Asianet Suvarna News Asianet Suvarna News

ನಮಗೆ ಬುದ್ಧಿ ಹೇಳಲು ಬರಬೇಡಿ: ಪ್ರಿಯಾಂಕ್‌ ಖರ್ಗೆ ತಿರುಗೇಟು

ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಾರಂಭಿಸಿದ್ದೇ ಬಿಜೆಪಿಯವರು. ಬಿಜೆಪಿಯವರು ಕಾಂಗ್ರೆಸ್ಸಿನವರಿಗೆ ಬುದ್ಧಿ ಹೇಳುವ ಬದಲು ತಮ್ಮ ಪಕ್ಷದವರಿಗೆ ಹೇಳಿಕೊಳ್ಳಲಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.

Congress Leader Priyank Kharge Slams To Bjp Leaders And Basavaraj Bommai gvd
Author
Bangalore, First Published Aug 11, 2022, 3:45 AM IST

ಬೆಂಗಳೂರು (ಆ.11): ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಾರಂಭಿಸಿದ್ದೇ ಬಿಜೆಪಿಯವರು. ಬಿಜೆಪಿಯವರು ಕಾಂಗ್ರೆಸ್ಸಿನವರಿಗೆ ಬುದ್ಧಿ ಹೇಳುವ ಬದಲು ತಮ್ಮ ಪಕ್ಷದವರಿಗೆ ಹೇಳಿಕೊಳ್ಳಲಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟಿಲ್‌ ಯತ್ನಾಳ್‌ ಅವರು 2500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಆಗಬಹುದು ಎಂದಿದ್ದರು. ಇದೀಗ ಮಾಜಿ ಶಾಸಕರೊಬ್ಬರು ಆ.15 ರೊಳಗಾಗಿ ಸಿಎಂ ಬದಲಾಗುತ್ತಾರೆ ಎಂದು ಹೇಳಿದ್ದಾರೆ. 

ಅಸಮಾಧಾನದ ಹೊಗೆ, ಮುಖ್ಯಮಂತ್ರಿ ಬದಲಾವಣೆ ವಿಚಾರ ಎದ್ದಿರುವುದು ಬಿಜೆಪಿ ವಲಯದಿಂದಲೇ ಹೊರತು ನಮ್ಮಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳು ಅತಿವೃಷ್ಟಿ ಪ್ರದೇಶಗಳಿಗೆ ಹೋಗಿ ವರದಿ ತೆಗೆದುಕೊಂಡು ಬನ್ನಿ ಎಂದು ಪದೇ ಪದೆ ಹೇಳುತ್ತಿದ್ದರೂ ಯಾವ ಮಂತ್ರಿಯೂ ಜಿಲ್ಲೆಗೆ ಹೋಗಿಲ್ಲ. ಮುಖ್ಯಮಂತ್ರಿಗಳೇ ಹೋಗಿ ಜಿಲ್ಲಾ ಮಂತ್ರಿಗಳಿಗೆ ವರದಿ ನೀಡುವ ಇತಿಹಾಸ ನಿರ್ಮಿಸಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಿಮ್ಮತ್ತು ನೀಡುವುವವರಿಲ್ಲ. ಹೀಗಾಗಿ ಈಶ್ವರಪ್ಪ ಅವರು ನಮಗೆ ಹೇಳುವ ಬದಲು ತಮ್ಮ ಪಕ್ಷದವರಿಗೆ ಬುದ್ಧಿ ಮಾತು ಹೇಳಲಿ ಎಂದು ಕಿಡಿಕಾರಿದರು.

ಗೃಹ ಸಚಿವರ ಮನೆ ಮೇಲಿನ ದಾಳಿ ಕಾನೂನು ಕುಸಿತಕ್ಕೆ ಸಾಕ್ಷಿ: ಪ್ರಿಯಾಂಕ್‌ ಖರ್ಗೆ

ಈವರೆಗಿನ ಎಲ್ಲ ಕೋಮುಗಲಭೆ, ಹತ್ಯೆ ನ್ಯಾಯಾಂಗ ತನಿಖೆ ನಡೆಸಿ: ‘ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ಮಾಡಬೇಕು. ಇದುವರೆಗಿನ ಎಲ್ಲ ಕೋಮುಗಲಭೆ ಹಾಗೂ ಕೋಮು ಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲಾ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ರಾಜ್ಯ ಕಾಂಗ್ರೆಸ್‌ ಒತ್ತಾಯಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ, ‘ರಾಜ್ಯದಲ್ಲಿ ಭ್ರಷ್ಟೋತ್ಸವ ನಿಲ್ಲಬೇಕಾದರೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. 

ಗೃಹ ಸಚಿವರು ಇಷ್ಟೆಲ್ಲಾ ಆದ ನಂತರ ರಾಜಕೀಯದಿಂದಲೇ ಸ್ವಯಂ ನಿವೃತ್ತಿ ಪಡೆಯುವುದು ಉತ್ತಮ’ ಎಂದು ಆಗ್ರಹಿಸಿದರು. ‘ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಬಿಜೆಪಿಗೆ ತಿರುಗುಬಾಣವಾಗಿದೆ. ಬಿಜೆಪಿ ಈ ಪ್ರಕರಣದಲ್ಲೂ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರಿಗೆ ಸತ್ಯದ ಅರಿವಾಗಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಕಾರು ಅಲುಗಾಡಿಸಿದ್ದಾರೆ. ಇವರು ಕೇವಲ ಕಾರಲ್ಲ. ರಾಜ್ಯ ಸರ್ಕಾರವನ್ನೇ ಅಲುಗಾಡಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕು’ ಎಂದು ಹೇಳಿದರು.

ಜನರ ರಕ್ಷಿಸದ ಸರ್ಕಾರ ಏಕೆ ಬೇಕು?: ಬಿಜೆಪಿಯ ಪ್ರವೀಣ್‌ ನೆಟ್ಟಾರು ಸಾವನ್ನು ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳದೆ ಮುಕ್ತ ತನಿಖೆ ನಡೆಸಬೇಕು. ಪ್ರತಿ ಬಾರಿಯೂ ಸಂತ್ರಸ್ತರು ಅಥವಾ ವಿರೋಧಪಕ್ಷಗಳನ್ನೇ ಹೊಣೆ ಮಾಡಿ ಪಲಾಯನವಾದ ಮಾಡಬಾರದು. ಜನರಿಗೆ ರಕ್ಷಣೆ ನೀಡಲಾಗದಿದ್ದರೆ ಈ ಸರ್ಕಾರ ಯಾಕೆ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು: ಪ್ರಿಯಾಂಕ್‌ ಚಾಟಿ

ಕಾರ್ಯಕರ್ತರನ್ನು ಬಳಸಿ ಬಿಸಾಕುವ ಬಿಜೆಪಿ: ಬಿಜೆಪಿಯವರು ತಮ್ಮ ಕಾರ್ಯಕರ್ತರ ಬಗ್ಗೆ ಯಾವ ರೀತಿ ಕಾಳಜಿ ಇದೆ ಎಂದು ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಅವರ ಸಹೋದರಿ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕಾರ್ಯಕರ್ತರನ್ನು ಬಳಸಿ ಬಿಸಾಡುವ ಪದ್ಧತಿ ಬಿಜೆಪಿಯಲ್ಲಿದೆ. ಹರ್ಷ ಹಂತಕರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ. ಹರ್ಷ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಿಲ್ಲ. ಬದಲಿಗೆ ಕೊರೋನಾದಿಂದ ಮೃತಪಟ್ಟವರಿಗೆ ನೀಡಬೇಕಿದ್ದ ನಿಧಿಯಿಂದ ನೀಡಲಾಗಿದೆ. ಇದು ಸರ್ಕಾರಕ್ಕೆ ಕಾರ್ಯಕರ್ತರ ಬಗ್ಗೆ ಇರುವ ಬದ್ಧತೆ ಎಂದರು.

Follow Us:
Download App:
  • android
  • ios