ಹಲವು ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲೇ ಹಗರಣಗಳು ನಡೆಯುತ್ತಿವೆ, ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು, ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದೆ. 

ಕಲಬುರಗಿ (ಆ.13): ಹಲವು ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲೇ ಹಗರಣಗಳು ನಡೆಯುತ್ತಿವೆ, ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು, ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದೆ. ಇದೊಂದು ಲಂಚದ ಮಂಚದ ಸರ್ಕಾರ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದರು. ಪ್ರತಿಯೊಂದು ಪರೀಕ್ಷೆಗಳಲ್ಲಿ ಹೀಗೆ ಅಕ್ರಮ ನಡೆದರೆ ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಇದೊಂದು ಅಸಮರ್ಥ ಸರ್ಕಾರ, ಲಂಚ- ಮಂಚದ ಸರ್ಕಾರದಲ್ಲಿ ಏನೇ ಅಕ್ರಮ ಮಾಡಿದರೂ ನಡೆಯುತ್ತಿದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ ಎಂದರು.

ನಮಗೆ ಬುದ್ಧಿ ಹೇಳಲು ಬರಬೇಡಿ: ಪ್ರಿಯಾಂಕ್‌ ಖರ್ಗೆ ತಿರುಗೇಟು

ವಿಧಾನಸೌಧವೇ ವ್ಯಾಪಾರ ಸೌಧವಾಗಿದೆ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಿಎಸ್‌ಐ ಹಗರಣದಲ್ಲಿ ಡೀಲ್‌ ಆಗಿಲ್ಲವೆ? ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆಯಲ್ಲೂ ಕನಿಷ್ಠ 600 ಹುದ್ದೆಗಳು 30ರಿಂದ 40 ಲಕ್ಷ ರು.ಗೆ ಮಾರಾಟವಾಗಿರುವ ಶಂಕೆಯನ್ನು ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ತಮ್ಮೊಂದಿಗೆ ಮಾತನಾಡುವಾಗ ವ್ಯಕ್ತಪಡಿಸಿದ್ದಾರೆ. ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಶೇ.40 ವ್ಯವಹಾರದಲ್ಲಿ ವಿಧಾನಸೌಧವನ್ನೇ ವ್ಯಾಪಾರ ಸೌಧ ಮಾಡಿಕೊಂಡವರಿಗೆ ಇದೆಲ್ಲ ಅರ್ಥವಾಗೋದಿಲ್ಲ ಎಂದು ತಿವಿದರು. ಜಾರಕಿಹೊಳಿ ಪ್ರಕರಣ ಪ್ರಸ್ತಾಪಿಸುತ್ತ ಯುವತಿಗೆ ಇಲ್ಲಿ ಮೋಸವಾಗಿಲ್ಲವೆ? ನೌಕರಿಗಾಗಿ ಮಂತ್ರಿ ಬಳಿ ಹೋದರೆ ಏನಾಯ್ತು ಎಂಬುದು ಹೇಳಬೇಕೆ? 

ಹೀಗಾಗಿ ಇದು ಲಂಚ ಹಾಗೂ ಮಂಟದ ಸರ್ಕಾರ ಎಂದು ತಮ್ಮ ಹೇಳಿಕೆಯನ್ನು ಬಲವಾಗಿ ಪ್ರತಿಪಾದಿಸಿಕೊಂಡರು. ಸಿಎಂ ತಾವೊಬ್ಬ ಕಾಮನ್‌ ಮ್ಯಾನ್‌ ಎಂದು ಹೇಳುತ್ತಾರೆ. ಇವರ ಅಸಮರ್ಥ ಆಡಳಿತದಿಂದಾಗಿ ಕಾಮನ್‌ ಮ್ಯಾನ್‌ ಸಂಕಟಪಡುತ್ತಿದ್ದಾರೆ ಎಂದೂ ಕುಟುಕಿದರು. ಯುವಕರು ದಾಳಿ ಮಾಡಲಿದ್ದಾರೆ: ದೇಶ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಏರಿಕೆಯಾಗುತ್ತಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಣೆ ಎಂದು ಆರೋಪಿಸಿದ ಖರ್ಗೆ, ಇತ್ತೀಚಿಗೆ ವಿದ್ಯಾರ್ಥಿ ಸಂಘಟನೆಯವರು ಎನ್ನಲಾದ ಯುವಕರು ಗೃಹ ಸಚಿವರ ಮನೆಯ ಮೇಲೆ ದಾಳಿ ನಡೆಸಿದಂತೆ ನಿರುದ್ಯೋಗಿ ಯುವಕರು ಸಿಎಂ ಕಚೇರಿಯ ಮೇಲೆ ದಾಳಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ತನಿಖೆ ಎಲ್ಲಿಗೆ ಬಂತು?: ಎಸ್‌ಡಿಎ ನೇಮಕಾತಿಗೆ ಸಂಬಂಧಿಸಿದಂತೆ 1323 ಹುದ್ದೆ ತುಂಬಲು ಸೆಪ್ಟೆಂಬರ್‌ 2021ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯಲ್ಲಿ ಕೂಡಾ ಅಭ್ಯರ್ಥಿಗಳು ಬ್ಲೂಟೂತ್‌ ಹಾಗೂ ಮೈಕ್ರೋಫೋನ್‌ ಬಳಸಿ ಅಕ್ರಮ ನಡೆಸಿದ್ದಾರೆ. ಕೇವಲ ಮೂವರು ಮಾತ್ರ ಡಿಬಾರ್‌ ಆಗಿದ್ದಾರೆ. ತನಿಖೆ ನಡೆದರೆ ಮತ್ತೆಷ್ಟುಅಭ್ಯರ್ಥಿಗಳು ಈ ರೀತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಲಿದೆ ಎಂದು ಸರ್ಕಾರದ ಅಧಿಕಾರಿಗಳ ಹೇಳಿಕೆ ಇದೆ. ಈ ತನಿಖೆ ಎಲ್ಲಿಗೆ ಬಂತು? 

ಪಿಎಸ್‌ಐ ಹಗರಣದದ ರೂವಾರಿ ಆರ್‌ಡಿ ಪಾಟೀಲ್‌ ತಾನೇ ನೀಡಿರುವ ಹೇಳಿಕೆಯಲ್ಲಿ ಅನೇಕ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿರೋದಾಗಿ ಹೇಳಿದ್ದರೂ ಈ ಸರ್ಕಾರ ತನಿಖೆಗೆ ಮುಂದಾಗದೆ ಸುಮ್ಮನಿದೆ ಯಾಕೆ ಎಂದು ಪ್ರಶ್ನಿಸಿದರು. ಪಿಎಸ್‌ ಎಸ್‌, ಕೆಪಿಟಸಿಎಲ್‌, ಪಿಡಬ್ಲೂಡಿ ಸೇರಿದಂತೆ ಹಗರಣ ನಡೆದಿರುವ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆಮಾಡುವಂತೆ ಅವರು ಆಗ್ರಹಿಸಿದರು. ರಾಜ್ಯ ಸರ್ಕಾರದ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಅಕ್ರಮ ಪರೀಕ್ಷೆಗಳ ಮೂಲಕ ಯುವಕ ಬಾಳಿಗೆ ಮುಳ್ಳಾಗಿರುವ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಚ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೆಪಿಟಿಸಿಎಲ್‌ ಪರೀಕ್ಷೆಯಲ್ಲೂ ಅಕ್ರಮದ ವಾಸನೆ: ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಹಗರಣದ ವಿಚಾರಣೆಯೇ ಇನ್ನೂ ಮುಗಿದಿಲ್ಲ. ಇದರ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಚೆಗೆ ನಡೆಸಿದ ಕೆಪಿಟಿಸಿಎಲ್‌ ಕಿರಿಯ ಸಹಾಯಕರು ಹುದ್ದೆ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ವಾಸನೆ ಬಂದಿದೆ. ಗೋಕಾಕ್‌ನಲ್ಲಿ ಅಭ್ಯರ್ಥಿಯನ್ನು ಬಂಧಿಸಿ ಆತನಿಂದ ಸ್ಮಾರ್ಚ್‌ ವಾಚ್‌ ಜಪ್ತಿ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಹೊರಗೆ ರವಾನಿಸಿದ್ದಾಗಿ ಆತ ಹೇಳಿದ್ದಾನೆಂದು ಪತ್ರಿಕೆಯಲ್ಲಿ ವರದಿಯಾಗಿದೆ. 

ಗೃಹ ಸಚಿವರ ಮನೆ ಮೇಲಿನ ದಾಳಿ ಕಾನೂನು ಕುಸಿತಕ್ಕೆ ಸಾಕ್ಷಿ: ಪ್ರಿಯಾಂಕ್‌ ಖರ್ಗೆ

ಹೀಗಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾದಂತೆಯೇ ಅಲ್ಲವೆ? ಸರ್ಕಾರ ಮರು ಪರೀಕ್ಷೆ ನಡೆಸುತ್ತಾ? ಎಂದು ಪ್ರಶ್ನಿಸಿದರು. ತಾವು ಹಲವು ಹುದ್ದೆ ಆಕಾಂಕ್ಷಿಗಳನ್ನು ಮಾತನಾಡಿಸಿದ್ದಾಗ ಅವರು ಒಟ್ಟು ನೇಮಕಾತಿಗೆ ಪರಿಗಣಿಸಿರುವ ಹುದ್ದೆಗಳ ಪೈಕಿ ನಿಷ್ಠ 600 ಹುದ್ದೆಗಳಿಗೆ 30ರಿಂದ 40 ಲಕ್ಷ ರು. ಡೀಲ್‌ ಆಗಿರೋ ಶಂಕೆ ಹೊರಹಾಕಿದ್ದಾರೆ. ಇದು 300 ಕೋಟಿ ರು. ಹಗರಣವಾದಂತಾಯ್ತಲ್ಲ. ಸರ್ಕಾರ ಯಾಕೆ ಮೌನವಾಗಿದೆ ಎಂದು ಪ್ರಶ್ನಿಸಿದರು.