Karnataka Politics: ಕಾಂಗ್ರೆಸ್‌ನಲ್ಲಿ ಅಸಮಾಧಾನ: ಬಿಜೆಪಿ ಸೇರ್ತಾರಾ 'ಕೈ' ನಾಯಕ?
* ಅಸಮಾಧಾನವಾಗಿದ್ದು ನಿಜ, ಪಕ್ಷ ತೊರೆಯಲ್ಲ
* ಡಿಕೆಶಿ, ಸಲೀಂ ಅಹ್ಮದ್ ಭರವಸೆ ಮೇರೆಗೆ ಪಕ್ಷದಲ್ಲೇ ಉಳಿಯುವೆ: ಪ್ರಕಾಶ ಕ್ಯಾರಕಟ್ಟಿ
* ಕ್ಯಾರಕಟ್ಟಿ ಆರೋಪ ಸತ್ಯಕ್ಕೆ ದೂರ
ಹುಬ್ಬಳ್ಳಿ(ಫೆ.16): ಕಾಂಗ್ರೆಸ್(Congress) ತೊರೆಯುವ ತಮ್ಮ ನಿರ್ಧಾರದಿಂದ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ(Prakash Kyarakatti) ಹಿಂದೆ ಸರಿದಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್(Lakshmi Hebbalkar) ಅವರು ಬೆಳಗಾವಿಯಲ್ಲಷ್ಟೇ ರಾಜಕಾರಣ ಮಾಡಲಿ. ಇಲ್ಲಿ ರಾಜಕಾರಣ ಮಾಡಬಾರದು ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು 5 ಬಾರಿ ಪಾಲಿಕೆ(HDMC) ಸದಸ್ಯನಾಗಿದ್ದೇನೆ. ಒಂದು ಬಾರಿ ಮೇಯರ್ ಕೂಡ ಆಗಿದ್ದೇನೆ. ಆದರೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ(Election) ನನ್ನನ್ನು ನಮ್ಮ ಪಕ್ಷದವರೇ ಸೋಲಿಸಿದರು ಎಂದು ಕಿಡಿಕಾರಿದರು.
Hijab Row: ಹಿಜಾಬ್ ಕಾಂಗ್ರೆಸ್ ನಿಲುವುವೇನು?: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿನ(Congress) ವಾತಾವರಣ ನೋಡಿ ನಾನು ಬಿಜೆಪಿ(BJP) ಸೇರಲು ನಿರ್ಧರಿಸಿದ್ದೆ. ಫೆ. 26ಕ್ಕೆ ಬಿಜೆಪಿ ಸೇರುವವನಿದ್ದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್(Saleem Ahmed) ನನ್ನೊಂದಿಗೆ ಚರ್ಚಿಸಿದ್ದಾರೆ. ನನಗಾಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ಹೇಳಿದ್ದಾರೆ. ಅವರ ಭರವಸೆ ಮೇರೆಗೆ ನಾನು ಕಾಂಗ್ರೆಸ್ ಬಿಡದಿರಲು ನಿರ್ಧರಿಸಿದ್ದು ಇಲ್ಲಿಯೇ ಮುಂದುವರಿಯುತ್ತೇನೆ ಎಂದರು.
ರಜತ್ ಹೈಕಮಾಂಡ್:
ಮೊದಲೆಲ್ಲ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ರಜತ್ ಉಳ್ಳಾಗಡ್ಡಿಮಠ ಅವರು ಲಕ್ಷ್ಮಿ ಹೆಬ್ಬಾಳಕರ್ ಅವರ ಅಳಿಯನಾದನು. ರಜತ್‌ನೇ ಇಲ್ಲಿನ ಹೈಕಮಾಂಡ್(High Commad) ಆದಂತಾಗಿದೆ. ಹೆಬ್ಬಾಳಕರ್ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರಿಗೆ ನಾನು ಹೇಳುವುದಿಷ್ಟೇ. ಅಕ್ಕ ನೀವು ಶಾಸಕರಾಗಿರುವವರು. ನಿಮ್ಮ ಜಿಲ್ಲೆ ಬೆಳಗಾವಿಯಲ್ಲಷ್ಟೇ ರಾಜಕಾರಣ ಮಾಡಿ. ಧಾರವಾಡ(Dharwad) ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೈ ಹಾಕಬೇಡಿ. ಇಲ್ಲಿ ಇನ್ನೂ ಮುಖಂಡರು ಇದ್ದಾರೆ. ಇವರಾರಯರು ಸತ್ತಿಲ್ಲ ಎಂದರು.
ನನಗೆ ಪಾಲಿಕೆ ಟಿಕೆಟ್ ಸಿಗದಂತೆ ನೋಡಿಕೊಂಡಿದ್ದರು. ಕೊನೆಕ್ಷಣದಲ್ಲಿ ನಾನು ಪಕ್ಷ ಬಿಟ್ಟು ತೆರಳುತ್ತೇನೆ ಎಂದಾಗಷ್ಟೇ ನನಗೆ ಟಿಕೆಟ್ ಕೊಟ್ಟಿದ್ದಾರೆ. ಹೆಬ್ಬಾಳಕರ್ ಸುಖಾಸುಮ್ಮನೆ ಹಸ್ತಕ್ಷೇಪ ಮಾಡುತ್ತಾರೆ. ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರನ್ನು ಮುಂದಿಟ್ಟುಕೊಂಡು ಪಕ್ಷದಲ್ಲಿ ಒಡಕು ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿನ ನಾಯಕರು ಕೂಡ ಹೆಬ್ಬಾಳಕರ್ ಅವರ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್ ಬಿಡಲು ನಿರ್ಧರಿಸಿದ್ದೆ. ಇದೀಗ ಡಿ.ಕೆ. ಶಿವಕುಮಾರ, ಸಲೀಂಅಹ್ಮದ್ ಹೇಳಿದ್ದರಿಂದ ಉಳಿಯಲು ನಿರ್ಧರಿಸಿದ್ದೇನೆ. ನಾನು ಕೂಡಾ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹು-ಧಾ ಪೂರ್ವ ವಿಧಾನಸಭೆಗೆ ಟಿಕೆಟ್ ಕೇಳಿದ್ದು, ಅವರು ಪರಿಶೀಲಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕ್ಯಾರಕಟ್ಟಿ ಆರೋಪ ಸತ್ಯಕ್ಕೆ ದೂರ
ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ತಮ್ಮ ಮೇಲೆ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿವೆ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ(Rajat Ullagaddimath) ತಿಳಿಸಿದ್ದಾರೆ.
Karnataka Politics: ಎಲೆಕ್ಷನ್‌ಗೂ ಮುನ್ನ ಪಕ್ಷಾಂತರ ಪರ್ವ ಆರಂಭ..!
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾನು ಕಾಂಗ್ರೆಸ್ ಪಕ್ಷದ ಶಿಸ್ತುಬದ್ಧ ಸಾಮಾನ್ಯ ಕಾರ್ಯಕರ್ತ. ಪ್ರಕಾಶ್ ಕ್ಯಾರಕಟ್ಟಿ ಅವರು ಹಿರಿಯ ಕಾಂಗ್ರೆಸ್ ನಾಯಕರಾಗಿದ್ದಾರೆ. ಅವರಿಂದ ನಾನು ಕಲಿಯುವುದು ಬಹಳಷ್ಟಿದೆ ಎಂದು ತಿಳಿಸಿದ್ದಾರೆ.
ಅವರು ಯುವ ಕಾಂಗ್ರೆಸ್‌ನಲ್ಲಿ ನನ್ನ ತಂದೆಯೊಂದಿಗೆ ಕೆಲಸ ಮಾಡಿದ್ದಾರೆ. ಅವರ ಸಂಘಟನಾ ಶಕ್ತಿ ಬಗ್ಗೆ ನನಗೆ ಅಪಾರ ಗೌರವವಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ, ವಾರ್ಡ್ ಸಂಖ್ಯೆ 52 ರಲ್ಲಿ ಅವರಿಗೆ ಬಿ-ಫಾರ್ಮ್ ಹಸ್ತಾಂತರಿಸಲು ನನಗೆ ಅವಕಾಶ ಸಿಕ್ಕಿತು. ಅದು ನನ್ನ ಸೌಭಾಗ್ಯ ಎಂದು ಭಾವಿಸಿದೆ. ಅವರು ಬಿಜೆಪಿ ಸೇರದೇ ಇರುವುದು ನನಗೆ ಖುಷಿ ತಂದಿದೆ ಎಂದು ತಿಳಿಸಿದ್ದಾರೆ.