Asianet Suvarna News Asianet Suvarna News

Mandya: ಜೆಡಿಎಸ್‌ ನಿರ್ದೇಶನದಂತೆ ಜಿಲ್ಲೆಯಲ್ಲಿ ಆಡಳಿತ: ಚಲುವರಾಯಸ್ವಾಮಿ

ಬಿಜೆಪಿ ಸರ್ಕಾರ ಮತ್ತು ಸಚಿವರು ಜೆಡಿಎಸ್‌ ನಿರ್ದೇಶನದಂತೆ ಜಿಲ್ಲೆಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಿಸಿದರು. ಸ್ಥಳೀಯವಾಗಿ ಅನೇಕ ಕಡೆ ಜೆಡಿಎಸ್‌-ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿವೆ. 

Congress Leader N Cheluvarayaswamy Hits Out Bjp and Jds At Mandya gvd
Author
First Published Sep 15, 2022, 11:05 AM IST

ಮಂಡ್ಯ (ಸೆ.15): ಬಿಜೆಪಿ ಸರ್ಕಾರ ಮತ್ತು ಸಚಿವರು ಜೆಡಿಎಸ್‌ ನಿರ್ದೇಶನದಂತೆ ಜಿಲ್ಲೆಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಿಸಿದರು. ಸ್ಥಳೀಯವಾಗಿ ಅನೇಕ ಕಡೆ ಜೆಡಿಎಸ್‌-ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿವೆ. ಮೈಸೂರು ಮಹಾನಗರ ಪಾಲಿಕೆ, ಮಂಡ್ಯ ಡಿಸಿಸಿ ಬ್ಯಾಂಕ್‌, ಜಿಲ್ಲಾ ಹಾಲು ಒಕ್ಕೂಟದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಹಾಗಾಗಿ ಬಿಜೆಪಿ ಸರ್ಕಾರದಲ್ಲಿರುವವರು ಜೆಡಿಎಸ್‌ನವರ ಮಾರ್ಗದರ್ಶನದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರಿಗೆ ಹೇಳಿದರು.

ಮನ್‌ಮುಲ್‌ ನೀರು ಮಿಶ್ರಿತ ಹಾಲು ಹಗರಣದ ತನಿಖೆ ಹಳಿ ತಪ್ಪಲು ಜೆಡಿಎಸ್‌ನವರೇ ಕಾರಣ. ಈಗ ಅದರ ಬಗ್ಗೆ ಯಾರೊಬ್ಬರೂ ಮಾತನಾಡುತ್ತಲೇ ಇಲ್ಲ. ಮೈಷುಗರ್‌ ಕಾರ್ಖಾನೆ ನಾಲ್ಕು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಹೊಸ ಕಾರ್ಖಾನೆಗೆ 400 ಕೋಟಿ ರು. ತೆಗೆದಿರಿಸಿದ್ದೆ ಎಂದು ಹೇಳುವ ಮಾಜಿ ಸಿಎಂ ಕುಮಾರಸ್ವಾಮಿ, ಆ ಹಣದಲ್ಲಿ ಪುನಶ್ಚೇತನ ಮಾಡಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದಾಕಾಲ ಜಿಲ್ಲೆಗೆ 8 ಸಾವಿರ ಕೋಟಿ ರು. ಅನುದಾನ ನೀಡಿದ್ದೆ ಎಂದು ಹೇಳುತ್ತಿರುತ್ತಾರೆ. ಅದರ ಕಾರ್ಯಯೋಜನೆಯ ರೂಪುರೇಷೆ ಸಿದ್ಧಗೊಂಡಿದ್ದರೆ ಅದನ್ನು ಬಿಜೆಪಿಯವರ ಮೂಲಕ ಜಾರಿಗೊಳಿಸಬಹುದಿತ್ತು. ಸುಳ್ಳು ಹೇಳಿಕೊಂಡು ಸುಮ್ಮನೆ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಬಾರದು ಎಂದು ನುಡಿದರು.

ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ: ಸುಮಲತಾ ವಿರುದ್ಧ ಅನ್ನದಾನಿ ಕಿಡಿ

25 ಕೋಟಿ ರು. ಅನುದಾನ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಮೂಲಕ ಎಲ್ಲಾ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಅದಕ್ಕಾಗಿ ಜಿಲ್ಲೆಯೊಳಗೆ ಆಡಳಿತ ಹಳಿ ತಪ್ಪಿದ್ದರೂ ಯಾವ ಶಾಸಕರೂ ಮಾತನಾಡುತ್ತಲೇ ಇಲ್ಲ. ಜಿಲ್ಲೆಯೊಳಗೆ ಆಡಳಿತ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ಅನುಮಾನಗಳು ಮೂಡಿವೆ ಎಂದು ಬೇಸರದಿಂದ ಹೇಳಿದರು.

ಜಿಲ್ಲೆಯೊಳಗೆ ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳೆಲ್ಲವೂ ಹಾಳಾಗಿದೆ. ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ಶಾಸಕರಿಗೆ ನೀಡಿರುವ 25 ಕೋಟಿ ರು. ಹಣವನ್ನು ಹಳ್ಳಿ ರಸ್ತೆಗಳ ಅಭಿವೃದ್ಧಿಗೆ ಬಳಸಲಿ. ರೈತರು ಕಬ್ಬು ಸಾಗಾಣೆಗೆ ಅನುಕೂಲ ಮಾಡಿಕೊಡಲಿ. ಸರ್ಕಾರ ಕೊಟ್ಟ ಹಣವನ್ನು ಶಾಸಕರು ಎಲ್ಲಿಗೆ ಬಳಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅಧಿಕಾರಿಗಳ ವರ್ಗಾವಣೆಗೆ ಮುತುವರ್ಜಿ ತೋರಿಸುತ್ತಿರುವ ಸರ್ಕಾರ ಅಭಿವೃದ್ಧಿ ಹಾಗೂ ಮಳೆಯಿಂದ ಆದ ಅನಾಹುತಗಳನ್ನು ನಿವಾರಿಸುವ ಹೊಣೆಗಾರಿಕೆ ಹೊರುತ್ತಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಮಂತ್ರಿ ಯಾರು?: ಪ್ರಸ್ತುತ ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ನಾರಾಯಣಗೌಡರು ಅಘೋಷಿತ ಜಿಲ್ಲಾ ಉಸ್ತುವಾರಿ ಮಂತ್ರಿಯಂತೆ ಓಡಾಡುತ್ತಿದ್ದಾರೆ. ಕೆ.ಗೋಪಾಲಯ್ಯನವರು ಜಿಲ್ಲೆಯಿಂದ ದೂರವೇ ಉಳಿದಿದ್ದಾರೆ. ಅಭಿವೃದ್ಧಿ ಕೆಲಸಗಳ ಕಡೆ ಅವರಿಗೆ ಗಮನವೇ ಇಲ್ಲ ಎಂದು ದೂಷಿಸಿದರು. ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಎಲ್ಲಿಯೂ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಎಲ್ಲೆಡೆ ಅದ್ವಾನ ಆಗಿದೆ. ಆರು ಜನ ಶಾಸಕರು, ಮಂತ್ರಿಗಳಿದ್ದರೂ ಯಾರೊಬ್ಬರೂ ಪ್ರಶ್ನೆ ಮಾಡುತ್ತಿಲ್ಲ. ಹೀಗಾದರೆ ಅಭಿವೃದ್ಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ: ಜೆಡಿಎಸ್‌ ಶಾಸಕರಿಗೆ ಸಂಸದೆ ಸುಮಲತಾ ಬಹಿರಂಗ ಆಹ್ವಾನ

ಎಕ್ಸಿಟ್‌-ಎಂಟ್ರಿ ಪಾಯಿಂಟ್‌ ಎಲ್ಲಿದೆ?: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯ ನಗರಕ್ಕೆ ಎಕ್ಸಿಟ್‌-ಎಂಟ್ರಿ ಪಾಯಿಂಟ್‌ ಎಲ್ಲಿ ಕೊಟ್ಟಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇದನ್ನು ಸಚಿವರು, ಶಾಸಕರು ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಶ್ರೀರಂಗಪಟ್ಟಣ ಬಳಿ ಎಂಟ್ರಿ ಪಾಯಿಂಟ್‌ ಕೊಟ್ಟು ನಿಡಘಟ್ಟ ಬಳಿ ಎಕ್ಸಿಟ್‌ ಪಾಯಿಂಟ್‌ ಕೊಟ್ಟರೆ ಹೇಗೆ. ಹೆದ್ದಾರಿ ಕಾಮಗಾರಿಯಿಂದ ಜನರಿಗೆ ಸಮಸ್ಯೆಯಾಗುತ್ತಿದ್ದರೂ ಶಾಸಕರಾದವರು ಏಕೆ ಪ್ರಶ್ನಿಸುತ್ತಿಲ್ಲ ಎಂದು ದೂರಿದರು. ಹೆದ್ದಾರಿ ಕಾಮಗಾರಿಯಲ್ಲಿ ಕಮಿಷನ್‌ ವಿಚಾರವಾಗಿ ಜೆಡಿಎಸ್‌ ಶಾಸಕರು ಮತ್ತು ಸಂಸದರ ಕೆಸರೆರಚಾಟದ ಬಗ್ಗೆ ಕೇಳಿದಾಗ, ಯಾರಾದರೂ ಕಮಿಷನ್‌ ಪಡೆದುಕೊಳ್ಳಲಿ. ಕಾಮಗಾರಿಯಿಂದ ಜನಸಾಮಾನ್ಯರಿಗೆ, ಗ್ರಾಮೀಣ ಭಾಗದ ರೈತರಿಗೆ ತೊಂದರೆಯಾಗದಿದ್ದರೆ ಅಷ್ಟೇ ಸಾಕು ಎಂದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ಇತರರಿದ್ದರು.

Follow Us:
Download App:
  • android
  • ios