ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ಭಾರತೀಯ ಸೇನೆಯ ಹೋರಾಟದ ಸಾಮರ್ಥ್ಯವನ್ನು ದುರ್ಬಲಗೊಳಿಸಲಿದೆ. ಸೇನೆಗೆ ಸೇರುವ ಯುವಕರ ಆಸಕ್ತಿ ಕುಂದಿಸಲಿದ್ದು ಪರಿಣಾಮ ದೇಶದ ಭದ್ರತೆಗೇ ಅಪಾಯ ತರಲಿದೆ.
ಬೆಂಗಳೂರು (ಜೂ.27): ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ಭಾರತೀಯ ಸೇನೆಯ ಹೋರಾಟದ ಸಾಮರ್ಥ್ಯವನ್ನು ದುರ್ಬಲಗೊಳಿಸಲಿದೆ. ಸೇನೆಗೆ ಸೇರುವ ಯುವಕರ ಆಸಕ್ತಿ ಕುಂದಿಸಲಿದ್ದು ಪರಿಣಾಮ ದೇಶದ ಭದ್ರತೆಗೇ ಅಪಾಯ ತರಲಿದೆ. ಹಾಗಾಗಿ ಕೂಡಲೇ ಈ ಯೋಜನೆಯನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಲ್ಲಂ ರಾಜು ಆಗ್ರಹಿಸಿದ್ದಾರೆ.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸೇನೆಯ ಹೋರಾಟದ ಸಾಮರ್ಥ್ಯ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ಸರ್ಕಾರವಿರಲಿ ರಾಜಿಯಾಗಬಾರದು. ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಅಗ್ನಿಪಥ್ ಯೋಜನೆ ದೇಶದ ಭದ್ರತೆ ಮತ್ತು ಸೇನೆಯ ಹೋರಾಟದ ಸಾಮರ್ಥ್ಯದ ವಿಚಾರದಲ್ಲಿ ಭಾರೀ ಹಿನ್ನಡೆ, ಅಪಾಯಕ್ಕೆ ಎಡೆಮಾಡಿಕೊಡಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಗೊಳಿಸಬಾರದು ಎಂದರು.
ಕಾಂಗ್ರೆಸ್ಸಿಗರ ಮಕ್ಕಳನ್ನು ಸೇನೆಗೆ ಸೇರಿಸಿ ಅಂತ ಕೇಳಿಲ್ಲ: ಕಟೀಲ್
ಸೇನಾ ಸೇವೆ ಗುತ್ತಿಗೆ ಏಕೆ?: ಕಳೆದ ಎರಡು ವರ್ಷಗಳಿಂದ ಸೇನೆ ನೇಮಕಾತಿ ನಡೆಸದಿರುವುದು ಆಗಾಗಲೇ ಸೇನೆ ಸಾಮರ್ಥ್ಯದ ಮೇಲೆ ಪ್ರಭಾವ ಬೀರಿದೆ. ಈಗ ಅಗ್ನಿಪಥ್ ಯೋಜನೆ ಮೂಲಕ ಸೇನೆ ಸೇರುವವರಿಗೆ ಕೇವಲ 6 ತಿಂಗಳ ಕಾಲ ತರಬೇತಿ ನೀಡಿ ಕೇವಲ 4 ವರ್ಷಗಳ ಸೇವಾವಧಿ ಸೀಮಿತಗೊಳಿಸಲಾಗುತ್ತಿದೆ. ತನ್ಮೂಲಕ ಸೇನೆಯ ಸೇವೆಯನ್ನು ಗುತ್ತಿಗೆ ಕೆಲಸವಾಗಿ ಮಾಡಲು ಸರ್ಕಾರ ಹೊರಟಿದೆ. ಇದರಿಂದ ಶೇ.25ರಷ್ಟುಯೋಧರನ್ನು ಉಳಿಸಿಕೊಂಡು ಉಳಿದ 75%ರಷ್ಟುಯೋಧರನ್ನು ಸೇನೆಯಿಂದ ಹೊರಹಾಕುವುದು ದೊಡ್ಡ ಹಿನ್ನಾರ ನಡೆದಿದೆ ಎಂದು ಆರೋಪಿಸಿದರು.
ಕರಾಳ ಕೃಷಿ ಕಾಯ್ದೆ ಮಾದರಿಯಲ್ಲೇ ಈ ಯೋಜನೆಯನ್ನು ಕೇಂದ್ರ ಸರ್ಕಾರ ಏಕಾಏಕಿ ಜಾರಿಗೊಳಿಸಲು ಮುಂದಾಗಿದೆ. ಯಾರೊಂದಿಗೂ ಚರ್ಚಿಸದೆ, ಆಲೋಚನೆ ನಡೆಸಿದೆ ಸಂಸತ್ತಿನಲ್ಲೂ ಚರ್ಚೆಗೆ ಆಸ್ಪದ ನೀಡದೆ ಜಾರಿಗೆ ಮುಂದಾಗಿದೆ. ಇದರ ವಿರುದ್ಧ ದೇಶಾದ್ಯಂತ ಎದ್ದಿರುವ ಜನಾಭಿಪ್ರಾಯಕ್ಕೂ ಬೆಲೆ ಕೊಡದೆ ಯೋಜನೆ ಜಾರಿಗೆ ಮುಂದಾಗಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಟೀಕಿಸಿದರು.
ಅಗ್ನಿಪಥ್ ಯೋಜನೆ ಜಾರಿಯಾದ್ರೆ ಯುವಕರೇ ಸರ್ಕಾರದ ಸಮಾಧಿ ಕಟ್ತಾರೆ: ರೈತ ಮುಖಂಡರು
ಭಾರತವು ಚೀನಾದಿಂದ ನಿರಂತದ ಸವಾಲು ಎದುರಿಸುತ್ತಿದ್ದು, ಪಶ್ಚಿಮ ಗಡಿಭಾಗದಲ್ಲೂ ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ಸೇನೆಯನ್ನು ಬಲಪಡಿಸಬೇಕು. ಆದರೆ, ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಸೇನೆಯ ಸಾಮರ್ಥ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಅಕ್ಷಮ್ಯ. ಇದರಿಂದ ಮುಂದೆ ಭಾರೀ ಕೆಟ್ಟಪರಿಣಾಮ ದೇಶಕ್ಕೆ ಎದುರಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತು ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.
