ಬಿಜೆಪಿ ಶಾಸಕ ಮಾಡಾಳು ಜಾಮೀನು ಹಿಂದೆ ಸರ್ಕಾರ ಕೈವಾಡ: ರಾಮಲಿಂಗಾ ರೆಡ್ಡಿ
ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಬಳಿ 8 ಕೋಟಿಯಷ್ಟು ಹಣ ದೊರೆತಿದ್ದರೂ ಒಂದೇ ದಿನದಲ್ಲಿ ಅವರಿಗೆ ಜಾಮೀನು ದೊರೆತಿದೆ. ಸರ್ಕಾರ ಹಾಗೂ ಸರ್ಕಾರದ ಪರ ವಕೀಲರ ಬೆಂಬಲ ಇಲ್ಲದಿದ್ದರೆ ಒಂದೇ ದಿನದಲ್ಲಿ ಜಾಮೀನು ಸಿಗಲು ಸಾಧ್ಯವೇ ಇಲ್ಲ.
ಬೆಂಗಳೂರು (ಮಾ.09): ‘ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಬಳಿ 8 ಕೋಟಿಯಷ್ಟು ಹಣ ದೊರೆತಿದ್ದರೂ ಒಂದೇ ದಿನದಲ್ಲಿ ಅವರಿಗೆ ಜಾಮೀನು ದೊರೆತಿದೆ. ಸರ್ಕಾರ ಹಾಗೂ ಸರ್ಕಾರದ ಪರ ವಕೀಲರ ಬೆಂಬಲ ಇಲ್ಲದಿದ್ದರೆ ಒಂದೇ ದಿನದಲ್ಲಿ ಜಾಮೀನು ಸಿಗಲು ಸಾಧ್ಯವೇ ಇಲ್ಲ. ಭ್ರಷ್ಟಾಚಾರ ಆರೋಪಿ ಶಾಸಕರಿಗೆ ಜಾಮೀನು ಕೊಡಿಸಲು ಅವರೊಂದಿಗೆ ಸರ್ಕಾರ ಶಾಮೀಲಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹಾಗೂ ಸರ್ಕಾರಿ ವಕೀಲರ ಬೆಂಬಲ ಇಲ್ಲವಾದರೆ ಕೇವಲ ಒಂದೇ ದಿನದಲ್ಲಿ ಜಾಮೀನು ಸಿಗಲು ಸಾಧ್ಯವಿಲ್ಲ.ಅದೇ ಬೇರೆ ಪಕ್ಷದವರಿಗೆ ಇಂತಹ ಪ್ರಕರಣದಲ್ಲಿ 2-3 ತಿಂಗಳಾದರೂ ಜಾಮೀನು ಸಿಗುವುದಿಲ್ಲ. ಸರ್ಕಾರ ಪರ ವಕೀಲರು ಜಾಮೀನು ನೀಡಲೇಬಾರದು ಎಂದು ವಾದ ಕೂಡ ಮಾಡುತ್ತಾರೆ. ಆದರೆ ಇಲ್ಲಿ ಒಂದೇ ದಿನಕ್ಕೆ ಜಾಮೀನು ಕೊಡಿಸಿದ್ದಾರೆ. ತನ್ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಮುಖವಾಡ ಕಳಚಿದೆ ಎಂದು ದೂರಿದರು.
ಶಾಸಕ ಮಾಡಾಳ್ ಮೆರವಣಿಗೆ ಮುಜುಗರ ತಂದಿದೆ: ನಳಿನ್ ಕುಮಾರ್ ಕಟೀಲ್
ವಕೀಲರ ಸಂಘದಿಂದಲೇ ಆಕ್ಷೇಪ: ವಕೀಲರ ಸಂಘದವರು ಸುಪ್ರೀಂ ಕೋರ್ಟ್ ಮುಖ್ಯನ್ಯಾ.ಡಿ.ವೈ. ಚಂದ್ರಚೂಡ ಅವರಿಗೆ ಪತ್ರ ಬರೆದು ಈ ರೀತಿ ಒಂದೇ ದಿನದಲ್ಲಿ ಜಾಮೀನು ನೀಡಿರುವುದು ಆತಂಕಕಾರಿ ವಿಚಾರ ಎಂದು ತಿಳಿಸಿದ್ದಾರೆ. ಇದರಿಂದ ಜನಸಾಮಾನ್ಯರು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಆರೋಪಿ ಶಾಸಕರನ್ನು ವಿಐಪಿಯಂತೆ ನೋಡುವ ಬದಲು ಸಾಮಾನ್ಯರಂತೆ ಕಾಣಬೇಕು ಎಂದು ಹೇಳಿದೆ. ಇದರಿಂದ ಸರ್ಕಾರದ ಮುಖವಾಡ ಕಳಚಿದಂತಾಗಿದೆ ಎಂದು ಹೇಳಿದರು.
ಉದ್ದೇಶಪೂರ್ವಕವಾಗಿ ಬಂಧಿಸಿಲ್ಲ: ‘ನಾನು ಮನೆಯಲ್ಲೇ ಇದ್ದೆ ಏಲ್ಲೂ ಹೋಗಿಲ್ಲ’ ಎಂದು ಶಾಸಕ ವಿರುಪಾಕ್ಷಪ್ಪ ಹೇಳಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟುನಿಷ್ಕಿ್ರಯವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಶಾಸಕರನ್ನು ರಕ್ಷಿಸಲು ಉದ್ದೇಶಪೂರ್ವಕವಾಗಿಯೇ ಅವರನ್ನು ಬಂಧಿಸಿರಲಿಲ್ಲ ಎಂಬುದು ಸಾಬೀತಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಸರ್ಕಾರ ವಿರುದ್ಧ ಆಪ್ ಪ್ರತಿಭಟನೆ: ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ ಕೋಟ್ಯಂತರ ರುಪಾಯಿ ಸಿಕ್ಕ ಹಿನ್ನೆಲೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಹಾಗೂ ಎಲ್ಲ ಶಾಸಕರ ನಿವಾಸ-ಕಚೇರಿಗಳಲ್ಲಿ ತಪಾಸಣೆ ಮಾಡಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತು.
ನಗರದ ಫ್ರೀಡಂಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಚುನಾವಣೆಗೆ ಕೆಲವೇ ವಾರಗಳು ಬಾಕಿಯಿರುವ ಈ ಸಂದರ್ಭದಲ್ಲಿ ಶಾಸಕರೊಬ್ಬರ ಮನೆಯಲ್ಲಿ ಈ ಪ್ರಮಾಣದ ನಗದು ಪತ್ತೆಯಾಗಿರುವುದು ಗಂಭೀರ ವಿಚಾರ. ಹಣದ ಮೂಲವೇನು ಹಾಗೂ ಏಕೆ ಸಂಗ್ರಹಿಸಿಡಲಾಗಿತ್ತು ಎಂಬ ಬಗ್ಗೆ ತನಿಖೆಯಾಗಬೇಕು. ಪ್ರಕರಣದ ಕುರಿತು ಸಿಬಿಐ, ಇಡಿ, ಐಟಿ ಸಂಸ್ಥೆಗಳಿಂದ ಸೂಕ್ತ ತನಿಖೆಯಾಗಬೇಕು. ಎಲ್ಲ ಶಾಸಕರ ಮನೆ, ಕಚೇರಿಗಳಲ್ಲಿ ಶೀಘ್ರವೇ ತಪಾಸಣೆ ನಡೆಸಿ, ಅಕ್ರಮ ನಗದನ್ನು ವಶಪಡಿಸಿಕೊಂಡು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮಾಡಾಳು ಪುತ್ರನ ಅಮಾನತಿಗೆ ಸೂಚನೆ ನೀಡ್ತೇವೆ: ಸಚಿವ ಮಾಧುಸ್ವಾಮಿ
ವಿರೂಪಾಕ್ಷಪ್ಪನವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುವ ತನಕ ಅವರು ಐದು ದಿನಗಳ ಕಾಲ ಪೊಲೀಸರು ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ಸಿಗದಂತೆ ನಾಪತ್ತೆಯಾಗಿದ್ದನ್ನು ಗಮನಿಸಿದರೆ ಇಡೀ ಸರ್ಕಾರ ಅವರ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ಆಡಳಿತದ 40% ಕಮಿಷನ್ ದಂಧೆಗೆ ಸಂಬಂಧಿಸಿದ ಇಂತಹ ಅನೇಕ ಪ್ರಕರಣಗಳು ಬಯಲಿಗೆ ಬಂದಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿರುವುದು ದುರಂತ. ಬಿಜೆಪಿ ಶಾಸಕರುಗಳಿಂದ ರಾಜ್ಯದ ಬೊಕ್ಕಸ ಲೂಟಿಯಾಗುತ್ತಿರುವುದು ಹಾಗೂ 40% ಕಮಿಷನ್ ದಂಧೆಯ ನೈತಿಕೆ ಹೊಣೆಹೊತ್ತು ಸಿಎಂ ಸ್ಥಾನಕ್ಕೆ ಬೊಮ್ಮಾಯಿಯವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.