ಬೆಲೆ ಏರಿಕೆ, ನಿರುದ್ಯೋಗ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ: ರಕ್ಷಾ ರಾಮಯ್ಯ ಆರೋಪ
ಸ್ವಾತಂತ್ರ್ಯ ಪೂರ್ವದಿಂದಲೂ ದೇಶ ಕಟ್ಟಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ (ಫೆ.04): ಸ್ವಾತಂತ್ರ್ಯ ಪೂರ್ವದಿಂದಲೂ ದೇಶ ಕಟ್ಟಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಎಂ.ಎಸ್.ರಾಮಯ್ಯ ಯೂತ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯ ಆರೋಪಿಸಿದರು. ಎಂ.ಎಸ್. ರಾಮಯ್ಯ ಯೂತ್ ಫೌಂಡೇಷನ್ ನಿಂದ 75 ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಬೃಹತ್ ತಿರಂಗಾ ರ್‍ಯಾಲಿಗೆ ಚಾಲನೆ ನೀಡಿ ಅರು ಮಾತನಾಡಿದರು.
ನಿರುದ್ಯೋಗ ಪ್ರಮಾಣ ಏರಿಕೆ: ನಗರದ ಎಂಜಿ ರಸ್ತೆಯ ಡಿವೈನ್ ಸಿಟಿ ಬಳಿ ಶನಿವಾರ ಎಂ.ಎಸ್. ರಾಮಯ್ಯ ಯೂತ್ ಫೌಂಡೇಷನ್ ವತಿಯಿಂದ ತಿರಂಗಾ ಜಾಥದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ಚಕಾರ ಎತ್ತಿಲ್ಲ. ಕಳೆದ 2019 ರ ಅಂಕಿ ಅಂಶಗಳಂತೆ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 10.05ಕ್ಕೆ ಏರಿಕೆಯಾಗಿದ್ದು, 45 ವರ್ಷಗಳಲ್ಲೇ ಇದು ಅತ್ಯಧಿಕವಾಗಿದೆ ಎಂದರು. ಗ್ರಾಮೀಣ ಉದ್ಯೋಗ ದರ ಶೇ 6.2 ರಿಂದ ಶೇ10.82 ಕ್ಕೆ ಹೆಚ್ಚಳವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಪ್ರಸ್ತುತ ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯದಲ್ಲಿ ಶೇ 37.4 ರಷ್ಟು ನಿರುದ್ಯೋಗ ಪ್ರಮಾಣವಿದ್ದು, ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ಆತಂಕ ಮೂಡಿಸುತ್ತಿದೆ ಎಂದರು.
ಅಡ್ವಾಣಿಯವರಿಗೆ ಭಾರತ ರತ್ನ ನೀಡಿದ್ದಕ್ಕೆ ತಕರಾರಿಲ್ಲ, ಆದರೆ: ಡಿಕೆಶಿ ಹೇಳಿದ್ದೇನು?
ತಿರಂಗಾ ಜಾಥಾ ರ್‍ಯಾಲಿ: ನಗರದ ಡಿವೈನ್ ಸಿಟಿ ಬಳಿಯಿಂದ ಎಂ.ಜಿ. ರಸ್ತೆ, ಬಿಬಿ ರಸ್ತೆ, ನಂದಿ ಕ್ರಾಸ್ ಮಾರ್ಗವಾಗಿ ನಂದಿಯ ಭೋಗ ನಂದೀಶ್ವರ ದೇವಸ್ಥಾನದವರೆಗೆ ತಿರಂಗಾ ಜಾಥ ಸಾಗಿತು. ಬೃಹತ್ ಜನ ಸಮೂಹ ರಕ್ಷಾ ರಾಮಯ್ಯ ಅವರ ಜೊತೆಯಾಯಿತು. ದೇಶದ ಸಾರ್ವಭೌಮತೆ, ಸಮಗ್ರತೆ ಎತ್ತಿಹಿಡಿಯುವ ಘೋಷಣೆಗಳೊಂದಿಗೆ ಅಪಾರ ಜನಸ್ತೋಮ ರಾಲಿಯಲ್ಲಿ ಭಾಗವಹಿಸಿತ್ತು. ತ್ರಿವರ್ಣ ಧ್ವಜ ಹಿಡಿದು ಸಾಗಿದ ಜನ, ಸಂವಿಧಾನ, ತ್ರಿವರ್ಣ ಧ್ವಜದ ಮಹಿಮೆ, ಗಣರಾಜ್ಯೋತ್ಸವದ ವೈಶಿಷ್ಟ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಇಂಟೆಕ್ ರಾಜ್ಯಾಧ್ಯಕ್ಷ ಮಾಡ್ರನ್ ಶಿವು, ಕೋಚಿಮುಲ್ ನಿರ್ಧೇಶಕ ಭರಣಿ ವೆಂಕಟೇಶ್, ಎಂ.ವೆಂಕಟೇಶ್, ರಾಜಶೇಖರ್(ಬುಜ್ಜಿ) ಮಹಿಳಾ ಕಾಂಗ್ರೇಸ್ ರಾಜ್ಯ ಉಪಾಧ್ಯಕ್ಷೆ ಮಮತಾಮೂರ್ತಿ,ಮಂಗಳ ಪ್ರಕಾಶ್, ಯುವ ಕಾಂಗ್ರೇಸ್ ನ ಷಾಹೀದ್, ಎಸ್.ಎಂ.ಜಗದೀಶ್,ಶಂಕರ, ಮತ್ತಿತರರು ಇದ್ದರು.