* ತುಮಕೂರು ಜಿಲ್ಲೆ ಕುಣಿಗಲ್ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ * ಮುದ್ದಹನುಮೇಗೌಡ ವರ್ಸಸ್ ರಾಮಸ್ವಾಮಿಗೌಡ* ಮಾಜಿ ಸಂಸದ ಮುದ್ದಹನುಮೇಗೌಡ ವಿರುದ್ಧ ಕಿಡಿಕಾರಿದ ರಾಮಸ್ವಾಮಿಗೌಡ

ವರದಿ : ಮಹಾಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್

ತುಮಕೂರು, (ಏ.28):
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಆಗಲೇ ಕಾಂಗ್ರೆಸ್‌ ಕ್ಷೇತ್ರವಾರು ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದೆ. ಇದರ ಮಧ್ಯೆ ತುಮಕೂರು ಜಿಲ್ಲೆ ಕುಣಿಗಲ್ ಕಾಂಗ್ರೆಸ್ ಘಟಕದಲ್ಲಿ ಅಸಮಧಾನ ಭುಗಿಲೇದ್ದಿದೆ. ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ವಿರುದ್ಧ ಮಾಜಿ ಶಾಸಕರ ರಾಮಸ್ವಾಮಿಗೌಡ ವಾಗ್ದಾಳಿ ನಡೆಸಿದ್ದಾರೆ. 

ಹೌದು... ಮುದ್ದಹನುಮೇಗೌಡ ಬರೀ ಐರನ್ ಲೆಗ್ ಅಲ್ಲಾ..ಅದಕ್ಕಿಂತ ಕೆಟ್ಟದ್ದು, ಅವರನ್ನು‌ ನಂಬಿದೋರೆಲ್ಲಾ ಹಾಳಾಗಿ ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮುದ್ದಹನುಮೇಗೌಡ ಬಿಜೆಪಿಗೆ ಸೇರ್ತಾರೆ ಎಂಬ ವದಂತಿ ಬೆನ್ನಲ್ಲೆ, ರಾಮಸ್ವಾಮಿ ಗೌಡ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Karnataka Politics ಬಿಜೆಪಿಗೆ ಹೋಗ್ತಾರಾ ಕಾಂಗ್ರೆಸ್ ಪ್ರಭಾವಿ ನಾಯಕ? ಆಹ್ವಾನ ಕೊಟ್ಟ ಮಾಜಿ ಶಾಸಕ

ಬೆಳಗ್ಗೆ ಕಾಂಗ್ರೆಸ್ ಅಂತಾರೆ, ಮಧ್ಯಾಹ್ನ ಬಿಜೆಪಿ, ಸಂಜೆ AAP
ಮುದ್ದಹನುಮೇಗೌಡರು ಸುಲಭದಲ್ಲಿ ಎಲ್ಲವನ್ನು ಸ್ವಾಹ ಮಾಡುವ‌ ಗಿರಾಕಿ,‌ ಅವರು ಕಾಂಗ್ರೆಸ್ ಇಬ್ಬಾಗ ಮಾಡಿದ ಪುಣ್ಯಾತ್ಮ, ಬಿಜೆಪಿಗೆ ಹೋದರೆ ಗೆದ್ದು ಬಿಡ್ತಿನಿ ಅನ್ನೋ ಮನೋಭಾವದಲ್ಲಿರುವ ಸ್ವಾರ್ಥಿ . ಮುದ್ದಹನುಮೇಗೌಡ ಅವರಿಗೆ ರಾಜಕೀಯದಲ್ಲಿ ಯಾವ ನೈತಿಕತೆನೂ ಇಲ್ಲ, ಕುಣಿಗಲ್ ತಾಲೂಕಿನಲ್ಲಿ ಅವರ ಸಾಧನೆ ಏನು. ಒಂದೇ ಒಂದು ಅಡಿ ಕಾಲುವೆ ಮಾಡಿಸಿದ್ದರಾ ? ನಾನು ಕುಣಿಗಲ್ ತಾಲೂಕಿನವನು ಅಂತಾರೆ, ಕುಣಿಗಲ್ ನಿಂದ ಟಿಕೆಟ್ ಕೇಳ್ತಾರೆ. ಎಲ್ಲರೂ ಪ್ರೈಮರಿ ಸ್ಕೂಲ್, ಮಿಡಲ್ ಸ್ಕೂಲ್ , ಹೈ ಸ್ಕೂಲ್ ಇಲ್ಲೇ ಓದಿರೋದು, ಇಲ್ಲಿ ಓದಿದ್ದೇನೆ ಅಂದ ಮಾತ್ರಕ್ಕೆ ಟಿಕೆಟ್ ಕೊಡಬೇಕು ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಮುದ್ದಹನುಮೇಗೌಡರು ಶಾಸಕರಾಗಿದ್ದ ಸಂದರ್ಭದಲ್ಲಿ, ಕುಣಿಗಲ್ ತಾಲೂಕಿನ 30 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ, ಮುದ್ದಹನುಮೇಗೌಡರು ಬರೀ ಐರನ್ ಲೆಗ್ ಅಲ್ಲಾ, ಅದಕಿಂತ ಕೆಟ್ಟದ್ದು. ಅವರನ್ನು ನಂಬಿದವರನೆಲ್ಲಾ ಹಾಳು ಮಾಡಿ ಬಿಡುತ್ತಾರೆ. ಅವರು ಕಾಲಿಟ್ಟ ಪಕ್ಷ ಎಲ್ಲಾ ಮುಳುಗಿ ಹೋಗುತ್ತದೆ. ನನ್ನ ಜೊತೆಯಲ್ಲಿ ಇದ್ದುಕೊಂಡೆ ನನಗೆ ಟಿಕೆಟ್ ತಪ್ಪಿಸಿದ ಕುತಂತ್ರಿ ಅವರು, ಇನ್ನೊಬ್ಬರು ಬೆಳೆಯ ಬಾರದು ಅನ್ನುವ ಕೆಟ್ಟ ಮನೋಭಾವ ಅವರದ್ದು. ಅವರು ಗೆದ್ದು ಕೆಲಸ ಮಾಡಿದ್ದ ಲೋಕಸಭಾ ಕ್ಷೇತ್ರದ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸಿ ಚಾಲೆಂಜ್ ತೋರಿಸಲಿ ಎಂದು ಸವಾಲ್ ಹಾಕಿದರು.

ಕುಣಿಗಲ್ ಕ್ಷೇತ್ರದ ಹಾಲಿ ಶಾಸಕ ಡಾ ರಂಗನಾಥ್ ಇದ್ದು, ಅವರೂ ಕೂಡ ಮುಂದಿನ ಚುನಾವಣೆಗೆ ಟಿಕೆಟ್ ಹಾಲಿ ಶಾಸಕರಿಗೆ ಕೊಡಬೇಕೆಂದಿದ್ದಾರೆ. ಅಲ್ಲದೇ ಪ್ರಮುಖವಾಗಿ ರಂಗನಾಥ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಂಬಂಧಿ. ಇದೀಗ

ನನಗೆ ಟಿಕೆಟ್ ಬೇಕು ಎಂದು ರಾಮಸ್ವಾಮಿ ಗೌಡ ಎದ್ದು ಕುಳಿತುಕೊಂಡಿದ್ದಾರೆ. ಮತ್ತೊಂದೆಡೆ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್‌ ಮೈತ್ರಿ ವೇಳೆ ಹೈಕಮಾಂಡ್‌ ಸೂಚನೆಯಂತೆ ದೇವೇಗೌಡ್ರಿಗೆ ತುಮಕೂರು ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಇದೀಗ ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಈಗಿನಿಂದಲೇ ಲಾಭಿ ಶುರು ಮಾಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಕುಣಿಗಲ್ ನಿಂದ ಮುದ್ದಹನುಮೇಗೌಡ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದು ರಾಮಸ್ವಾಮಿಗೌಡ ಗುಡುಗಿದ್ದಾರೆ.

ಕುಣಿಗಲ್ ನಿಂದಲ್ಲೇ ಸ್ಪರ್ಧೆ ಮಾಡುತ್ತೇನೆಂದು ಮಾಜಿ ಸಂಸದ ಮುದ್ದಹನುಮೇಗೌಡ ಕ್ಷೇತ್ರದಾದ್ಯಂತ ಓಡಾಟ ಪ್ರಾರಂಭಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಟಿಕೆಟ್ ತ್ಯಾಗಮಾಡಿದ್ದೇನೆ, ರಾಹುಲ್ ಗಾಂಧಿಯವರು ನೀಡಿದ ಭರವಸೆಯಂತೆ ಇದೀಗ ಕುಣಿಗಲ್ ಕ್ಷೇತ್ರ ಟಿಕೆಟ್ ನನಗೆ ಕೊಡಬೇಕೆಂದು ಮುದ್ದಹನುಮೇಗೌಡ ಒತ್ತಾಯಿಸಿದ್ದಾರೆ.

ಬಿಜೆಪಿಯಿಂದ ಆಫರ್
ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭೆ ಕ್ಷೇತ್ರದ ಟಿಕೆಟ್‌ ಪಡೆಯಲು ಮುದ್ದಹನುಮೇಗೌಡ ಫೈಟ್ ಮಾಡುತ್ತಿದ್ದಾರೆ.ಆದ್ರೆ, ಡಿಕೆ ಶಿವಕುಮಾರ್ ಸಂಬಂಧಿ ಹಾಲಿ ಶಾಸಕರಿದ್ದರಿಂದ ಟಿಕೆಟ್ ಸಿಗುವುದು ಅನುಮಾನವಾಗಿದೆ.ಈ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಗಾಳ ಹಾಕುತ್ತಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ಮುದ್ದಹನುಮೇಗೌಡ್ರಿಗೆ ಬಿಜೆಪಿ ಬರುವಂತೆ ಆಹ್ವಾನ ಕೊಟ್ಟಿದ್ದಾರೆ.