಹರಪನಹಳ್ಳಿ ರವೀಂದ್ರ, ಕೆ.ಎಂ. ಲೋಕೇಶ್ ಕುಮಾರ್, ಸುರಯ್ಯ ಅಬ್ರಾರ್, ರಾಜೇಶ್ ಎಲ್ಲಪ್ಪ, ಟಿ.ಪಿ. ರಮೇಶ್, ನಟೇಶ್ ಗೌಡ, ಹಂಸ, ನವೀನ್ ಹಾಜರಿದ್ದರು.
10 ದಿನಗಳಲ್ಲಿ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ: ಇನ್ನು 10 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲ ಘೋಷಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೆವಾಲ, ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಮತದಾರರ ಒಲವು ವ್ಯಕ್ತವಾಗಿದ್ದು ಬಿಜೆಪಿಯ ಲಂಚಾವತಾರದ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಜನರಿಗೆ ಪ್ರಯೋಜನವಾಗುವಂಥ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ, ವನ್ಯಜೀವಿ ಸಂಘರ್ಷದ ಸಮಸ್ಯೆಗಳನ್ನು ಕಾಂಗ್ರೆಸ್ ಪರಿಹರಸಲಿದೆ ಎಂದು ಅವರು ಭರವಸೆ ನೀಡಿದರು.
4 ಸಚಿವರು ಸೇರಿ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೇಘಾಲಯ, ತ್ರಿಪುರ ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಸುರ್ಜೇವಾಲ, ಹಣ, ತೋಳ್ಬಲದಿಂದ ಬಲದಿಂದ ಬಿಜೆಪಿ ಅಲ್ಲಿ ಗೆಲವು ಸಾಧಿಸಿದೆ. ಆದರೆ ಅನೇಕ ರಾಜ್ಯಗಳಲ್ಲಿನ ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಾಲಿಗೆ ಆಶಾದಾಯಕವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸುರ್ಜೇವಾಲ, ಬೊಮ್ಮಾಯಿ ಅವರ 40 ಪರ್ಸೆಂಟ್ ಸರ್ಕಾರದಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ಹಾಗಾಗಿ ಬಿಜೆಪಿ ರಾಜ್ಯದಲ್ಲಿ ಕ್ಷಮಾಪಣಾ ಯಾತ್ರೆ ಮಾಡಬೇಕು ಎಂದು ಆಗ್ರಹಿಸಿದರು.
